ಗುರುವಾರ , ಜೂನ್ 4, 2020
27 °C
‘ಪ್ರಜಾವಾಣಿ ಫೋನ್‌ ಇನ್‌’ನಲ್ಲಿ ಮನೋತಜ್ಞ ಡಾ.ವಿನಯ್‌ ಸಲಹೆ

ಲಾಕ್‌ಡೌನ್ ಸಂಕಷ್ಟಕ್ಕೆ ಮನೋತಜ್ಞರ ಸಲಹೆ:ವಾಸ್ತವ ಒಪ್ಪಿಕೊಳ್ಳಿ, ಚಟುವಟಿಕೆಯಿಂದಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ‘ಅಚಾನಕ್‌ ಆಗಿ ಬಂದು ಅಪ್ಪಳಿಸಿರುವ ಕೊರೊನಾದ ಕಠೋರ ವಾಸ್ತವವನ್ನು ಒಪ್ಪಿಕೊಂಡು ವರ್ತಮಾನದಲ್ಲಿ ಜೀವಿಸಬೇಕು. ಇದರಿಂದ ಮಾನಸಿಕ ಸಮತೋಲನ ಕಾಪಾಡಿಕೊಂಡು ಬದುಕು ಮುನ್ನಡೆಸಲು ಸಾಧ್ಯ!

ಕೋವಿಡ್‌–19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಇದ್ದಕ್ಕಿದ್ದಂತೆ ಜೀವನ ಬೇರೊಂದು ಆಯಾಮಕ್ಕೆ ದೂಡಲ್ಪಟ್ಟಿದೆ. ಆಧುನಿಕ ಯುಗದ ನಾಗಾಲೋಟಕ್ಕೆ ‘ಬ್ರೇಕ್‌’ ಬಿದ್ದ ಪರಿಣಾಮ ಸಾಕಷ್ಟು ಜನ ಖಿನ್ನತೆ, ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ. ಇವರೆಲ್ಲರಿಗೂ ನಿಮ್ಹಾನ್ಸ್‌ನ ಮನೋತಜ್ಞ ಡಾ.ಬಿ.ವಿನಯ್‌ ನೀಡಿರುವ ಸೂತ್ರವೆಂದರೆ ‘ವಾಸ್ತವ’ ಒಪ್ಪಿಕೊಂಡು ಅದಕ್ಕೆ ತಕ್ಕಂತೆ ಬದುಕಿನ ಬಂಡಿ ಸಾಗಿಸುವುದು. ಇದರಿಂದ ಮನಸ್ಸು ನಿರಾಳಗೊಳ್ಳುತ್ತದೆ ಎಂಬುದು ಅವರ ಸಲಹೆ.

ಕೆಲಸವಿಲ್ಲದೆ ಮನೆಯಲ್ಲಿ ಕೂತಿರುವುದು, ಹೊಸ್ತಿಲು ಬಿಟ್ಟು ಹೋಗಲು ಸಾಧ್ಯವಾಗದೇ ಇರುವುದು, ಬೀಡಿ, ಸಿಗರೇಟು, ತಂಬಾಕು ಮತ್ತು ಮದ್ಯ ಸಿಗದೇ ಇರುವುದು, ಹಣಕಾಸಿನ ಸ್ಥಿತಿ ಬಿಗಡಾಯಿಸಿರುವುದು, ಕೆಲಸ ಕಳೆದುಕೊಳ್ಳುವ ಭೀತಿ ಹೀಗೆ ಹಲವು ಆತಂಕಗಳು ಸಾರ್ವಜನಿಕರನ್ನು ಪೆಡಂಭೂತಗಳಂತೆ ಕಾಡುತ್ತಿವೆ.

ಮನೆಯಲ್ಲಿ ಕೂರುವುದು ಒತ್ತಾಯ ಪೂರ್ವಕ ಎಂದು ಭಾವಿಸದೇ, ಜವಾಬ್ದಾರಿಯ ಮನಸ್ಥಿತಿ ತಂದುಕೊಳ್ಳಬೇಕು. ಎಷ್ಟು ದಿನಗಳು ಲಾಕ್‌ಡೌನ್ ಮುಂದುವರಿಯುತ್ತದೆಯೋ ಗೊತ್ತಿಲ್ಲ. ಆದರೆ, ಅಷ್ಟು ದಿನಗಳ ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲೇಬೇಕು. ಮನೆ ಕೆಲಸಗಳು, ಕುಟುಂಬದವರ ಜತೆ ಹೆಚ್ಚು ಸಮಯ ವಿನಿಯೋಗಿಸುವುದು, ಪುಸ್ತಕ ಓದುವುದು, ಸಂಗೀತ ಆಲಿಸುವುದು, ಧ್ಯಾನ, ಯೋಗ, ಪ್ರಾಣಾಯಾಮಗಳ ಅಭ್ಯಾಸ ಅಗತ್ಯ. ಇದರಿಂದ ಬೇಸರಗೊಳ್ಳುವುದು ತಪ್ಪುತ್ತದೆ ಎನ್ನುತ್ತಾರೆ ವಿನಯ್‌.

ಹಗಲು ನಿದ್ರಿಸಬೇಡಿ: ‘ಕಳೆದ 8 ತಿಂಗಳುಗಳಿಂದ ನಿದ್ದೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಈಗ ಮಾತ್ರೆಗಳು ಖಾಲಿಯಾಗಿದ್ದು, ರಾತ್ರಿ ನಿದ್ದೆ ಬರುತ್ತಿಲ್ಲ’ ಎಂದು ಚಿಕ್ಕಮಗಳೂರಿನ ಮನೋಜ್ ಕರೆ ಮಾಡಿ ಬೇಸರ ವ್ಯಕ್ತಪಡಿಸಿದರು.

‘ನಿರ್ದಿಷ್ಟ ಸಮಯದಲ್ಲಿ ರಾತ್ರಿ ನಿದ್ದೆಗೆ ತೆರಳುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಹಗಲು ಹೊತ್ತು ಮಲಗಿದಲ್ಲಿ ಕೆಲವರಿಗೆ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ’ ಎಂದು ವಿನಯ್‌ ಅವರು ತಿಳಿಸಿದರು.

ಮನೋತಜ್ಞರು ನೀಡಿದ ಸಲಹೆಗಳು

* ಇವತ್ತಿನ ಬಗ್ಗೆ ಹೆಚ್ಚು ‘ಫೋಕಸ್’ ಆಗಿ ಯೋಚಿಸಬೇಕು. ನಾಳೆಯ ಬಗ್ಗೆ ಚಿಂತಿಸಿ ಗಾಬರಿಗೊಳ್ಳಬಾರದು.

* ಕ್ರಿಕೆಟ್‌ ಮ್ಯಾಚ್‌ ನೋಡಿದಂತೆ ದಿನವಿಡೀ ಸುದ್ದಿ ವಾಹಿನಿಗಳನ್ನು ನೋಡಬಾರದು. ಬದಲಿಗೆ
ಮನಸ್ಸಿಗೆ ಮುದ ನೀಡುವ ಮನರಂಜನೆ ಕಾರ್ಯಕ್ರಮ ನೋಡುವುದು ಸೂಕ್ತ

* ಮದ್ಯಪಾನ, ತಂಬಾಕು, ಸಿಗರೇಟ್‌ ಅಭ್ಯಾಸ ಬಿಡಲು ಸದವಕಾಶ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು