ಮಂಗಳವಾರ, ಸೆಪ್ಟೆಂಬರ್ 17, 2019
24 °C

2ನೇ ದಿನಕ್ಕೆ ಲಾರಿ ಮುಷ್ಕರ

Published:
Updated:
2ನೇ ದಿನಕ್ಕೆ ಲಾರಿ ಮುಷ್ಕರ

ಬೆಂಗಳೂರು: ಸಮಗ್ರ ಮರಳು ನೀತಿ ರೂಪಿಸುವಂತೆ ಒತ್ತಾಯಿಸಿ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರುಗಳ ಒಕ್ಕೂಟ ಕರೆ ನೀಡಿರುವ ಮರಳು ಲಾರಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಕಟ್ಟಡ ನಿರ್ಮಾಣ ಕಾರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.ರಾಜ್ಯದಾದ್ಯಂತ 45 ಸಾವಿರ ಲಾರಿಗಳು ಸೇವೆ ಸ್ಥಗಿತಗೊಳಿಸಿವೆ. ಬೆಂಗಳೂರು ನಗರಕ್ಕೆ ನಿತ್ಯ ಮೂರು ಸಾವಿರ ಲೋಡ್ ಮರಳು ಪೂರೈಕೆಯಾಗುತ್ತಿತ್ತು. ಆದರೆ ಮುಷ್ಕರದ ಹಿನ್ನೆಲೆಯಲ್ಲಿ ಮರಳು ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದ್ದು, ಕಟ್ಟಡ ನಿರ್ಮಾಣಕಾರರು ಪರದಾಡುವಂತಾಗಿದೆ.`ರಾಜ್ಯದಲ್ಲಿ ಮರಳು ನೀತಿ ಇಲ್ಲ. ಆದ್ದರಿಂದ ಮರಳು ಸಾಗಣೆ ಕಷ್ಟಸಾಧ್ಯವಾಗಿದೆ. ಮರಳು ಸಾಗಣೆದಾರರಿಗೆ ಗಣಿ- ಭೂ ವಿಜ್ಞಾನ ಇಲಾಖೆ, ಪೊಲೀಸ್ ಅಧಿಕಾರಿಗಳು ಮತ್ತು ತಹಶೀಲ್ದಾರ್‌ಗಳು ಕಿರುಕುಳ ನೀಡುತ್ತಿದ್ದಾರೆ. ಐವತ್ತು ಸಾವಿರದಿಂದ ಒಂದು ಲಕ್ಷ ರೂಪಾಯಿವರೆಗೆ ದಂಡ ವಿಧಿಸುತ್ತಿದ್ದಾರೆ. ಈ ಕಿರುಕುಳ ತಾಳಲಾರದೆ ನೂರಾರು ಮಂದಿ ಲಾರಿ ಮಾಲೀಕರು ವಾಹನವನ್ನೇ ಮಾರಾಟ ಮಾಡಿ ಬೀದಿಗೆ ಬಂದಿದ್ದಾರೆ~ ಎಂದು ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಖಪ್ಪ `ಪ್ರಜಾವಾಣಿ~ಗೆ ತಿಳಿಸಿದರು.`ಸರ್ಕಾರ ಮರಳು ನೀತಿ ರೂಪಿಸಿ ಮರಳು ತುಂಬುವ ಪ್ರದೇಶವನ್ನು ಹರಾಜು ಮಾಡಿದರೆ ಈ ಸಮಸ್ಯೆ ಬಗೆಹರಿಯಲಿದೆ. ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮರಳು ಸಾಗಣೆಗೆ ಪರವಾನಗಿ ನೀಡಿದ್ದರು. ಆ ನಂತರ ಬಂದ ಬಿಜೆಪಿ ಸರ್ಕಾರ ಈ ಬಗ್ಗೆ ಏನೂ ಕ್ರಮ ಕೈಗೊಳ್ಳಲಿಲ್ಲ.ಮರಳನ್ನು ಎಲ್ಲಿಂದ ತರಬೇಕು ಎಂಬುದೇ ಗೊತ್ತಾಗದಂತಾಗಿದೆ. ಮರಳನ್ನು ತಂದರೂ ಅಧಿಕಾರಿಗಳಿಗೆ ಲಂಚ ನೀಡಬೇಕಾದ ಪರಿಸ್ಥಿತಿ ಇದೆ. ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸರ್ಕಾರ ಬೇಡಿಕೆ ಈಡೇರಿಸುವವರೆಗೂ ಮುಷ್ಕರ ನಿಲ್ಲದು~ ಎಂದು ಅವರು ಹೇಳಿದರು.

Post Comments (+)