ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಗೆ ಒತ್ತು | ಬೆಂಬಲ ಬೆಲೆ ಹೆಚ್ಚಳ, ಕೇಂದ್ರ ಸಂಪುಟ ಸಭೆಯಲ್ಲಿ ತೀರ್ಮಾನ

Last Updated 2 ಜೂನ್ 2020, 1:20 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸಚಿವ ಸಂಪುಟವು ಮುಂಗಾರು ಹಂಗಾಮಿನ 14 ಕೃಷಿ ಉತ್ಪನ್ನಗಳ ಬೆಂಬಲ ಬೆಲೆಯನ್ನು ಹೆಚ್ಚಿಸಲು ತೀರ್ಮಾನಿಸಿದೆ.

ಜತೆಗೆ, ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಉದ್ದೇಶಕ್ಕಾಗಿ ಪಡೆದ ಗರಿಷ್ಠ ₹3 ಲಕ್ಷವರೆಗಿನ ಅಲ್ಪಾವಧಿ ಕೃಷಿ ಸಾಲದ ಮರುಪಾವತಿ ಅವಧಿಯನ್ನು ಆಗಸ್ಟ್‌ 31ರವರೆಗೆ ವಿಸ್ತರಿಸಲು ತೀರ್ಮಾನಿಸಿದೆ.

‘ಕೃಷಿ ವೆಚ್ಚಗಳು ಮತ್ತು ಬೆಲೆ ಆಯೋಗದ (ಸಿಎಪಿಸಿ) ಶಿಫಾರಸುಗಳ ಆಧಾರದಲ್ಲಿ 2020–21ನೇ ಸಾಲಿನ ಮುಂಗಾರು ಹಂಗಾಮಿನ 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರಿಂದಾಗಿ ಕೃಷಿಗೆ ಮಾಡಿರುವ ವೆಚ್ಚಕ್ಕಿಂತ ಶೇ 50ರಿಂದ 83ರಷ್ಟು ಹೆಚ್ಚಿನ ಆದಾಯ ಗಳಿಸಲು ರೈತರಿಗೆ ಸಾಧ್ಯವಾಗಲಿದೆ. ಇದಲ್ಲದೆ ಸಕಾಲದಲ್ಲಿ ಸಾಲ ಮರುಪಾವತಿಸುವ ರೈತರಿಗೆ ಶೇ 3ರಷ್ಟು ಪ‍್ರೋತ್ಸಾಹ ಧನ ನೀಡಲು ತೀರ್ಮಾನಿಸಲಾಗಿದೆ. ಇದರಿಂದಾಗಿ ಕಡಿಮೆ ವಾರ್ಷಿಕ ಬಡ್ಡಿದರದಲ್ಲಿ ಸಾಲ ಪಡೆಯಲು ರೈತರಿಗೆ ಸಾಧ್ಯವಾಗಲಿದೆ’ ಎಂದು ಕೇಂದ್ರದ ಕೃಷಿ ಸಚಿವ ನರೇಂದ್ರಸಿಂಗ್‌ ತೋಮರ್‌ ತಿಳಿಸಿದರು.

‘ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಆದಾಯ ರೈತರಿಗೆ ಲಭಿಸಬೇಕು ಎಂದು 2018–19ರಲ್ಲಿ ರೂಪಿಸಿದ್ದ ನೀತಿಯನ್ನು ಮುಂದಿಟ್ಟುಕೊಂಡು ಬೆಂಬಲ ಬೆಲೆ ನಿಗದಿ ಮಾಡಲಾಗಿದೆ’ ಎಂದು ಅವರು ತಿಳಿಸಿದರು.

ಭತ್ತದ ಬೆಂಬಲ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದ್ದರೆ, ಎಣ್ಣೆಬೀಜ, ಬೇಳೆಕಾಳು ಹಾಗೂ ಸಿರಿ ಧಾನ್ಯಗಳ ಬೆಂಬಲ ಬೆಲೆಯಲ್ಲಿ ಗಣನೀಯ ಏರಿಕೆ ಮಾಡಲಾಗಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ತೇಜನಕ್ಕಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈಚೆಗೆ ಘೋಷಿಸಿದ್ದ ವಿಶೇಷ ಪ್ಯಾಕೇಜ್‌ ಜಾರಿಗೆ ರೂಪಿಸಿರುವ ನೀಲನಕ್ಷೆಗೂ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.

‘ಸ್ವನಿಧಿ’ ಸಾಲ: ಬೀದಿಬದಿ ವ್ಯಾಪಾರಿಗಳಿಗೆ ದುಡಿಯುವ ಬಂಡವಾಳಕ್ಕೆ ಸಾಲ ನೀಡುವ ‘ಸ್ವನಿಧಿ’ ಸಾಲ ಯೋಜನೆಗೆ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಈ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳು ಗರಿಷ್ಠ ₹ 10,000 ಸಾಲ ಪಡೆಯಬಹುದಾಗಿದ್ದು, ಇದನ್ನು ಒಂದು ವರ್ಷದಲ್ಲಿ ಸಮಾನ ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗುತ್ತದೆ.

‘ಈ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ವ್ಯಾಪಾರಿಗಳಿಗೆ ಶೇ 7ರಷ್ಟು ಸಬ್ಸಿಡಿ ಲಭಿಸಲಿದ್ದು, ಆ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಲಾಗುವುದು. ಸುಮಾರು 50 ಲಕ್ಷ ವ್ಯಾಪಾರಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ’ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT