ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರಗೋಡು ಜನರ ಪಾಲಿಗೆ ವರವಾಯ್ತು ಕರ್ನಾಟಕದ ನಿರ್ಬಂಧ

Last Updated 23 ಏಪ್ರಿಲ್ 2020, 6:22 IST
ಅಕ್ಷರ ಗಾತ್ರ

ತಿರುವನಂತಪುರಂ/ಮಂಗಳೂರು: ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಮೂರು ಲಕ್ಷಕ್ಕಿಂತಲೂ ಹೆಚ್ಚು ಕನ್ನಡಿಗರಿದ್ದಾರೆ. ಇಲ್ಲಿನ ಜನರು ಮಂಗಳೂರು ಜತೆ ಭಾವನಾತ್ಮಕವಾಗಿ ಬೆಸೆದಿದ್ದಾರೆ. ಆದರೆ ಕೊರೊನಾವೈರಸ್ಹರಡುತ್ತಿದ್ದಂತೆಯೇ ಗಡಿದಾಟಿ ಮಂಗಳೂರಿಗೆ ಬರಬಾರದು ಎಂದು ಕರ್ನಾಟಕದ ಅಧಿಕಾರಿಗಳು ಕೇರಳದ ಜನರಿಗೆ ನಿರ್ಬಂಧ ವಿಧಿಸಿದ್ದು, ಇದರಿಂದ ಕಾಸರಗೋಡಿನ ಜನರ ಭಾವನೆಗಳಿಗೆ ಧಕ್ಕೆಯಾಗಿತ್ತು.

ಆದರೆ ಈಗ ಆ ನಿರ್ಬಂಧ ಕಾಸರಗೋಡಿಗೆ ವರವಾಗಿ ಪರಿಣಮಿಸಿದೆ. ಕಳೆದ ಕೆಲವು ವಾರಗಳಿಂದ ಕಾಸರಗೋಡು ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ತ್ವರಿತ ಗತಿಯಲ್ಲಿ ಸಾಗುತ್ತಿವೆ.

2012ರಲ್ಲಿ ಕಾಸರಗೋಡಿನಲ್ಲಿ ಮೂಲ ವ್ಯವಸ್ಥೆ ಉತ್ತಮಪಡಿಸಬೇಕೆಂದು ಕೇರಳದ ಮಾಜಿ ಕಾರ್ಯದರ್ಶಿ ಪಿ.ಪ್ರಭಾಕರನ್ ಮನವಿ ಸಲ್ಲಿಸಿದ್ದರೂ, ಇದಕ್ಕೆ ಸಂಬಂಧಪಟ್ಟ ಸಾಕಷ್ಟು ಕೆಲಸ ಕಾರ್ಯಗಳು ಇಲ್ಲಿ ನಡೆಯಲಿಲ್ಲ. ಈ ಪೈಕಿ ವೈದ್ಯಕೀಯ ಕಾಲೇಜು ಬೇಕು ಎಂಬ ಬೇಡಿಕೆ ಈಗ ಈಡೇರುತ್ತಿದೆ.

ಕೊರೊನಾವೈರಸ್ ಸಂಕಷ್ಟ ಮತ್ತು ಮಂಗಳೂರಿಗೆ ಹೋಗುವ ದಾರಿ ಬಂದ್ ಮಾಡಿದ್ದು ಒಳ್ಳೆಯದೇ ಆಯಿತು ಎಂಬುದು ಕಾಸರಗೋಡಿನ ಕೆಲವು ಜನರ ಅನಿಸಿಕೆ.ಮಂಗಳೂರಿಗೆ ಹೋಗುವ ದಾರಿ ಅಡ್ಡಗಟ್ಟಿದ್ದರಿಂದಲೇ ಕಾಸರಗೋಡಿನಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಮುತುವರ್ಜಿ ವಹಿಸಲಾಯಿತು. ಅದೇ ವೇಳೆ ಟಾಟಾ ಗ್ರೂಪ್ ಕೂಡಾ ಕಾಸರಗೋಡಿನಲ್ಲಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಸಿದ್ಧತೆ ನಡೆಸಿದೆ.

ಅಂದಹಾಗೆ ಇತ್ತೀಚಿಗಿನ ಬೆಳವಣಿಗೆಗಳು ಕಾಸರಗೋಡಿನ ಕನ್ನಡಿಗರಿಗೆ ಬೇಸರ ತಂದಿದೆ. ಈ ಬಗ್ಗೆ 'ಡೆಕ್ಕನ್ ಹೆರಾಲ್ಡ್' ಜತೆ ಮಾತನಾಡಿದ ಕಾಸರಗೋಡಿನ ಕನ್ನಡಿಗರಾದ ಡಾ.ವೈ.ಎಸ್. ಮೋಹನ್ ಕುಮಾರ್ ಕೇರಳದಿಂದ ಕಡೆಗಣನೆಗೊಳಗಾಗಿದ್ದೀವಿ ಎಂದು ಬೇಸರದಲ್ಲಿದ್ದ ಜನರನ್ನು ಕರ್ನಾಟಕವೂ ನಿರ್ಲಕ್ಷಿಸಿದೆ ಎಂಬ ಅಸಮಧಾನ ಜನರಿಗಿದೆ ಎಂದಿದ್ದಾರೆ.

ರಸ್ತೆ ತಡೆ ಮಾಡಿದ್ದು ಕನ್ನಡಿಗರಿಗೆ ಬೇಸರವನ್ನುಂಟು ಮಾಡಿದೆ ಎಂದು ಕಾಸರಗೋಡಿನಲ್ಲಿರುವ ಕರ್ನಾಟಕ ಸಮಿತಿ ಅಧ್ಯಕ್ಷ ಮುರಳೀಧರ ಬಳುಕರಾಯ ಹೇಳಿದ್ದಾರೆ. ಕೆಲವೊಬ್ಬರು ಕಾಸರಗೋಡನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂದು ಹೇಳುತ್ತಿದ್ದಾರೆ. ಇಲ್ಲಿ ಕನ್ನಡಿಗರೂ ಮಲಯಾಳಿಗಳೂ ಸಾಮರಸ್ಯದಿಂದ ಇರುವಾಗ ಇದರ ಅಗತ್ಯವಿಲ್ಲ ಎಂದು ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ. ಸಾಲ್ಯಾನ್ ಹೇಳಿದ್ದಾರೆ.

ಕಾಸರಗೋಡಿನ ಜನರು ತಾವು ಮಂಗಳೂರಿನ ಭಾಗವೆಂದೇ ಭಾವಿಸಿದವರು. ಆದರೆ ರಸ್ತೆ ತಡೆಯೊಡ್ಡಿದ್ದು ಅವರಿಗೆ ನೋವುಂಟು ಮಾಡಿದೆ. ಎಲ್ಲ ಸೌಕರ್ಯಗಳಿಗಾಗಿ ಮಂಗಳೂರನ್ನೇ ಅವಲಂಬಿಸುವಾಗ ಕಾಸರಗೋಡಿನ ಅಭಿವೃದ್ದಿ ಕಾರ್ಯಗಳು ಹಿಂದುಳಿದವು. ಮಂಗಳೂರಿಗೆ ಹೋಗುವ ರಸ್ತೆ ಬಂದ್ ಆದದ್ದೇ ತಡ ಕಾಸರಗೋಡಿನಲ್ಲಿ ಅಭಿವೃದ್ಧಿ ಕಾರ್ಯ ಆರಂಭವಾಯಿತು.ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಮತ್ತು ಟಾಟಾ ಆಸ್ಪತ್ರೆ ನಿರ್ಮಾಣವಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದೀನ್ ಹೇಳಿದ್ದಾರೆ.

ಆದಾಗ್ಯೂ, ಕೋವಿಡ್ -19 ಹರಡುತ್ತಿರುವ ಹೊತ್ತಲ್ಲಿ ಹತ್ತಿರದ ಕಾಸರಗೋಡು ಜಿಲ್ಲೆಯವರು ಮಂಗಳೂರಿಗೆ ಬರದಂತೆ ನಿರ್ಬಂಧ ವಿಧಿಸಿರುವುದಕ್ಕೆ ಹಲವಾರು ಕನ್ನಡಿಗರ ಬೆಂಬಲವೂ ವ್ಯಕ್ತವಾಗಿತ್ತು. ಕರ್ನಾಟಕದ ವಿರುದ್ಧ ಕೇರಳದ ನಡೆಯು ಕನ್ನಡ ಭಾಷಿಗರನ್ನು ವಿಭಜಿಸುವ ಪ್ರಯತ್ನ ಎಂಬಂತೆ ಅನಿಸುತ್ತಿದೆ ಎಂದು ಕನ್ನಡ ಹೋರಾಟಗಾರ ಡಾ.ನರೇಶ್ ಮುಳ್ಳೇರಿಯ ಅಭಿಪ್ರಾಯ ಪಟ್ಟಿದ್ದಾರೆ.

ಕನ್ನಡಿಗರ ಹೃದಯ ಸದಾ ಕಾಸರಗೋಡಿನವರಿಗೆ ಮಿಡಿಯುತ್ತದೆ.ನಾವು ಭಾವನಾತ್ಮಕವಾಗಿ ಅವರೊಂದಿಗೆ ಇದ್ದೇವೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಮಂಗಳೂರಿನ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT