ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಮಸೂದೆ 2018: ವಿರೋಧ ಏಕೆ?

Last Updated 28 ಡಿಸೆಂಬರ್ 2018, 10:16 IST
ಅಕ್ಷರ ಗಾತ್ರ

ಲೋಕಸಭೆಯಲ್ಲಿ ಡಿಸೆಂಬರ್‌ 17 ರಂದು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಮಸೂದೆ 2018ಕ್ಕೆ ಅನುಮೋದನೆ ದೊರೆತಿತ್ತು.ಆದರೆ ದೇಶದಾದ್ಯಂತ ಇರುವ ಲೈಂಗಿಕ ಅಲ್ಪಸಂಖ್ಯಾತರು ಇದರ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಈ ಮಸೂದೆಯ ಕರಡನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ಮೂರು ವರ್ಷಗಳ ಹಿಂದೆ ಸಿದ್ಧ ಪಡಿಸಿತ್ತು. ಆ ವೇಳೆ ಮಸೂದೆ ಬಗ್ಗೆ ತಕರಾರು ತೆಗೆದಿದ್ದ ಹಲವು ಸಂಘಟನೆಗಳು, ಮಸೂದೆಯು ಲೈಂಗಿಕ ಅಲ್ಪ ಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಬದಲು, ತಾರತಮ್ಯವನ್ನು ಎತ್ತಿ ಹಿಡಿದಿದೆ ಎಂದಿದ್ದವು.

ಸದ್ಯ 27 ತಿದ್ದುಪಡಿಗಳೊಂದಿಗೆ ಅನುಮೋದನೆ ಪಡೆದಿರುವ ಮಸೂದೆಯಲ್ಲಿಯೂ ತಾರತಮ್ಯದ ಅಂಶಗಳು ಇವೆ. ಹೀಗಾಗಿ ಅದನ್ನು ಪುನಃ ತಿದ್ದುಪಡಿಗೆ ಒಳಪಡಿಸಬೇಕು ಎಂದು ಲೈಂಗಿಕ ಅಲ್ಪಸಂಖ್ಯಾತರು ಆಗ್ರಹಿಸಿದ್ದಾರೆ. ಮಸೂದೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗೆ ಚ್ಯುತಿತರುವ ಹಲವುಅಂಶಗಳಿವೆ ಎಂದುಎಜೆಂಟ್ಸ್‌ಆಫ್‌ಇಷ್ಕ್‌ವರದಿ ಮಾಡಿದೆ. ಅದರ ಪೂರ್ಣಪಾಠ ಇಲ್ಲಿದೆ.

‘ಲೈಂಗಿಕ ಅಲ್ಪಸಂಖ್ಯಾತ’(ಟ್ರಾನ್ಸ್‌ ಜೆಂಡರ್‌) ಪದದ ವ್ಯಾಖ್ಯಾನ

ಲಿಂಗ ಪರಿವರ್ತಿತ ಪುರುಷ–ಮಹಿಳೆಯರೂ ಸೇರಿದಂತೆ ಯಾವ ವ್ಯಕ್ತಿಯು ತಾನು ಹುಟ್ಟಿದಾಗ ಹೊಂದಿದ್ದ ಲಿಂಗದೊಂದಿಗೆ ಹೊಂದಾಣಿಕೆ ಹೊಂದಿರುವುದಿಲ್ಲವೋ, ತಮ್ಮ ಮೂಲ ಲಿಂಗತ್ವ ಬಗ್ಗೆ ಅಸಮಾಧಾನ ಅಥವಾ ಮೋಹ ಹೊಂದಿರುವರು(ಸಲಿಂಗಿಗಳು) ಹಾಗೂಸಾಮಾಜಿಕ-ಸಾಂಸ್ಕೃತಿಕವಾಗಿಯೂ ಹಿಜ್ರಾ (ಸ್ತ್ರೀ ದೇವತೆ ಬಹುಚಾರ ಮಾತಾ ಆರಾಧಕರಾಗಿರುವಲಿಂಗ ಪರಿವರ್ತಿತ ಅಥವಾ ಮಹಿಳೆಯರ ಉಡುಪು ಧರಿಸುವ ಪುರುಷರು), ಜೊಗ್ತಾಗಳೆಂದು ಗುರುತಿಸಿಕೊಳ್ಳಲು ಬಯಸುವವರು(ಸಮಾಜದ ಬಲವಂತದಿಂದಾಗಿ ಎಲ್ಲವನ್ನೂ ತ್ಯಜಿಸಿ ದೈವಾರಾಧನೆಯಲ್ಲಿ ತೊಡಗಿಕೊಂಡವರು) ಟ್ರಾನ್ಸ್‌ ಜೆಂಡರ್‌ಗಳು ಎಂದು ವ್ಯಾಖ್ಯಾನಿಸಲಾಗಿದೆ.

‘ಲೈಂಗಿಕ ಅಲ್ಪಸಂಖ್ಯಾತ’ ಎಂಬುದನ್ನು ಕೇವಲ ಜೈವಿಕ ಅಂಶದ ಆಧಾರದಲ್ಲಿ ನಿರ್ಧರಿಸಬಾರದು. ಬದಲಾಗಿ ವ್ಯಕ್ತಿಯು ಹುಟ್ಟಿನೊಂದಿಗೆ ಹೊಂದಿರುವ ಲಿಂಗದ ಜೊತೆಗೆ ಅವರ ಲಿಂಗತ್ವವು ಹೊಂದಿಕೆಯಾಗದಿರುವುದನ್ನು ಮನಗಾಣಬೇಕು ಎಂದು ಕೆಲವರು ವಾದಿಸುತ್ತಾರೆ. ಇಂತಹ ವ್ಯಕ್ತಿಗಳಿಗೆ ತಮ್ಮ ಲಿಂಗತ್ವವನ್ನು ಆಯ್ಕೆಮಾಡಿಕೊಳ್ಳಲು ಅವಕಾಶ ನೀಡದೆ ಟ್ರಾನ್ಸ್‌ಜೆಂಡರ್‌ ಎಂದು ಬಿಂಬಿಸುವುದು ಅಸಮಂಜಸ ಎಂದು ಮತ್ತೆ ಕೆಲವರು ಮಸೂದೆಯನ್ನು ವಿರೋಧಿಸುತ್ತಾರೆ.

ಪ್ರಮಾಣಪತ್ರ ಪ್ರಕ್ರಿಯೆ

ಲೈಂಗಿಕ ಅಲ್ಪಸಂಖ್ಯಾತರುಜಿಲ್ಲಾ ಮ್ಯಾಜಿಸ್ಟ್ರೇಟರಿಂದ ಲೈಂಗಿಕ ಅಲ್ಪಸಂಖ್ಯಾತ ಪ್ರಮಾಣಪತ್ರ ಪಡೆಯುವ ಅಗತ್ಯವಿದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ. ಈ ಪ್ರಮಾಣಪತ್ರವನ್ನು ಮುಖ್ಯ ವೈದ್ಯಕೀಯ ಅಧಿಕಾರಿ, ಜಿಲ್ಲೆಯ ಸಾಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಮನಶ್ಶಾಸ್ತ್ರಜ್ಞ ಅಥವಾ ಮನೋರೋಗ ತಜ್ಞ, ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿ ಹಾಗೂ ಸರ್ಕಾರಿ ಅಧಿಕಾರಿಯನ್ನು ಒಳಗೊಂಡ ಐದು ಜನರ ಸಮಿತಿಯು ಅಂತಿಮಗೊಳಿಸುತ್ತದೆ.

ಒಂದುವೇಳೆ ಲೈಂಗಿಕ ಅಲ್ಪಸಂಖ್ಯಾಯತ ವ್ಯಕ್ತಿಯು ತಾನು ಪುರುಷ/ಮಹಿಳೆ ಎಂದು ಗುರುತಿಸುವ ಬಯಕೆ ವ್ಯಕ್ತಪಡಿಸಿದರೆ,ಅದಕ್ಕೆ ತಕ್ಕಂತೆ ಅವರು ತಮ್ಮ ಜನನಾಂಗವನ್ನು ಬದಲಾಯಿಸುವ ಶಸ್ತ್ರಚಿಕಿತ್ಸೆ ಮಾಡಿಕೊಂಡಿರುವುದುನ್ನು ಸಮಿತಿ ಎದುರು ಸಾಬೀತುಪಡಿಸಬೇಕಾಗುತ್ತದೆ. ಆದರೆ ಸಮಿತಿಯ ನಿರ್ಧಾರಕ್ಕೆ ಬದಲಾಗಿ ಮನವಿ ಸಲ್ಲಿಸುವ ಯಾವ ಅವಕಾಶವೂ ಸದ್ಯ ಇಲ್ಲ.

ತಾನು ಪುರುಷ ಅಥವಾ ಮಹಿಳೆ ಇಲ್ಲವೇ ತೃತೀಯ ಲಿಂಗಿ ಎಂದು ಸ್ವತಃ ಗುರುತಿಸಿಕೊಳ್ಳುವ ಹಕ್ಕು ಲೈಂಗಿಕ ಅಲ್ಪಸಂಖ್ಯಾತರಿಗಿದೆ ಎಂದುಸುಪ್ರೀಂ ಕೋರ್ಟ್‌2014ರಲ್ಲಿ ಹೇಳಿತ್ತು. ಆದರೆ ಸದ್ಯದ ಮಸೂದೆಯಲ್ಲಿ ಸ್ವಯಂ ಗುರುತಿಸಿಕೊಳ್ಳುವಿಕೆ ಹಾಗೂ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸಲಾಗಿದೆ. ಮಾತ್ರವಲ್ಲದೆ ಲಿಂಗದ ಗುರುತು ಪ್ರಮಾಣಿಕರಿಸುವ ಅಕ್ರಮಣಶೀಲ ತಪಾಸಣೆಗೆ ಎಡೆಮಾಡಿಕೊಡುತ್ತದೆ.

ಕಾನೂನು ರಕ್ಷಣೆ ಒದಗಿಸಲು ವಿಫಲ

ಮಸೂದೆಯಲ್ಲಿ ಉಲ್ಲೇಖಿಸಲಾಗಿರುವಂತೆ ಲೈಂಗಿಕ ಅಲ್ಪಸಂಖ್ಯಾತರು ಎಲ್ಲಿಯೇ ಭಿಕ್ಷೆ ಬೇಡುತ್ತಿರುವುದು ಕಂಡರೂ ಅವರನ್ನು ಬಂಧಿಸಿ ಕನಿಷ್ಠ 6 ತಿಂಗಳಿಂದ 2 ವರ್ಷಗಳ ವರೆಗೆ ಸೆರೆವಾಸಕ್ಕೆ ಗುರಿಪಡಿಸಬಹುದಾಗಿದೆ.

ಹಿಂಬಾಲಿಸುವುದು, ಲೈಂಗಿಕ ದೌರ್ಜನ‌್ಯ, ಅತ್ಯಾಚಾರದಂತಹ ಪ್ರಕರಣಗಳಲ್ಲಿ ಮಹಿಳೆಯರು ಮಾಡುವ ಆರೋಪ ಹಾಗೂ ದಾಖಲಿಸುವ ಪ್ರಕರಣಗಳಿಗಿಂತ ಲೈಂಗಿಕ ಅಲ್ಪಸಂಖ್ಯಾತರು ಮಾಡುವ ಪ್ರಕರಣಗಳಿಗೆ ಪ್ರಾತಿನಿಧ್ಯ ಕಡಿಮೆ ಇದೆ.

ಲೈಂಗಿಕ ಅಲ್ಪ ಸಂಖ್ಯಾತರ ಜೀವಕ್ಕೆ ಆಪತ್ತು ತರುವ, ಅತ್ಯಾಚಾರವೆಸಗುವ ಅಪರಾಧಿಗಳು ನಿಗದಿತ ದಂಡ ಹಾಗೂ ಕೇವಲ ಎರಡು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಹೊರಬರಬಹುದು. ಆದರೆ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಸಾಬೀತಾದರೆ ಅಪರಾಧಿಗೆ ಏಳುವರ್ಷದಿಂದ ಜೀವಾವಧಿವರೆಗೆ ಶಿಕ್ಷೆ ವಿಧಿಸಲಾಗುತ್ತದೆ.

ಈ ರೀತಿಯ ಅಂಶಗಳು ಲೈಂಗಿಕ ಅಲ್ಪಸಂಖ್ಯಾತರ ರಕ್ಷಣೆ ಬಗೆಗಿನ ಪ್ರಶ್ನೆಗಳನ್ನು ಎತ್ತಿಹಿಡಿದಿವೆ.

ಮೀಸಲಾತಿಯ ಕೊರತೆ

ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗದ ವಿಚಾರದಲ್ಲಿ ಮೀಸಲಾತಿ ಒದಗಿಸುವಂತೆ ಕೇಂದ್ರ ಹಾಗೂ ಎಲ್ಲ ರಾಜ್ಯ ಸರ್ಕಾರಗಳಿಗೆ 2014ರಲ್ಲಿ ಸುಪ್ರೀಂಕೋರ್ಟ್‌ ಸೂಚಿಸಿತ್ತು. ಇವುಗಳ ಜೊತೆಗೆ (ಶಿಕ್ಷಣ, ಉದ್ಯೋಗ)ರಾಜಕೀಯ ಕ್ಷೇತ್ರದಲ್ಲಿಯೂ ಮೀಸಲಾತಿ ಅವಕಾಶ ಕಲ್ಪಿಸಬೇಕು ಎಂಬುದು ಈ ಸಮುದಾಯದವರ ಪ್ರಬಲ ಬೇಡಿಕೆ.

ಆದಾಗ್ಯೂ ಮೀಸಲಾತಿಗೆ ಸಂಬಂಧಿಸಿದ ಯಾವುದೇ ಅಂಶಗಳುಕಾಯ್ದೆಯಲ್ಲಿ ಇಲ್ಲ. ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಅವಕಾಶಗಳನ್ನು ನೀಡದೆ, ಜೀವನ ನಿರ್ವಹಣೆಗಾಗಿ ಸಮುದಾಯ ಅವಲಂಬಿಸಿರುವ ಭಿಕ್ಷಾಟನೆಯನ್ನು ಅಪರಾಧ ಕೃತ್ಯ ಎಂದು ಬಿಂಬಿಸಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಬಾಕಿ ಇದೆ ಇನ್ನೊಂದು ಮಸೂದೆ

ಸದ್ಯ ಲೋಕಸಭೆಯಲ್ಲಿ ಅನುಮೋದನೆ ಪಡೆದಿರುವ ಲೈಂಗಿಕ ಅಲ್ಪಸಂಖ್ಯಾತರ ಮಸೂದೆ–2018 ಕ್ಕಿಂತಲೂ ಹಿಂದಿನಲೈಂಗಿಕ ಅಲ್ಪಸಂಖ್ಯಾತರ ಹಕ್ಕು ಮಸೂದೆ–2014 ಅನುಮೋದನೆಗೆ ಬಾಕಿಯಿದೆ. ರಾಜ್ಯ ಸಭೆಗೆ ತಮಿಳುನಾಡಿನಿಂದ ಆಯ್ಕೆಯಾಗಿರುವ ತಿರುಚಿ ಶಿವ ಈ ಮಸೂದೆ ಸಿದ್ಧಪಡಿಸಿದ್ದಾರೆ. ಸದ್ಯ ಅನುಮೋದನೆ ಪಡೆದಿರುವ ಮಸೂದೆಗಿಂತ ಶಿವ ಮಸೂದೆಯು ಉತ್ತಮವಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT