ಮಂಗಳವಾರ, ಸೆಪ್ಟೆಂಬರ್ 22, 2020
22 °C

ವಿಶ್ವಸಂಸ್ಥೆಯಲ್ಲಿ ಪಾಕ್‌, ಚೀನಾ ಬಾಯಿ ಮುಚ್ಚಿಸಿದ ಅಕ್ಬರುದ್ದೀನ್‌ ಯಾರು–ಏನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಜಮ್ಮು ಮತ್ತು ಕಾಶ್ಮೀರಕ್ಕೆ ಈವರೆಗೆ ಇದ್ದ ವಿಶೇಷ ಪ್ರಾತಿನಿಧ್ಯ ಹಿಂಪಡೆದ ನಿರ್ಧಾರ ಭಾರತದ ಆಂತರಿಕ ವಿಚಾರ. ಬೇರೆ ದೇಶಗಳು ಇದರಲ್ಲಿ ಮೂಗು ತೂರಿಕೊಂಡು ಬರುವ ಅಗತ್ಯವಿಲ್ಲ. ಶಾಂತಿ ಸ್ಥಾಪನೆಗೆ ಸಂಬಂಧಿಸಿದಂತೆ ಪಾಕ್‌ನೊಂದಿಗೆ ಮಾತುಕತೆ ನಡೆಸಲು ಭಾರತ ಸಿದ್ಧವಿದೆ. ಆದರೆ, ಅದಕ್ಕೂ ಮೊದಲು ಭಯೋತ್ಪಾದನೆ ನಿಲ್ಲಬೇಕು. ಯಾವುದೋ ಒಂದು ಉದ್ದೇಶ ಈಡೇರಿಸಿಕೊಳ್ಳಲು ಭಯೋತ್ಪಾದೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುವುದನ್ನು ಭಾರತ ಸಹಿಸುವುದಿಲ್ಲ...’

ಜಮ್ಮು ಮತ್ತು ಕಾಶ್ಮೀರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶುಕ್ರವಾರ ಚೀನಾದ ಒತ್ತಾಸೆಯ ಮೇರೆಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಗೌಪ್ಯ ಸಮಾಲೋಚನೆ ನಡೆಯಿತು. ಈ ಸಮಾಲೋಚನೆಯ ನಂತರ ವಿಶ್ವಸಂಸ್ಥೆಯ ಭಾರತದ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಅವರು ಮಾಧ್ಯಮಗೋಷ್ಠಿಯಲ್ಲಿ ಈ ಮೇಲಿನಂತೆ ಹೇಳಿದ್ದರು. ವಿಶ್ವದ ಪತ್ರಕರ್ತರಿಂದ ತೂರಿ ಬಂದ ಪ್ರಶ್ನೆಗಳಿಗೆ ಅವರು ಚಾಕಚಕ್ಯತೆಯಿಂದ ಉತ್ತರಿಸಿದ್ದರು. ಇದೇ ವೇಳೆ ಪಾಕಿಸ್ತಾನದ ಪತ್ರಕರ್ತರೊಬ್ಬರು ‘ಪಾಕಿಸ್ತಾನದೊಂದಿಗೆ ಯಾವಾಗ ಮಾತುಕತೆ ಆರಂಭಿಸುತ್ತೀರಿ,’ ಎಂದು ಕೇಳಿದ ಪ್ರಶ್ನೆಗೆ, ನೇರವಾಗಿ ಪತ್ರಕರ್ತನ ಬಳಿಗೆ ತೆರಳಿ ‘ಓ ಗೆಳೆಯ, ಇಲ್ಲೇ, ಈಗಲೇ. ನಿಮಗೆ ಶೇಕ್ ಹ್ಯಾಂಡ್‌ ಮಾಡಿ ಭಾರತವು ಪಾಕ್‌ ಜೊತೆಗೆ ಮಾತುಕತೆ ಶುರು ಮಾಡಿಬಿಡುತ್ತೆ’ ಎಂದು ಹೇಳಿದ್ದು ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಅವರ ರಾಜತಾಂತ್ರಿಕ ನಡೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. 

ಸೈಯದ್‌ ಅಕ್ಬರುದ್ದೀನ್‌ ಅವರದ್ದು ಅಪ್ಪಟ ರಾಜತಾಂತ್ರಿಕ ನಡೆ, ದ್ವಿಪಕ್ಷೀಯ ವ್ಯವಹಾರದಲ್ಲಿ ಮಾಗಿದ ಪಟುವಾಗಿರುವ ಅವರ ಹಿನ್ನೆಲೆಯೂ ಅಷ್ಟೇ ಗಟ್ಟಿಯಾಗಿದೆ. ರಾಜತಾಂತ್ರಿಕ ಕಲೆ ಅವರಿಗೆ ಬಹುಶಃ ರಕ್ತದಿಂದಲೇ ಬಂದಿದೆಯೇನೋ. ಯಾಕೆಂದರೆ ಅವರ ತಂದೆ, ಬಶೀರುದ್ದೀನ್‌ ಅವರೂ ರಾಜತಾಂತ್ರಿಕ ಅಧಿಕಾರಿಯಾಗಿದ್ದವರು. ಅವರ ತಾಯಿ ಪ್ರೊಫೆಸರ್‌. ಹೀಗಾಗಿ ವಿದೇಶಾಂಗ ವ್ಯವಹಾರ ಕಲೆ ಮತ್ತು ಮಾತುಗಾರಿಕೆ ಅವರಿಗೆ ಕರಗತ.

ಇದನ್ನೂ ಓದಿ: ಪಾಕ್, ಚೀನಾ ವಾದಗಳನ್ನು ವಿಶ್ವ ವೇದಿಕೆಯಲ್ಲಿ ಮಣ್ಣು ಮುಕ್ಕಿಸಿದ ಅಕ್ಬರುದ್ದೀನ್

ಹೈದರಾಬಾದ್‌ನ ಬೇಗಮ್‌ಪೇಟ್‌ನ ‘ಹೈದರಾಬಾದ್‌ ಪಬ್ಲಿಕ್‌ ಶಾಲೆ’ಯಲ್ಲಿ ಅಕ್ಬರುದ್ದೀನ್‌ ವ್ಯಾಸಂಗ ಮಾಡಿದ್ದರು. ನಂತರ ಅವರು ರಾಜ್ಯಶಾಸ್ತ್ರ ಮತ್ತು ವಿದೇಶಾಂಗ ವ್ಯವಹಾರ ವಿಷಯದಲ್ಲಿ ಸ್ನಾತಕೋತ್ತರ ಪದವೀದರರಾದರು. ಅವರ ಪತ್ನಿ ಪದ್ಮಾ ಅಕ್ಬರುದ್ದೀನ್‌. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅಕ್ಬರುದ್ದೀನ್‌ ಅವರಿಗೆ ಕ್ರೀಡೆಯಲ್ಲಿ ಅಪರಿಮಿತ ಆಸಕ್ತಿಯುಂಟು. ಅವರು ಕ್ರೀಡಾ ಪೋಷಕರೂ ಹೌದು.

1996ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯಾಗಿರುವ ಅಕ್ಬರುದ್ದೀನ್‌, ವಿಶ್ವ ಮಟ್ಟದಲ್ಲಿ, ಹಲವು ಶೃಂಗಗಳಲ್ಲಿ, ಹಲವು ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 2016ರಲ್ಲಿ ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿಯಾಗಿ ನೇಮಕವಾದ ಅವರು ಅಲ್ಲಿ ಭಾರತದ ನಿಲುವುಗಳನ್ನು ಸಮರ್ಥವಾಗಿ ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ:ಅನ್ಯರು ನಮಗೆ ಬುದ್ಧಿ ಹೇಳಬೇಕಿಲ್ಲ

ವಿಶ್ವಸಂಸ್ಥೆಗೆ ಭಾರತದ ಕಾಯಂ ರಾಯಭಾರಿಯಾಗಿ ನೇಮಕವಾಗುವುದಕ್ಕೂ ಮೊದಲು ಅಕ್ಬರುದ್ದೀನ್‌ ಅವರು 2015ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಭಾರತ–ಆಫ್ರಿಕಾ ಶೃಂಗದ ಹಿರಿಯ ಸಮನ್ವಯಾಧಿಕಾರಿಯಾಗಿದ್ದರು. ವಿಶ್ವಸಂಸ್ಥೆಯಲ್ಲಿ ಸದಸ್ಯ ರಾಷ್ಟ್ರಗಳಾಗಿರುವ ಆಫ್ರಿಕಾದ ಎಲ್ಲ 54 ದೇಶಗಳು ಮತ್ತು ಆಫ್ರಿಕಾದ ಒಕ್ಕೂಟ ಆ ಐತಿಹಾಸಿಕ ಶೃಂಗದಲ್ಲಿ ಭಾಗವಹಿಸಿದ್ದವು. ಭಾರತೀಯ ವಿದೇಶಾಂಗ ವ್ಯವಹಾರದ ಮಟ್ಟಿಗೆ ಮೈಲಿಗಲ್ಲು ಎನಿಸಿದ್ದ ಶೃಂಗದ ಯಶಸ್ಸಿನ ಹಿಂದೆ ಅಕ್ಬರುದ್ದೀನ್‌ ಅವರ ಪರಿಶ್ರಮವೂ ಇತ್ತು.

ಅಕ್ಬರುದ್ದೀನ್‌ ಅವರು 2012–2015ರಲ್ಲಿ ಭಾರತೀಯ ವಿದೇಶಾಂಗ ಇಲಾಖೆಯ ಅಧಿಕೃತ ವಕ್ತಾರರಾಗಿದ್ದ ವೇಳೆ ಹಲವು ಶೃಂಗಗಳಲ್ಲಿ, ಸಚಿವಾಲಯದ ಮಟ್ಟದ ಹಲವು ಬಹುಪಕ್ಷೀಯ, ದ್ವಿಪಕ್ಷೀಯ ನಿಯೋಗಗಳಲ್ಲಿ ಸದಸ್ಯರಾಗಿದ್ದರು. ವಿಶ್ವಸಂಸ್ಥೆಯ ವಾರ್ಷಿಕ ಮಹಾಸಭೆಯ ನಿಯೋಗದಲ್ಲಿಯೂ ಸದಸ್ಯರಾಗಿದ್ದರು.

ಇದನ್ನೂ ಓದಿ: ಮೂಗು ತೂರಿಸಿದ ಚೀನಾ: ಕೈತೊಳೆದುಕೊಂಡ ಅಮೆರಿಕ, ರಷ್ಯಾ

ಸಾಮಾಜಿಕ ತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ರಾಜತಾಂತ್ರಿಕತೆ ಬೆಳವಣಿಗೆಗಳನ್ನು ಸಾರ್ವಜನಿಕ ವಲಯಕ್ಕೂ ವಿಸ್ತರಿಸಿದವರು ಅಕ್ಬರುದ್ದೀನ್‌. ಹೀಗಾಗಿ ಅವರಿಗೆ ಸಾಮಾಜಿಕ ತಾಣಗಳ ಸಾಮರ್ಥ್ಯದ ಸ್ಪಷ್ಟ ಅರಿವೂ ಉಂಟು.

ಅಕ್ಬರುದ್ದೀನ್‌ ಅವರು ವಿಯನ್ನಾದಲ್ಲಿರುವ ಅಂತಾರಾಷ್ಟ್ರೀಯ ಅಣು ಶಕ್ತಿ ಸಂಸ್ಥೆಯಲ್ಲಿ ಭಾರತದ ನಿಯೋಜನೆ ಮೇರೆಗೆ ಸೇವೆ (2006–2011) ಸಲ್ಲಿಸಿ ಬಂದಿದ್ದಾರೆ. ಅಲ್ಲಿ ಅವರು ವಿದೇಶಾಂಗ ವ್ಯವಹಾರ ಮತ್ತು ನೀತಿ ಸಮನ್ವಯ ವಿಭಾಗದ ಮುಖ್ಯಸ್ಥರಾಗಿಯೂ, ಅದರ ಮಹಾ ನಿರ್ದೇಶಕರಿಗೆ ವಿಶೇಷ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದರು.

ಇದನ್ನೂ ಓದಿ: ಕಾಶ್ಮೀರದಲ್ಲಿ ನಿರ್ಬಂಧ ಸಡಿಲಿಕೆ, ಫೋನ್‌ ಲಭ್ಯ, ಸೋಮವಾರ ಶಾಲೆ ಶುರು

1995–98ರ ಅವಧಿಯಲ್ಲಿ ಅಕ್ಬರುದ್ದೀನ್‌ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆ ಮತ್ತು ಶಾಂತಿ ಸುಧಾರಣಾ ಭಾರತೀಯ ಮಿಷನ್‌ನ ವಿಶ್ವಸಂಸ್ಥೆಯ ಮೊದಲ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಅಲ್ಲದೆ, 1997–98ರ ಅವಧಿಯಲ್ಲಿ ಅವರು ವಿಶ್ವಸಂಸ್ಥೆಯ ಆಡಳಿತಾತ್ಮ ವಿಭಾಗದ ಮತ್ತು ಬಜೆಟ್‌ ಪ್ರಶ್ನೆಗಳ ಸಮಿತಿಯ ಸದಸ್ಯರಾಗಿದ್ದರು.

ಅರಬ್‌ ಭಾಷೆಯಲ್ಲಿ ಪ್ರವೀಣರಾಗಿದ್ದ ಅಕ್ಬರುದ್ದೀನ್‌, ಮಧ್ಯಪ್ರಾಚ್ಯದಲ್ಲಿಯೂ ಸೇವೆ ಸಲ್ಲಿಸದ್ದಾರೆ. ಇಸ್ಲಾಮಾಬಾದ್‌ನ ಭಾರತೀಯ ಹೈಕಮಿಷನರ್‌ ಕಚೇರಿಯಲ್ಲಿ ಸಲಹೆಗಾರರಾಗಿ (ಕೌನ್ಸೆಲರ್‌), 2000–2004ರ ಅವಧಿಯಲ್ಲಿ ಸೌದಿ ಅರೇಬಿಯಾದ ಜೇದ್‌ನಲ್ಲಿರುವ ಭಾರತೀಯ ದೂತವಾಸ ಕಚೇರಿಗೆ ಕನ್ಸೋಲ್‌ ಜನರಲ್‌ ಆಗಿ, ಅದಕ್ಕೂ ಮೊದಲು ರಿಯಾದ್‌ ದೂತವಾಸ ಕಚೇರಿಗೆ ಮೊದಲ ಕಾರ್ಯದರ್ಶಿಯಾಗಿ, ಈಜಿಪ್ಟ್‌ನ ಕೈರೋದಲ್ಲಿರುವ ದೂತವಾಸ ಕಚೇರಿಗೆ ಭಾರತದ ಎರಡನೇ ಮತ್ತು ಮೂರನೇ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು.

ತಂದೆ–ತಾಯಿಯ ಬಳುವಳಿಯೋ, ವಿದೇಶ ವ್ಯಾವಹಾರಗಳಲ್ಲಿನ ಅನುಭವದ ಕಾರಣಕ್ಕೋ ಏನೋ ಅಕ್ಬರುದ್ಧೀನ್‌ ಅವರಿಗೆ ರಾಜತಾಂತ್ರಿಕತೆಯಲ್ಲಿ ನೈಪುಣ್ಯ ದೊರಕಿದೆ. ಅವರ ನೈಪುಣ್ಯ ಸೂಕ್ತ ಸಂದರ್ಭದಲ್ಲಿ ಭಾರತಕ್ಕೆ ನೆರವಾಗಿದೆ. ವಿಶ್ವಮಟ್ಟದಲ್ಲಿ ಭಾರತವನ್ನು ಮುಜುಗರವುಂಟು ಮಾಡುವ ಪಾಕ್‌ ಮತ್ತು ಚೀನಾ ಪ್ರಯತ್ನಗಳಿಗೆ ಪೆಟ್ಟು ನೀಡಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು