ಎಸಿಬಿ ವಶದಲ್ಲಿದ್ದ ಹಣ, ಆಭರಣ ಶಾಸಕ ನಾಗೇಶ್‌ಗೆ ವಾಪಸ್‌

ಮಂಗಳವಾರ, ಮಾರ್ಚ್ 19, 2019
21 °C

ಎಸಿಬಿ ವಶದಲ್ಲಿದ್ದ ಹಣ, ಆಭರಣ ಶಾಸಕ ನಾಗೇಶ್‌ಗೆ ವಾಪಸ್‌

Published:
Updated:
Prajavani

ಬೆಂಗಳೂರು: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ (ಕೆಪಿಟಿಸಿಎಲ್‌) ನಿರ್ದೇಶಕರಾಗಿದ್ದಾಗ ‘ಭ್ರಷ್ಟಾಚಾರ ನಿಗ್ರಹ ದಳ’ದ (ಎಸಿಬಿ) ದಾಳಿಗೆ ಒಳಗಾಗಿದ್ದ, ಹಾಲಿ ಮುಳಬಾಗಿಲು ಪಕ್ಷೇತರ ಶಾಸಕ ಎಚ್‌.ನಾಗೇಶ್‌ ಕೋರ್ಟ್‌ ಆದೇಶದಂತೆ ವೈಯಕ್ತಿಕ ಬಾಂಡ್‌ ಹಾಗೂ ಇಬ್ಬರ ಶ್ಯೂರಿಟಿ ಕೊಟ್ಟು ತನಿಖಾ ದಳದ ವಶದಲ್ಲಿದ್ದ ಹಣ, ಆಭರಣಗಳನ್ನು ಮರಳಿ ವಶಕ್ಕೆ ಪಡೆದಿದ್ದಾರೆ.

ಎಸಿಬಿ ವಶಪಡಿಸಿಕೊಂಡಿದ್ದ ಶಾಸಕರ ಹಣ, ಆಭರಣಗಳನ್ನು ಬಿಡುಗಡೆ ಮಾಡುವಂತೆ ಇಲ್ಲಿನ 23ನೇ ಲೋಕಾಯುಕ್ತ ವಿಶೇಷ ನ್ಯಾಯಾಲಯ 2018ರ ಡಿಸೆಂಬರ್‌ 10ರಂದು ಆದೇಶಿಸಿತ್ತು. ಇದಕ್ಕೆ ಪ್ರತಿಯಾಗಿ ಆರೋಪಿ ₹1.16 ಕೋಟಿ ವೈಯಕ್ತಿಕ ಬಾಂಡ್‌ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ಕೊಡಬೇಕೆಂದು ಕೋರ್ಟ್‌ ಹೇಳಿತ್ತು. ಕೋರ್ಟ್‌ ವಿಧಿಸಿದ್ದ ಷರತ್ತುಗಳನ್ನು ನಾಗೇಶ್‌ ಸೋಮವಾರ ಪೂರೈಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದಾಯ ಮೀರಿ ಆಸ್ತಿ ಹೊಂದಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕಾವೇರಿ ಭವನದಲ್ಲಿದ್ದ ನಾಗೇಶ್‌ ಅವರ ಕಚೇರಿ ಮತ್ತು ರಾಷ್ಟ್ರೀಯ ಕ್ರೀಡಾ ಗ್ರಾಮದಲ್ಲಿರುವ ಅವರ ಮನೆಯ ಮೇಲೆ ಎಸಿಬಿ ಅಧಿಕಾರಿಗಳು 2017ರ ಮೇ ತಿಂಗಳಲ್ಲಿ ದಾಳಿ ನಡೆಸಿದ್ದರು.

ದಾಳಿ ವೇಳೆ ₹20 ಲಕ್ಷ ಮೌಲ್ಯದ 55 ವಿದೇಶಿ ಕೈಗಡಿಯಾರಗಳು, ₹60 ಲಕ್ಷ ಮೌಲ್ಯದ ವಜ್ರದ ಆಭರಣ, ₹47 ಲಕ್ಷ ಮೌಲ್ಯದ 1.8 ಕೆ.ಜಿ ಚಿನ್ನದ ಆಭರಣಗಳು, ₹6 ಲಕ್ಷ ಮೌಲ್ಯದ 17.8 ಕೆ.ಜಿ ಬೆಳ್ಳಿ, ₹3 ಲಕ್ಷ ಮೌಲ್ಯದ 36 ಬಾಟಲ್‌ ವಿದೇಶಿ ಮದ್ಯ, ₹2.25 ಲಕ್ಷ ನಗದು, 1,559 ಅಮೆರಿಕ ಡಾಲರ್‌, ₹45 ಸಾವಿರ ಮೌಲ್ಯದ ಅಮಾನ್ಯಗೊಂಡ ನೋಟುಗಳು ಮತ್ತು ₹15 ಲಕ್ಷ ಮೊತ್ತದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿತ್ತು ಎಂದು ಎಸಿಬಿ ಮೂಲಗಳು ತಿಳಿಸಿದ್ದವು.

ನಾಗೇಶ್‌, ಮುಳಬಾಗಿಲಿನಲ್ಲಿ ₹3.5 ಕೋಟಿ ಬಾಳುವ ನಾಲ್ಕು ಮಹಡಿ ಕಟ್ಟಡ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಪ್ರದೇಶದಲ್ಲಿ ಪತ್ನಿ ಹೆಸರಿನಲ್ಲಿ ₹1.4 ಕೋಟಿ ಮೌಲ್ಯದ ಒಂದು ಎಕರೆ ಜಮೀನು, ಆನೇಕಲ್‌ ತಾಲ್ಲೂಕಿನಲ್ಲಿ ₹21 ಲಕ್ಷ ಮೊತ್ತದ 4 ಗುಂಟೆ ಕೃಷಿ ಭೂಮಿ, ತಾವರೆಕೆರೆಯಲ್ಲಿ ಪುತ್ರನ ಹೆಸರಲ್ಲಿ 30 X 40 ಅಡಿ ಅಳತೆ ನಿವೇಶನ. ಚನ್ನಸಂದ್ರದಲ್ಲಿ ಎರಡು ಮನೆ, ಬೊಮ್ಮನಹಳ್ಳಿಯಲ್ಲಿ ಒಂದು ಮನೆ ಹಾಗೂ ಎಚ್‌ಎಎಲ್‌ 2ನೇ ಹಂತದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಹೊಂದಿದ್ದಾರೆ ಎಂದು ಎಸಿಬಿ ಆರೋಪಿಸಿತ್ತು.

ನಿಗದಿಗಿಂತ ಅಧಿಕ ಪ್ರಮಾಣದಲ್ಲಿ ವಿದೇಶಿ ಮದ್ಯ ಇಟ್ಟುಕೊಂಡಿದ್ದ ನಾಗೇಶ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿ  ಅಬಕಾರಿ ಇಲಾಖೆಗೂ ಆಗ ಎಸಿಬಿ ಪತ್ರ ಬರೆದಿತ್ತು.

ಎಸಿಬಿ ದಾಳಿ ನಡೆದ ಒಂದು ವರ್ಷದ ಬಳಿಕ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನಾಗೇಶ್‌ ಮುಳಬಾಗಿಲು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಆನಂತರ ಕಾಂಗ್ರೆಸ್‌ ಸಹ ಸದಸ್ಯರಾಗಿ ಸೇರ್ಪಡೆಯಾಗಿದ್ದರು. ಈಚೆಗೆ ಬಿಜೆಪಿ ರಾಜ್ಯ ನಾಯಕರು ನಡೆಸಲು ಯತ್ನಿಸಿದ ‘ಆಪರೇಷನ್‌ ಕಮಲ’ದಲ್ಲೂ ಇವರ ಹೆಸರು ಕೇಳಿಬಂದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !