ಶನಿವಾರ, ಜೂನ್ 6, 2020
27 °C

ಪಶ್ಚಿಮ ಬಂಗಾಳದಲ್ಲಿ ಅಂಪನ್‌ ನರ್ತನ; ಕೇಂದ್ರದಿಂದ ₹1,000 ಕೋಟಿ ನೆರವು–‍ಮೋದಿ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಮಮತಾ ಬ್ಯಾನರ್ಜಿ

ನವದೆಹಲಿ: ಅಂಪನ್‌ ಚಂಡಮಾರುತದ ಪ್ರಭಾವಕ್ಕೆ ಒಳಗಾಗಿರುವ ಪಶ್ಚಿಮ ಬಂಗಾಳದಲ್ಲಿ ಶುಕ್ರವಾರ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರದಿಂದ ₹1,000 ಕೋಟಿ ಸಹಕಾರ ನೀಡುವುದಾಗಿ ಘೋಷಿಸಿದ್ದಾರೆ. 

'ಪಶ್ಚಿಮ ಬಂಗಾಳದ ನನ್ನ ಸಹೋದರ ಮತ್ತು ಸಹೋದರಿಯರೇ ಇಂಥ ಕಠಿಣ ಸಮಯದಲ್ಲಿ ಇಡೀ ದೇಶವೇ ನಿಮ್ಮೊಂದಿಗೆ ನಿಂತಿರುವುದನ್ನು ಖಚಿತ ಪಡಿಸುತ್ತಿದ್ದೇನೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಚಂಡಮಾರುತದಿಂದ ಹಾನಿಯಾಗಿರುವ ಭಾಗಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಅವರು, ರಾಜ್ಯ ಸರ್ಕಾರದ ಪ್ರಮುಖರೊಂದಿಗೆ ಮಾತುಕತೆ ನಡೆಸಿ ಮಾತನಾಡಿದರು. ಅಂಪನ್‌ ಚಂಡಮಾರುತದಿಂದ ಉಂಟಾಗಿರುವ ಹಾನಿಗಳ ಕುರಿತು ವಿವರವಾದ ಸಮೀಕ್ಷೆ ನಡೆಸಲು ಕೇಂದ್ರದಿಂದ ತಂಡ ಕಳುಹಿಸಲಾಗುತ್ತದೆ. ಪುನರ್‌ರಚನೆ ಹಾಗೂ ಪುನಶ್ಚೇತದ ಸಂಗತಿಗಳನ್ನು ಪರಿಗಣಿಸಲಾಗುತ್ತದೆ. ಪಶ್ಚಿಮ ಬಂಗಾಳ ಮುಂದುವರಿಯುವುದು ನಮ್ಮೆಲ್ಲರ ಅಭಿಲಾಷೆಯಾಗಿದೆ ಎಂದರು.  

ಕಳೆದ ವರ್ಷ ಮೇ ತಿಂಗಳಲ್ಲಿ ದೇಶ ಚುನಾವಣೆಗಳಲ್ಲಿ ನಿರತವಾಗಿತ್ತು ಹಾಗೂ ಅದೇ ಸಮಯದಲ್ಲಿ ಒಡಿಶಾಗೆ ಎರಗಿದ ಚಂಡಮಾರುತದ ಪರಿಣಾಮಗಳ ವಿರುದ್ಧ ಹೋರಾಟ ನಡೆಸಿದ್ದೆವು. ಒಂದು ವರ್ಷದ ಬಳಿಕ ಮತ್ತೆ ಚಂಡಮಾರುತ ನಮ್ಮ ಕರಾವಳಿ ಭಾಗಗಳಲ್ಲಿ ಹಾನಿ ಉಂಟು ಮಾಡಿದೆ. ಇದರಲ್ಲಿ ಪಶ್ಚಿಮ ಬಂಗಾಳದ ಜನರು ತೀವ್ರ ಪರಿಣಾಮ ಎದುರಿಸಿದ್ದಾರೆ. ಚಂಡಮಾರುತದಿಂದಾಗಿ ಸಾವಿಗೀಡಾದ ವ್ಯಕ್ತಿಯ ಕುಟುಂಬಕ್ಕೆ ₹2 ಲಕ್ಷ ಹಾಗೂ ಗಂಭೀರ ಗಾಯಗೊಂಡಿರುವವರಿಗೆ ₹50,000 ಪರಿಹಾರ ನೀಡುವುದಾಗಿ ಪ್ರಕಟಿಸಿದ್ದಾರೆ. 

ಕೋವಿಡ್‌–19 ವಿರುದ್ಧದ ಹೋರಾಟದಲ್ಲಿ ಅಂತರ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಅಂಪಾನ್ ಚಂಡಮಾರುತದ ಪರಿಣಾಮ ಎದುರಿಸಲು ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸುವುದು ಮುಖ್ಯವಾಗಿದೆ. ಇಂಥ ಕಠಿಣ ಸ್ಥಿತಿಯಲ್ಲಿಯೂ ಮಮತಾ ಬ್ಯಾನರ್ಜಿ ಅವರ ನಾಯಕತ್ವದಲ್ಲಿ ಪಶ್ಚಿಮ ಬಂಗಾಳ ಸಮರ್ಥವಾಗಿ ಹೋರಾಡುತ್ತಿದೆ. ಈ ಪರಿಸ್ಥಿತಿಯಲ್ಲಿ ನಾವೆಲ್ಲರೂ ಅವರೊಂದಿಗೆ ಇದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು. 

ಅಂಪನ್‌ ಚಂಡಮಾರುತಕ್ಕೆ ಇಲ್ಲಿಯವರೆಗೂ 80 ಜನರು ಸಾವಿಗೀಡಾಗಿದ್ದಾರೆ. 

ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. 125 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಿದ್ದರಿಂದ ಮರಗಳು ಬುಡಮೇಲಾಗಿವೆ. ವಿದ್ಯುತ್ ಕಂಬಗಳು ಉರುಳಿದ್ದು, ಉತ್ತರ ಹಾಗೂ ದಕ್ಷಿಣ 24 ಪರಗಣ ಜಿಲ್ಲೆಗಳು ಮತ್ತು ಕೋಲ್ಕತ್ತದ ಬಹುತೇಕ ಭಾಗಗಳಲ್ಲಿ ಬುಧವಾರ ಸಂಜೆಯಿಂದ ವಿದ್ಯುತ್ ಸಂಪರ್ಕ ಇಲ್ಲ ಎಂದು ವರದಿಯಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು