ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ | ಮಗನ ಕರೆತರಲು ಸ್ಕೂಟರ್‌ನಲ್ಲೇ 1,400 ಕಿ.ಮೀ. ಪ್ರಯಾಣಿಸಿದ ತಾಯಿ

Last Updated 10 ಏಪ್ರಿಲ್ 2020, 13:07 IST
ಅಕ್ಷರ ಗಾತ್ರ

ಹೈದರಾಬಾದ್‌: ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆ, ತೆಲಂಗಾಣದಲ್ಲಿರುವ ತಾಯಿ; ಪಕ್ಕದ ಆಂಧ್ರ ಪ್ರದೇಶ ರಾಜ್ಯದ ನೆಲ್ಲೂರಿನಲ್ಲಿ ಸಿಲುಕಿರುವ ಮಗ. ಎರಡನೇ ಯೋಚನೆ ಮಾಡದೆ ಮಗನ ಕರೆತರಲು ಸ್ಕೂಟರ್‌ ಏರಿ 1,400 ಕಿ.ಮೀ. ಪ್ರಯಾಣ ಶುರು ಮಾಡಿಯೇ ಬಿಟ್ಟರು ಆ ತಾಯಿ.

ತೆಲಂಗಾಣದ ಬೋಧನ್‌ನಲ್ಲಿ ಶಿಕ್ಷಕಿಯಾಗಿರುವ ರಝಿಯಾ ಬೇಗಂ (48) ಸ್ಥಳೀಯ ಪೊಲೀಸರ ಅನುಮತಿ ಪಡೆದು ಸೋಮವಾರ ಏಕಾಂಗಿಯಾಗಿ ಸ್ಕೂಟರ್‌ ಸವಾರಿ ಹೊರಟರು. ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿದ್ದ ಮಗನನ್ನು ಅದೇ ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಬುಧವಾರ ತೆಲಂಗಾಣಕ್ಕೆ ಹಿಂದಿರುಗಿದರು. ನೂರಾರು ಕಿಲೋ ಮೀಟರ್‌ಗಳ ಈ ಪ್ರಯಾಣವು ಆಗಾಗ್ಗೆ ಬೈಕ್‌ ರೈಡ್‌ ನಡೆಸುವವರೆಗೂ ಸುಲಭದ್ದಾಗಿರಲಿಲ್ಲ. ಮಗನಾಗಿ ತಾಯಿ ತೋರಿದ ದೃಢತೆ ಅಸಾಧಾರಣವಾದುದು.

'ಸಣ್ಣ ಸ್ಕೂಟರ್‌ನಲ್ಲಿ ಮಹಿಳೆಯೊಬ್ಬಳಿಗೆ ಅದು ಅತ್ಯಂತ ಕಠಿಣ ಪ್ರಯಾಣವೇ ಆಗಿತ್ತು. ಆದರೆ, ನನ್ನ ಮಗನನ್ನು ಕರೆತರಬೇಕೆಂಬ ಸಂಕಲ್ಪದಿಂದಾಗಿ ನನ್ನ ಭಯವೆಲ್ಲ ದೂರವಾಯಿತು. ರೋಟಿಗಳನ್ನು ಬುತ್ತಿ ಕಟ್ಟಿಕೊಂಡೆ, ಅದರಿಂದ ಮುಂದೆ ಸಾಗಲು ಅನುವಾಯಿತು. ವಾಹನಗಳ ಸಂಚಾರ ಇರಲಿಲ್ಲ ಹಾಗೂ ರಸ್ತೆಗಳಲ್ಲಿ ಜನರ ಓಡಾಟವಿಲ್ಲದೆ ರಾತ್ರಿ ಸಮಯ ಭಯಂಕರವಾಗಿ ಕಂಡಿತು ' ಎಂದು ರಝಿಯಾ ಪ್ರಯಾಣದ ಅನುಭವ ಹಂಚಿಕೊಂಡಿದ್ದಾರೆ.

ಹೈದರಾಬಾದ್‌ನಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ನಿಜಾಮಾಬಾದ್‌ನ ಸರ್ಕಾರಿ ಶಾಲೆಯೊಂದರ ಮುಖ್ಯಶಿಕ್ಷಕಿಯಾಗಿ ರಝಿಯಾ ಸೇವೆ ಸಲ್ಲಿಸುತ್ತಿದ್ದಾರೆ.

ರಝಿಯಾ 15 ವರ್ಷಗಳ ಹಿಂದೆಯೇ ಪತಿಯನ್ನು ಕಳೆದು ಕೊಂಡವರು. ಅವರ ದೊಡ್ಡ ಮಗ ಇಂಜಿನಿಯರಿಂಗ್‌ ಪದವೀಧರ ಹಾಗೂ ವೈದ್ಯನಾಗುವ ಆಕಾಂಕ್ಷೆ ಹೊಂದಿರುವ 19 ವರ್ಷ ವಯಸ್ಸಿನ ನಿಜಾಮುದ್ದೀನ್‌ ಎರಡನೇ ಮಗ. ಮಾರ್ಚ್‌ 12ರಂದು ನಿಜಾಮುದ್ದೀನ್‌ ತನ್ನ ಸ್ನೇಹಿತನನ್ನು ನೆಲ್ಲೂರಿನ ರೆಹಮತಾಬಾದ್‌ಗೆ ಬಿಟ್ಟು, ಅಲ್ಲಿಯೆ ಉಳಿದಿದ್ದರು. ಕೆಲವೇ ದಿನಗಳಲ್ಲಿ ಕೊರೊನಾ ವೈರಸ್‌ ಸೋಂಕು ವ್ಯಾಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ಲಾಕ್‌ಡೌನ್‌ ಘೋಷಣೆಯಾಯಿತು. ಆತ ಅಲ್ಲಿಂದ ಮರಳಲು ಸಾಧ್ಯವಾಗಲಿಲ್ಲ.

ಮಗನೊಂದಿಗೆ ಮಾತನಾಡಿದ ರಝಿಯಾಗೆ ತೀವ್ರ ಯಾತನೆಯಾಗಿತ್ತು. ನಿಜಾಮುದ್ದೀನ್‌ ಮನೆಗೆ ಮರಳಬೇಕೆಂದು ಪರಿತಪಿಸುತ್ತಿದ್ದ, ಆತನನ್ನು ತಾನೇ ಕರೆ ತರಲು ನಿರ್ಧರಿಸಿದರು. ಮೊದಲ ಮಗನನ್ನು ಕಳುಹಿಸಲು ರಝಿಯಾಗೆ ಹೆದರಿಕೆ ಉಂಟಾಗಿತ್ತು. ಆತ ಬೈಕ್‌ ಸವಾರಿ ಹೊರಟರೆ, ಜಾಲಿ ರೈಡ್‌ ಮಾಡುತ್ತಿರುವುದಾಗಿ ಪೊಲೀಸರು ತಪ್ಪಾಗಿ ತಿಳಿದು ಬಂಧಿಸುವ ಸಾಧ್ಯತೆ ಇತ್ತು.

ಕಾರು ತೆಗೆದುಕೊಂಡು ಹೋಗಲು ಯೋಚಿಸಿದರಾದರೂ, ಅನಂತರ ಯೋಜನೆ ಬದಲಿಸಿ, ದ್ವಿಚಕ್ರ ವಾಹನದಲ್ಲಿಯೇ ಸಾಗಲು ನಿರ್ಧರಿಸಿದರು. ಏಪ್ರಿಲ್‌ 6ರಂದು ಬೆಳಿಗ್ಗೆ ಪ್ರಯಾಣ ಆರಂಭಿಸಿದ ರಝಿಯಾ, ಮಾರನೆಯ ದಿನ ಮಧ್ಯಾಹ್ನ ನೆಲ್ಲೂರ್‌ ತಲುಪಿದರು. ಮಗನನ್ನು ಭೇಟಿಯಾಗಿ ಆತನನ್ನು ಕರೆದುಕೊಂಡು ಅದೇ ದಿನ ಊರು ಬೋಧನ್‌ನತ್ತ ಪ್ರಯಾಣ ಶು‌ರು ಮಾಡಿ ಏಪ್ರಿಲ್‌ 8ರಂದು ಸಂಜೆ ಮನೆಗೆ ತಲುಪಿದರು.

ಇಡೀ ಪ್ರಯಾಣದಲ್ಲಿ ಹಸಿವು ನೀಗಿಸಿದ್ದು ಕಟ್ಟಿಕೊಂಡಿದ್ದ ರೋಟಿಗಳು. ಆಗಾಗ್ಗೆ ಪೆಟ್ರೋಲ್‌ ಹಾಕಿಸಿಕೊಳ್ಳಲು ಹಾಗೂ ಬಾಯಾರಿಕೆ ತಣಿಸಲಷ್ಟೇ ಸ್ಕೂಟರ್‌ ಪ್ರಯಾಣಕ್ಕೆ ವಿರಾಮ ನೀಡುತ್ತಿದ್ದರು. 12ನೇ ತರಗತಿ ಪೂರೈಸಿರುವ ನಿಜಾಮುದ್ದೀನ್‌, ಎಂಬಿಬಿಎಸ್‌ ಪ್ರವೇಶ ಪರೀಕ್ಷೆಗಾಗಿ ತರಬೇತಿ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT