ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೆ ಅಗತ್ಯವಾದ ಸಂಶೋಧನೆಗೆ ಆದ್ಯತೆ

ಐಐಟಿ, ಐಐಎಂ, ಐಐಎಸ್‌ಸಿಗಳಿಗೆ ₹ 400 ಕೋಟಿ ಅನುದಾನ
Last Updated 5 ಜುಲೈ 2019, 12:49 IST
ಅಕ್ಷರ ಗಾತ್ರ

ಬೆಂಗಳೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದ ಬಜೆಟ್‌ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಮಹತ್ವ ನೀಡಿದ್ದು, ಸಂಶೋಧನಾ ಕ್ಷೇತ್ರಕ್ಕೂ ವಿಶೇಷ ಗಮನ ಹರಿಸಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನೂ ಅವರು ಕಡೆಗಣಿಸಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸಜ್ಜುಗೊಳಿಸುವ ಲಕ್ಷಣ ಕಾಣಿಸಿದೆ.

ಭಾರತದ ಶಿಕ್ಷಣ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಲು ಇದುವರೆಗೆ ವಿಫಲವಾಗಿದ್ದವು. ಆದರೆ ಇದೀಗ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರ, ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ದೆಹಲಿ, ಐಐಟಿ ಬಾಂಬೆಗಳು ಸ್ಥಾನ ಪಡೆದಿವೆ. ಹಣಕಾಸು ಸಚಿವರು ಇದನ್ನು ತಮ್ಮ ಬಜೆಟ್‌ ಭಾಷಣದಲ್ಲಿ ಪ್ರಮುಖವಾಗಿ ಉಲ್ಲೇಖಿಸಿದ್ದು, ‘ಜಾಗತಿಕ ದರ್ಜೆಯ ಶಿಕ್ಷಣ ಸಂಸ್ಥೆಗಳು’ ಎಂಬ ನೆಲೆಯಲ್ಲಿ ₹ 400 ಕೋಟಿಯ ವಿಶೇಷ ಅನುದಾನ ಘೋಷಿಸಿದ್ದಾರೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಇದೊಂದು ಬಹಳ ದೊಡ್ಡ ಬಜೆಟ್‌ ಹಂಚಿಕೆ ಎಂದು ತಿಳಿಯಬೇಕು. ಏಕೆಂದರೆ ಇದುವರೆಗೆ ಈ ಸಂಸ್ಥೆಗಳಿಗೆ ವಾರ್ಷಿಕವಾಗಿ ದೊರೆಯುತ್ತಿದ್ದುದು ಇದರ ಮೂರನೇ ಒಂದರಷ್ಟು ಅನುದಾನ ಮಾತ್ರ.

‘ಐದು ವರ್ಷದ ಹಿಂದೆ ಜಗತ್ತಿನ ಪ್ರಮುಖ 200 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಭಾರತದ ಒಂದೇ ಒಂದು ಶಿಕ್ಷಣ ಸಂಸ್ಥೆಯೂ ಇರಲಿಲ್ಲ. ಆದರೆ ನಮ್ಮ ಶಿಕ್ಷಣ ಸಂಸ್ಥೆಗಳ ನಿರಂತರ ಪ್ರಯತ್ನದಿಂದಾಗಿ ಇಂದು ಐಐಎಸ್‌ಸಿ ಮತ್ತು ಎರಡು ಐಐಟಿಗಳು 200 ಜಾಗತಿಕ ಸಂಸ್ಥೆಗಳಲ್ಲಿ ಸ್ಥಾನ ಪಡೆದಿವೆ. ಜಾಗತಿಕ ದರ್ಜೆಯ ಶಿಕ್ಷಣ ಸಂಸ್ಥೆಗಳು ಎಂಬ ನೆಲೆಯಲ್ಲಿ ಈ ಸಂಸ್ಥೆಗಳಿಗೆ ಈ ₹ 400 ಕೋಟಿಯ ವಿಶೇಷ ಅನುದಾನ ನೀಡಲಾಗುತ್ತಿದೆ’ ಎಂದು ನಿರ್ಮಲಾ ಹೇಳಿದಾಗ ಎಲ್ಲ ಲೋಕಸಭಾ ಸದಸ್ಯರು ಮೇಜು ಕುಟ್ಟಿ ಖುಷಿಪಟ್ಟರು. ಸಹಜವಾಗಿಯೇ ಇದು ಇಡೀ ದೇಶವೇ ಹೆಮ್ಮೆ ಪಡುವ ಸಂಗತಿ. ಇದೇ ರೀತಿಯ ಉತ್ತೇಜನ ನೀಡಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಸ್ಥೆಗಳು ಜಗತ್ತಿನ ಉನ್ನತ ಶಿಕ್ಷಣ ಸಂಸ್ಥೆಗಳಾಗಿ ಹೊರಹೊಮ್ಮುವ ಅವಕಾಶವಂತೂ ಇದ್ದೇ ಇದೆ.

ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಸ್ಥಾಪನೆ

ರಾಷ್ಟ್ರೀಯ ಶಿಕ್ಷಣ ನೀತಿಯ ಕರಡಿನಲ್ಲಿ ತಿಳಿಸಲಾದ ಪ್ರಮುಖ ಅಂಶಗಳಲ್ಲಿ ಉನ್ನತ ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡುವುದು ಸೇರಿತ್ತು. ಅದನ್ನು ಈ ಬಜೆಟ್‌ನಲ್ಲೇ ಜಾರಿಗೆ ತರುವ ಕೆಲಸವನ್ನು ನಿರ್ಮಲಾ ಸೀತಾರಾಮನ್‌ ಆರಂಭಿಸಿದ್ದಾರೆ. ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸುವುದಾಗಿ ತಿಳಿಸಿದ್ದಾರೆ. ಹಲವು ಸಚಿವಾಲಯಗಳಿಂದ ಈ ಪ್ರತಿಷ್ಠಾನಕ್ಕೆ ಹಣ ಒದಗಿಸಲಾಗುತ್ತದೆ. ರಾಷ್ಟ್ರೀಯ ಆದ್ಯತೆಯನ್ನು ನೋಡಿಕೊಂಡುಯಾವುದಕ್ಕೆ ಎಂತಹ ಪ್ರಾಮುಖ್ಯತೆ ನೀಡಬೇಕು ಎಂಬುದನ್ನು ನಿರ್ಧರಿಸುತ್ತಲೇ ಸಂಶೋಧನೆಯಲ್ಲಿ ನಕಲಿಗಳು ನುಸುಳದಂತೆ ನೋಡಿಕೊಳ್ಳುವ ಭರವಸೆಯನ್ನು ನೀಡಿದ್ದಾರೆ.

ಭಾರತದಲ್ಲಿ ಓದಿ

ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವಿದೇಶಿ ವಿದ್ಯಾರ್ಥಿಗಳನ್ನು ಸೆಳೆಯುವ ನಿಟ್ಟಿನಲ್ಲಿ ‘ಭಾರತಲ್ಲಿ ಓದಿ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಯೋಜನೆಯನ್ನು ಸಚಿವರು ಹಾಕಿಕೊಂಡಿದ್ದಾರೆ. ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡುವುದರ ಮೂಲಕ ಇವುಗಳು ಉನ್ನತ ಶಿಕ್ಷಣದ ಕೇಂದ್ರಗಳಾಗಿ ಮಾರ್ಪಡಿಸುವ ವಿಚಾರವೂ ಅವರಿಗೆ ಇದೆ. ಹೀಗಾಗಿಯೇ ಈ ಕ್ಷೇತ್ರವನ್ನು ಸಚಿವರು ವಿಶೇಷವಾಗಿ ಪರಿಗಣಿಸಿರುವುದು ಸ್ಪಷ್ಟವಾಗಿದೆ.

ಉನ್ನತ ಶಿಕ್ಷಣದಲ್ಲಿ ನಿಯಂತ್ರಣ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವುದಕ್ಕೆ ಗಮನ ಹರಿಸಲಾಗಿದ್ದು, ಇದಕ್ಕಾಗಿ ಉನ್ನತ ಶಿಕ್ಷಣ ಆಯೋಗವನ್ನು (ಎಚ್‌ಇಷಿಐ) ಮುಂದಿನ ದಿನಗಳಲ್ಲಿ ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ಆರಂಭವಾಗಿರುವ ಹಲವಾರು ಮುಕ್ತ ಕೋರ್ಸ್‌ಗಳ ರೂಪದಲ್ಲಿ ‘ಸ್ವಯಂ’ ಆಧ್ಯಯನದ ಕಲಿಕಾ ಸಾಧ್ಯತೆಗಳನ್ನು ಆರಂಭಿಸಲಾಗಿದೆ. ಇದರಿಂದ ವಿದ್ಯಾರ್ಥಿ ಸಮುದಾಯದಲ್ಲಿ ಇದುವರೆಗೆ ಇದ್ದ ಡಿಜಿಟಲ್‌ ವಿಭಜನೆ ಪ್ರಮಾಣ ಕಡಿಮೆಯಾಗುತ್ತದೆ. ಬೋಧನೆಯಲ್ಲಿ ಗುಣಮಟ್ಟವನ್ನು ಸುಧಾರಿಸುವ ಸಲುವಾಗಿ ಉನ್ನತ ಶಿಕ್ಷಣದಲ್ಲಿ ಶೈಕ್ಷಣಿಕ ಜಾಲಗಳ ಜಾಗತಿಕ ಕಾರ್ಯಕ್ರಮವನ್ನು (ಜೆಎಐಎನ್‌–ಗೈನ್‌) ಆರಂಭಿಸಲಾಗಿದೆ. ಇದರಿಂದ ಜಾಗತಿಕ ಮಟ್ಟದ ವಿಜ್ಞಾನಿಗಳು ಮತ್ತು ಸಂಶೋಧಕರನ್ನು ಕಲೆ ಹಾಕುವುದು ಸಾಧ್ಯವಾಗಲಿದೆ. ಪ್ರಮುಖ ಐಐಟಿಗಳು ಮತ್ತು ಐಐಎಸ್‌ಸಿಯಲ್ಲಿ ಇಂಪ್ಯಾಕ್ಟಿಂಗ್‌ ರೀಸರ್ಚ್‌ ಇನ್ನೊವೇಷನ್‌ ಆ್ಯಂಡ್‌ ಟೆಕ್ನಾಲಜಿ (ಇನ್‌ಪ್ರಿಂಟ್‌) ಯೋಜನೆ ಆರಂಭಿಸಲಾಗಿದ್ದು, ಇದರಿಂದ ದೇಶಕ್ಕೆ ಅಗತ್ಯವಾದ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್‌ ಸವಾಲುಗಳನ್ನು ಬಗೆಹರಿಸುವುದು ಸಾಧ್ಯವಾಗುತ್ತದೆ. ಈ ಮೂಲಕ ಉನ್ನತ ಶಿಕ್ಷಣ ಸಂಸ್ಥೆಗಳು ಸಂಶೋಧನೆಯ ಕೇಂದ್ರಗಳಾಗಬೇಕು ಎಂಬ ಗುರಿ ಇರುವುದನ್ನು ಸಚಿವರು ತಮ್ಮ ಬಜೆಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಬಜೆಟ್‌ ಅನುದಾನ

ಉನ್ನತ ಶಿಕ್ಷಣ ಕ್ಷೇತ್ರಕ್ಕೆ ₹54,178 ಕೋಟಿ ಅನುದಾನ ತೆಗೆದಿರಿಸಲಾಗಿದೆ. ಕಳೆದ ಬಜೆಟ್‌ನಲ್ಲಿ ₹ 48.816 ಕೋಟಿ ನಿಗದಿಪಡಿಸಲಾಗಿತ್ತು.

ಪ್ರಾಥಮಿಕ ಶಿಕ್ಷಣ

ಹಣಕಾಸು ಸಚಿವರು ಪ್ರಾಥಮಿಕ ಶಿಕ್ಷಣವನ್ನೂ ಮರೆತಿಲ್ಲ. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಕಾರ್ಯಕ್ರಮಗಳಿಗೆ ₹ 97,585 ಕೋಟಿ ತೆಗೆದಿರಿಸಲಾಗಿದೆ. ಕಳೆದ ವರ್ಷ ಈ ಮೊತ್ತ ₹ 87,383 ಕೋಟಿ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT