ರಾಜ್ಯಸಭೆಯ 2 ಸ್ಥಾನಗಳಿಗೆ ಪ್ರತ್ಯೇಕ ಉಪಚುನಾವಣೆ: ‘ಸುಪ್ರೀಂ’ನಲ್ಲಿ ಇಂದು ವಿಚಾರಣೆ

ನವದೆಹಲಿ: ರಾಜ್ಯಸಭೆಯಲ್ಲಿ ಖಾಲಿಯಾಗಿರುವ ಎರಡು ಸ್ಥಾನಗಳಿಗೆ ಪ್ರತ್ಯೇಕವಾಗಿ ಉಪಚುನಾವಣೆ ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಕಾಂಗ್ರೆಸ್ನ ಗುಜರಾತ್ ಘಟಕ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ( ಜೂನ್ 19) ಕೈಗೆತ್ತಿಕೊಳ್ಳಲಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ನಾಯಕಿ ಸ್ಮೃತಿ ಇರಾನಿ ಅವರು ಕ್ರಮವಾಗಿ ಗಾಂಧಿನಗರ ಹಾಗೂ ಅಮೇಠಿಯಿಂದ ಆಯ್ಕೆಯಾದ ಕಾರಣ ರಾಜ್ಯಸಭೆಯ ಎರಡು ಸ್ಥಾನಗಳು ತೆರವಾಗಿವೆ. ಈ ಎರಡು ಸ್ಥಾನಗಳಿಗೆ ಜುಲೈ 5ರಂದು ಉಪಚುನಾವಣೆ ನಡೆಸಲು ಆಯೋಗ ಅಧಿಸೂಚನೆ ಹೊರಡಿಸಿದೆ.
‘ತೆರವಾದ ಈ ಸ್ಥಾನಗಳಿಗೆ ಪ್ರತ್ಯೇಕವಾಗಿ ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ಹೊರಡಿಸಿರುವ ಆದೇಶ ಅಸಂವಿಧಾನಿಕ, ನಿರಂಕುಶ, ಕಾನೂನುಬಾಹಿರ ಹಾಗೂ ಸಂವಿಧಾನದ 14ನೇ ಕಲಮಿನ ಉಲ್ಲಂಘನೆಯಾಗುತ್ತದೆ ಎಂದು ಘೋಷಿಸಿ, ಈ ಆದೇಶವನ್ನು ವಜಾಗೊಳಿಸಬೇಕು’ ಎಂದು ಕೋರಿ ಗುಜರಾತ್ ವಿಧಾಸಭೆಯಲ್ಲಿ ವಿರೋಧ ಪಕ್ಷದ ನಾಯಕ ಪರೇಶ್ಭಾಯಿ ಧನಾನಿ ಅರ್ಜಿ ಸಲ್ಲಿಸಿದ್ದಾರೆ.
‘ಪ್ರತ್ಯೇಕವಾಗಿ ಉಪಚುನಾವಣೆ ನಡೆಸಿದರೆ ಸಂವಿಧಾನ ಮತ್ತು ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಮೂಲ ಆಶಯಕ್ಕೇ ಧಕ್ಕೆ ಉಂಟಾಗುವುದು. ಈಗಾಗಲೇ ಹೆಚ್ಚು ಸ್ಥಾನ ಗಳಿಸಿರುವ ಪಕ್ಷ ಅಧಿಕಾರ ದುರುಪಯೋಗಪಡಿಸಿಕೊಳ್ಳಬಹುದು’ ಎಂದು ಧನಾನಿ ಅರ್ಜಿಯಲ್ಲಿ ವಿವರಿಸಿದ್ದಾರೆ.
ರಜಾಕಾಲದ ನ್ಯಾಯಪೀಠದ ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಹಾಗೂ ಸೂರ್ಯಕಾಂತ ಅವರು ಈ ಅರ್ಜಿ ವಿಚಾರಣೆ ನಡೆಸುವರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.