ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಭಾರತಕ್ಕೆ ಡೊನಾಲ್ಡ್ ಟ್ರಂಪ್: ಈವರೆಗೆ ಚರ್ಚೆಯಾಗಿದ್ದು ಏನೇನು?

Last Updated 23 ಫೆಬ್ರುವರಿ 2020, 15:35 IST
ಅಕ್ಷರ ಗಾತ್ರ

ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಭಾರತಕ್ಕೆ ಬರಲಿದ್ದು, ಎರಡು ದಿನ ಇಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಕೆಲವು ಒಪ್ಪಂದಗಳಿಗೆ ಭಾರತ–ಅಮೆರಿಕ ಸಹಿ ಹಾಕುವ ನಿರೀಕ್ಷೆ ಇದೆ.

ಭಾರತ ಭೇಟಿ ನಿಗದಿಯಾದ ಆರಂಭದಲ್ಲಿ ಉಭಯ ರಾಷ್ಟ್ರಗಳ ಮಧ್ಯೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಸುಳಿವು ನೀಡಿದ್ದ ಟ್ರಂಪ್ ಬಳಿಕ, ಈ ಬಾರಿ ಒಪ್ಪಂದ ಏರ್ಪಡುವುದು ಅನುಮಾನ ಎಂದು ಹೇಳಿದ್ದರು.

ಹಲವು ನಿರೀಕ್ಷೆ, ಕುತೂಹಲ, ವಿವಾದಗಳಿಂದಾಗಿ ಟ್ರಂಪ್ ಭೇಟಿ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದೆ.

ಅಹಮದಾಬಾದ್‌ನಲ್ಲಿ ಟ್ರಂಪ್ ಸಂಚರಿಸುವ ಮಾರ್ಗದಲ್ಲಿರುವ ಕೊಳೆಗೇರಿಗಳಿಗೆ ಅಡ್ಡಲಾಗಿ ಬೃಹತ್ ಗೋಡೆ ನಿರ್ಮಿಸಿ, ಅಂದಗೊಳಿಸಲಾಗಿದೆ. ಈ ನಡೆ ಕೊಳಗೇರಿ ನಿವಾಸಿಗಳಲ್ಲಿ ಸಿಟ್ಟು ತರಿಸಿದೆ.

ಸ್ವಾಗತಕ್ಕೆ ಕೋಟಿ ಜನ ಎಂದಿದ್ದ ಟ್ರಂಪ್: ‘ಅಹಮದಾಬಾದ್‌ ವಿಮಾನ ನಿಲ್ದಾಣದಿಂದ ಮೊಟೆರಾ ಸ್ಟೇಡಿಯಂವರೆಗಿನ ಮಾರ್ಗದಲ್ಲಿ 50ರಿಂದ 70 ಲಕ್ಷ ಜನರು ಸೇರಲಿದ್ದಾರೆ ಎಂದು ಮೋದಿ ನನಗೆ ಹೇಳಿದ್ದರು’ ಎಂದು ಟ್ರಂಪ್ ಆರಂಭದಲ್ಲಿ ಹೇಳಿದ್ದರು. ಇತ್ತೀಚೆಗೆ ಅವರು ಈ ಸಂಖ್ಯೆಯನ್ನು 1 ಕೋಟಿಗೆ ಏರಿಸಿದ್ದರು. ಮುಖ್ಯ ಕಾರ್ಯಕ್ರಮ ನಡೆಯುವ ಮೊಟೆರಾ ಕ್ರೀಡಾಂಗಣದ ಸಾಮರ್ಥ್ಯ 1.10 ಲಕ್ಷ ಜನ ಮಾತ್ರ. ಟ್ರಂಪ್ ಹೇಳಿಕೆ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.

ಕಾಂಗ್ರೆಸ್ ತಕರಾರು: ‘ನಮಸ್ತೆ ಟ್ರಂಪ್’ ಕಾರ್ಯಕ್ರಮವನ್ನು ಪರಿಚಿತವಲ್ಲದ ‘ಡೊನಾಲ್ಡ್ ಟ್ರಂಪ್ ನಾಗರಿಕ ಅಭಿನಂದನ ಸಮಿತಿ’ ಆಯೋಜಿಸಿದೆ. ಸಮಿತಿ ಮೂಲಕ ಸುಮಾರು ₹100 ಕೋಟಿ ಖರ್ಚು ಮಾಡಲು ಹೊರಟಿರುವ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ಪ್ರಶ್ನಿಸಿದೆ. ಇಷ್ಟೇ ಅಲ್ಲದೆ, ಟ್ರಂಪ್‌ ಭೇಟಿ ವೇಳೆ ರಾಷ್ಟ್ರಪತಿ ಭವನದಲ್ಲಿ ಆಯೋಜನೆಯಾಗಿರುವ ಅಧಿಕೃತ ಔತಣಕೂಟಕ್ಕೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಆಹ್ವಾನ ನೀಡಿಲ್ಲ ಎಂದು ಪಕ್ಷ ಆರೋಪಿಸಿದೆ. ಟ್ರಂಪ್ ಜತೆ ಪ್ರತಿಪಕ್ಷಗಳ ನಿಯೋಗದ ಭೇಟಿ ಕಾರ್ಯಕ್ರಮವೂ ಇಲ್ಲದಿರುವುದು ಪ್ರತಿಪಕ್ಷಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಎಎಪಿ ಅಸಮಾಧಾನ: ಟ್ರಂಪ್ ಪತ್ನಿ ಮೆಲಾನಿಯಾ ಅವರು ದೆಹಲಿಯ ಶಾಲೆಯೊಂದಕ್ಕೆ ಭೇಟಿ ನೀಡುವ ಕಾರ್ಯಕ್ರಮಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಅವರಿಗೆ ಆಹ್ವಾನ ನೀಡಿಲ್ಲ ಎಂದು ಎಎಪಿ ಆರೋಪಿಸಿದೆ.

ಹೀಗಿರಲಿದೆ ಟ್ರಂಪ್ ಪ್ರವಾಸ

ಫೆ.24 ಸೋಮವಾರ

11.40: ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ

12.15: ಅಹಮದಾಬಾದ್‌ನ ಸಾಬರಮತಿ ಆಶ್ರಮಕ್ಕೆ ಭೇಟಿ

1.05: ಮೊಟೆರಾ ಕ್ರೀಡಾಂಗಣದಲ್ಲಿ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ

6.45: ದೆಹಲಿಗೆ ಪ್ರಯಾಣ

ಫೆ. 25 ಮಂಗಳವಾರ

10.00: ರಾಷ್ಟ್ರಪತಿ ಭವನದಲ್ಲಿ ಟ್ರಂಪ್ ದಂಪತಿಗೆ ಅಧಿಕೃತ ಸ್ವಾಗತ

10.30: ರಾಜ್‌ಘಾಟ್‌ನಲ್ಲಿ ಮಹಾತ್ಮಾಗಾಂಧಿ ಸಮಾಧಿಗೆ ನಮನ

11.00: ಹೈದರಾಬಾದ್ ಹೌಸ್‌ನಲ್ಲಿ ಟ್ರಂಪ್–ಮೋದಿ ಮಾತುಕತೆ

7.30: ರಾಷ್ಟ್ರಪತಿ ಭವನದಲ್ಲಿ ರಾಮನಾಥ ಕೋವಿಂದ್ ಭೇಟಿ

10.00: ಅಮೆರಿಕಕ್ಕೆ ಪ್ರಯಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT