ಗುರುವಾರ , ಜುಲೈ 29, 2021
21 °C

ವಿದ್ಯುತ್‌ ಕಾಯ್ದೆಗೆ ತಿದ್ದುಪಡಿ: ರಾಜ್ಯಗಳ ಪವರ್‌ಗೆ ಕೇಂದ್ರ ಕತ್ತರಿ

ಎಂ.ಜಿ. ದೇವಸಹಾಯಂ Updated:

ಅಕ್ಷರ ಗಾತ್ರ : | |

ತಿದ್ದುಪಡಿಯಲ್ಲಿರುವ ಅಂಶಗಳು ದುರ್ಬಲ ವರ್ಗಗಳಿಗೆ ವಿದ್ಯುತ್‌ ಸುಲಭವಾಗಿ ಸಿಗದಂತೆ ಮಾಡುತ್ತವೆ. ವಿದ್ಯುತ್‌ ಮೇಲಿನ ಹಿಡಿತ ಕೇಂದ್ರೀಕೃತವಾಗಲಿದ್ದು, ದೊಡ್ಡ ಕಂಪನಿಗಳಿಗೆ ಅನುಕೂಲ ಮಾಡಿಕೊಡುತ್ತವೆ. ಗ್ರಾಹಕರ ಮೇಲೂ ಹೊರೆ ಬೀಳಲು ಕಾರಣವಾಗುತ್ತವೆ...

ಕೊರೊನಾ ಬಿಕ್ಕಟ್ಟಿನಿಂದ ವಿಧಿಸಲಾದ ಲಾಕ್‌ಡೌನ್‌ ನಡುವೆಯೇ ಕೇಂದ್ರ ಸರ್ಕಾರವು ಹಲವು ಮಹತ್ವದ ಕಾಯ್ದೆಗಳಿಗೆ ರಹಸ್ಯವಾಗಿ ತಿದ್ದುಪಡಿ ಮಾಡಲು ಹವಣಿಸಿದೆ. ನೀತಿಗಳಲ್ಲಿ ಸರ್ಕಾರ ತರಲು ಹೊರಟಿರುವ ಇಂತಹ ಬದಲಾವಣೆಗಳು ದೇಶದ ರಾಜಕೀಯ ಮತ್ತು ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಕೇಂದ್ರ ಇಂಧನ ಸಚಿವಾಲಯವು ಏಪ್ರಿಲ್‌ 17ರಂದು ಪ್ರಕಟಿಸಿದ ವಿದ್ಯುತ್‌ (ತಿದ್ದುಪಡಿ) ಮಸೂದೆ–2020 ಸಹ ಅಂತಹ ನಡೆಗಳಲ್ಲೊಂದು. ಸಭೆಗಳು, ಸಂವಾದಗಳು, ಚರ್ಚೆಗಳು, ಪ್ರತಿಭಟನೆಗಳೆಲ್ಲ ಉಸಿರು ಕಳೆದುಕೊಂಡಿರುವ ಈ ಸನ್ನಿವೇಶದಲ್ಲಿ ಮಸೂದೆಯ ಕುರಿತು ಸಾರ್ವಜನಿಕರು ಪ್ರತಿಕ್ರಿಯಿಸಲು ಜೂನ್‌ 5ರವರೆಗೆ ಅವಕಾಶ ನೀಡಲಾಗಿದೆ.

ವಿದ್ಯುತ್‌ ಉತ್ಪಾದನೆ ಹಾಗೂ ಬಳಕೆಯಲ್ಲಿ ಭಾರತ, ಪ್ರಪಂಚದಲ್ಲಿ ಮೂರನೇ ಸ್ಥಾನದಲ್ಲಿದೆ. 2020ರ ಮಾರ್ಚ್‌ 31ರ ಮಾಹಿತಿ ಪ್ರಕಾರ, ಪ್ರತಿದಿನ 3.70 ಲಕ್ಷ ಮೆಗಾವಾಟ್‌ನಷ್ಟು ವಿದ್ಯುತ್‌ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ದೇಶವು ಹೊಂದಿದೆ. ಅದರಲ್ಲಿ ಶೇ 47ರಷ್ಟು ಖಾಸಗಿ, ಶೇ 28 ಕೇಂದ್ರ ಹಾಗೂ ಶೇ 25ರಷ್ಟು ರಾಜ್ಯ ಸರ್ಕಾರಗಳ ಸ್ವಾಮ್ಯತ್ವದ ಉತ್ಪಾದನಾ ಕಂಪನಿಗಳ ಪಾಲಿದೆ. ವಿದ್ಯುತ್‌ ವಿತರಣಾ ಜಾಲದಲ್ಲಿ ರಾಜ್ಯ ಸರ್ಕಾರಗಳದ್ದೇ (ಶೇ 57) ಸಿಂಹಪಾಲು. ಕೇಂದ್ರ ಸರ್ಕಾರ ಶೇ 27ರಷ್ಟು ಹಾಗೂ ಖಾಸಗಿ ಸಂಸ್ಥೆಗಳು ಶೇ 6ರಷ್ಟು ವಿದ್ಯುತ್‌ ವಿತರಣಾ ಜಾಲವನ್ನು ಹೊಂದಿವೆ. ದೆಹಲಿ, ನೊಯಿಡಾ, ಮುಂಬೈ ಹಾಗೂ ಕೋಲ್ಕತ್ತದಂತಹ ಕೆಲವು ನಗರಗಳನ್ನು ಹೊರತುಪಡಿಸಿದರೆ ಮಿಕ್ಕ ಕಡೆಗಳಲ್ಲಿ ಸರ್ಕಾರಿ ಸ್ವಾಮ್ಯದ ವಿತರಣಾ ಕಂಪನಿಗಳಿಂದಲೇ (ಡಿಸ್ಕಾಂಗಳು) ಗ್ರಾಹಕರಿಗೆ ವಿದ್ಯುತ್‌ ಪೂರೈಕೆ ಆಗುತ್ತಿದೆ. ಸಂವಿಧಾನದ ಪ್ರಕಾರ, ವಿದ್ಯುತ್‌ ಸಮವರ್ತಿ (ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡಕ್ಕೂ ಸಂಬಂಧ) ವಿಷಯವಾಗಿದೆ.

ನಮ್ಮ ಆರ್ಥಿಕತೆ ಮತ್ತು ವಿದ್ಯುತ್‌ ವಲಯದ ವಿಶಿಷ್ಟ ಗುಣಲಕ್ಷಣಗಳ ಕಾರಣಕ್ಕಾಗಿ ನಮ್ಮಲ್ಲಿ ವಿದ್ಯುತ್‌ ಉತ್ಪಾದನೆ ಹಾಗೂ ಪೂರೈಕೆಯು ಆರ್ಥಿಕ ದೃಷ್ಟಿಯಿಂದ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಕ್ಷಮತೆಯಿಂದಲೂ ಕೂಡಿಲ್ಲ. 1995-96ರಲ್ಲಿ ಪ್ರಾರಂಭಿಸಲಾದ ಆರ್ಥಿಕ ಸುಧಾರಣೆ ಭಾಗವಾಗಿ ವಿಶ್ವಬ್ಯಾಂಕ್ ಪ್ರಣೀತ ಹಾಗೂ ಮಾರುಕಟ್ಟೆ ಆಧಾರಿತ ವಿದ್ಯುತ್‌ ನಿರ್ವಹಣಾ ಮಾದರಿಯನ್ನು ದೇಶ ಅಳವಡಿಸಿಕೊಂಡಿದೆ. ಅದರ ಪರಿಣಾಮವೇ ಮೊದಲಿದ್ದ ರಾಜ್ಯ ವಿದ್ಯುತ್‌ ಮಂಡಳಿಗಳ (ಎಸ್‌ಇಬಿ) ಬದಲು ವಿದ್ಯುತ್‌ ಉತ್ಪಾದನೆ, ಪ್ರಸರಣ ಹಾಗೂ ಹಂಚಿಕೆಗೆ ಬೇರೆ, ಬೇರೆ ಸಂಸ್ಥೆಗಳನ್ನು ಆರಂಭಿಸಿದ್ದು. ಅವುಗಳಿಗೆ ಲಾಭದ ದಾಹ ಹಾಗೂ ಆರ್ಥಿಕ ಹಿತಾಸಕ್ತಿಯೇ ಮುಖ್ಯವಾಗಿದ್ದುದು ಈಗ ಇತಿಹಾಸ. ಸಾರ್ವಜನಿಕ–ಖಾಸಗಿ ಸಹಭಾಗಿತ್ವದ ವಿದ್ಯುತ್‌ ಉತ್ಪಾದನಾ ಘಟಕಗಳ ಸ್ಥಾಪನೆಗೂ ಇದರಿಂದ ಅವಕಾಶ ತೆರೆಯಿತು.

ವಿದೇಶಗಳಿಂದ ಬಂದ ಸ್ವತಂತ್ರ (ಖಾಸಗಿ) ವಿದ್ಯುತ್‌ ಉತ್ಪಾದಕರು (ಐಪಿಪಿ), ಇಲ್ಲಿ ಘಟಕಗಳನ್ನು ಸ್ಥಾಪಿಸಿ, ಉತ್ಪಾದನೆ ಮಾಡಿದ ವಿದ್ಯುತ್‌ಅನ್ನು ಸಾಧ್ಯವಾದಷ್ಟು ಹೆಚ್ಚಿನ ದರಕ್ಕೆ ಎಸ್‌ಇಬಿಗಳಿಗೆ ಮಾರಾಟ ಮಾಡಲು ಹಾತೊರೆದರು. ಆದರೆ, ಅಷ್ಟರಲ್ಲಾಗಲೇ ಎಸ್‌ಇಬಿಗಳು ದಿವಾಳಿ ಅಂಚಿಗೆ ಬಂದು ನಿಂತಿದ್ದರಿಂದ ಅದು ಸಾಧ್ಯವಾಗಲಿಲ್ಲ. ಬದಲು ಎನ್ರಾನ್‌ನಂತಹ ಹಗರಣಗಳು ನಡೆದವು. ಅದು 2002ರ ಸಮಯ. ವಿಶ್ವಬ್ಯಾಂಕ್‌ ಹಾಗೂ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ಗಳು ವಿದ್ಯುತ್‌ ವಲಯದ ಯೋಜನೆಗಳ ಹೂಡಿಕೆಯಿಂದ ಹಿಂದೆ ಸರಿದವು. ಸಮಸ್ಯೆಯನ್ನು ಪರಿಹರಿಸಬೇಕಿದ್ದ ಸುಧಾರಣೆಗಳು ಹೊಸ ಸಂಕಷ್ಟಗಳನ್ನು ತಂದಿಟ್ಟಿದ್ದವು. ಈ ಸನ್ನಿವೇಶದಲ್ಲಿ ವಿದ್ಯುತ್‌ ಕಾಯ್ದೆ–2003ಅನ್ನು ಅನುಷ್ಠಾನಕ್ಕೆ ತರಲಾಯಿತು. ಪೂರೈಕೆ ವ್ಯವಸ್ಥೆಯಲ್ಲಿ ಸ್ಪರ್ಧೆಯನ್ನು ಹುಟ್ಟುಹಾಕುವ ಜತೆಗೆ ಗ್ರಾಹಕರ ಹಿತರಕ್ಷಣೆ ಮಾಡುವುದು ಕಾಯ್ದೆಯ ಮುಖ್ಯ ಉದ್ದೇಶವಾಗಿತ್ತು. ರಾಷ್ಟ್ರೀಯ ವಿದ್ಯುತ್‌ ದರ ನೀತಿ, ಗ್ರಾಮೀಣ ಭಾಗಗಳಿಗೆ ವಿದ್ಯುತ್‌ ಪೂರೈಕೆ, ವಿದ್ಯುತ್‌ ನಿಯಂತ್ರಣ ಆಯೋಗಗಳ ರಚನೆ, ಮೀಟರ್‌ಗಳ ಕಡ್ಡಾಯ ಅಳವಡಿಕೆ, ವಿದ್ಯುತ್‌ ಕಳ್ಳತನ ತಡೆಗಟ್ಟಲು ಭಾರಿ ದಂಡ ವಿಧಿಸುವಿಕೆ – ಹೀಗೆ ಹಲವು ಉದ್ದೇಶಗಳು ಈ ಕಾಯ್ದೆಯ ಹಿಂದಿದ್ದವು. ಎಲ್ಲ ಹಳೆಯ ವಿದ್ಯುತ್‌ ಕಾಯ್ದೆಗಳು, ಈ ಹೊಸ ಕಾಯ್ದೆಯ ಮೂಲಕ ರದ್ದುಗೊಂಡವು.

ತೆರೆದ ಬಾಗಿಲು

ಸುಧಾರಣಾ ಕ್ರಮಗಳಲ್ಲಿ ನಿಬಂಧನೆಗಳ ಸಡಿಲಿಕೆಯ ಲಾಭವನ್ನು ಪಡೆದ ಖಾಸಗಿ ವಲಯವು ದೊಡ್ಡ ದೊಡ್ಡ ವಿದ್ಯುತ್‌ ಉತ್ಪಾದನಾ ಘಟಕಗಳನ್ನು ಸ್ಥಾಪಿಸುತ್ತಾ ಹೋಯಿತು. ಈಗ ದೇಶದ ವಿದ್ಯುತ್‌ ಉತ್ಪಾದನೆಯಲ್ಲಿ ಅದರ ಪಾಲು ಶೇ 47ಕ್ಕೆ ಏರಿದೆ. ಎಲ್ಲ ಉತ್ಪಾದನಾ ಘಟಕಗಳೂ ವಿದ್ಯುತ್‌ ಖರೀದಿಗಾಗಿ ಡಿಸ್ಕಾಂಗಳ ಜತೆ ಒಪ್ಪಂದ ಮಾಡಿಕೊಂಡಿವೆ. ಬೇಡಿಕೆ ಅಷ್ಟಾಗಿಲ್ಲದಿದ್ದರೂ ಅತ್ಯಧಿಕ ದರ ತೆತ್ತು ವಿದ್ಯುತ್‌ ಖರೀದಿಗೆ ಡಿಸ್ಕಾಂಗಳು ಹಿಂದೇಟು ಹಾಕುತ್ತಿವೆ. ಖರೀದಿ ಮಾಡಿದ ಪ್ರಕರಣಗಳಲ್ಲೂ ಶುಲ್ಕ ಪಾವತಿ ಬಾಕಿಯಿದೆ. ಹೀಗಾಗಿ ಖಾಸಗಿ ವಲಯದ ಘಟಕಗಳ ಸಾಮರ್ಥ್ಯದ ಶೇ 57ರಷ್ಟು ಪ್ರಮಾಣದ ವಿದ್ಯುತ್‌ ಮಾತ್ರ ಈಗ ಉತ್ಪಾದನೆ ಆಗುತ್ತಿದೆ. ಖಾಸಗಿ ವಿದ್ಯುತ್‌ ಘಟಕಗಳು ಬಹುದೊಡ್ಡ ಮೂಲಸೌಕರ್ಯ ಹೊಂದಿದ್ದರೂ ಅನುತ್ಪಾದಕ ಸ್ಥಿತಿಯಲ್ಲಿ ಉಳಿಯುವಂತಾಗಿದೆ. ಈ ಬಿಕ್ಕಟ್ಟು ಹೆಚ್ಚಿರುವ ಈ ಹಂತದಲ್ಲಿ ಸರ್ಕಾರ ಮತ್ತೆ ಪೂರೈಕೆಯನ್ನೇ ಕೇಂದ್ರವಾಗಿ ಇಟ್ಟುಕೊಂಡು ಸುಧಾರಣೆ ತರಲು ಹೊರಟಿದೆ. ತಿದ್ದುಪಡಿ ಮಸೂದೆಯಲ್ಲಿ ಅದಕ್ಕೆ ಹೆಚ್ಚಿನ ಪ್ರಾಧಾನ್ಯ ಸಿಕ್ಕಿದೆ.

ಪ್ರಸ್ತಾವಿತ ತಿದ್ದುಪಡಿ ಪ್ರಕಾರ, ಒಂದು ಪ್ರದೇಶದಲ್ಲಿ ಒಂದಕ್ಕಿಂತ ಹೆಚ್ಚಿನ ಪೂರೈಕೆ ಕಂಪನಿಗಳು ಇರಬಹುದು. ಗ್ರಾಹಕನು ತನಗೆ ಬೇಕಾದ ಪೂರೈಕೆ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ವಿಶ್ವಬ್ಯಾಂಕ್‌ ಪ್ರಣೀತ ಇಂತಹ ಮಾದರಿ ಈಗಾಗಲೇ ವಿಫಲವಾದ ಉದಾಹರಣೆ ಕಣ್ಣಮುಂದಿದೆ. ಫ್ರಾಂಚೈಸಿ ಮತ್ತು ಸಬ್‌ ಫ್ರಾಂಚೈಸಿ ರೂಪದಲ್ಲಿ ಡಿಸ್ಕಾಂಗಳ ಖಾಸಗೀಕರಣ ಮಾಡಲೂ ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಲಾಭದಾಯಕ ಫ್ರಾಂಚೈಸಿಗಳು ಖಾಸಗಿಯವರ ಪಾಲಾಗಲು, ನಷ್ಟದ ವಲಯಗಳೊಂದಿಗೆ ಡಿಸ್ಕಾಂಗಳು ಹೆಣಗಾಡುವಂತಾಗಲು ದಾರಿ ಮಾಡಿಕೊಡುತ್ತದೆ. ಎಲ್ಲಕ್ಕಿಂತ ಕೆಟ್ಟ ಪರಿಣಾಮ ಬೀರುವ ಸಂಗತಿ ಏನೆಂದರೆ ದರವನ್ನು ಕೇಂದ್ರೀಯ ಆಯೋಗ ನಿಗದಿ ಮಾಡುವುದು. ಬೆಲೆ ಸ್ಪರ್ಧಾತ್ಮಕವಾಗಿ ನಿಗದಿಯಾಗದ ಕಾರಣ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳುವುದು ಖಚಿತ. ನವೀಕರಿಸಬಹುದಾದ ಇಂಧನ ಮೂಲಗಳಿಗೆ ತಿದ್ದುಪಡಿಯಲ್ಲಿ ಒತ್ತು ನೀಡಲಾಗಿದೆ. ಜಲ, ಪವನ, ಸೌರ, ಜೈವಿಕ ಅನಿಲ, ಜೈವಿಕ ಇಂಧನ –ಇವು ನವೀಕರಿಸಬಹುದಾದ ಇಂಧನದ ಮೂಲಗಳು ಎಂದು ವ್ಯಾಖ್ಯಾನಿಸಲಾಗಿದೆ. ಈ ಮೂಲಗಳಿಂದ ವಿದ್ಯುತ್‌ ಉತ್ಪಾದನೆಗೆ ಪ್ರೋತ್ಸಾಹ ನೀಡಲು ಹೊರಟಿರುವುದು ಸಕಾಲಿಕ ಕ್ರಮವಾಗಿದೆ.

ಕೇಂದ್ರ ಸರ್ಕಾರದ ಪಾರಮ್ಯ

ವಿದ್ಯುತ್‌ ವಲಯದಲ್ಲಿ ರಾಜ್ಯದ ಪಾತ್ರವನ್ನು ಕುಗ್ಗಿಸಿ, ಕೇಂದ್ರಕ್ಕೆ ಪ್ರಾಧಾನ್ಯ ಹೆಚ್ಚಿಸುವಂತೆ ಮಾಡಲು ತಿದ್ದುಪಡಿ ಅವಕಾಶ ಕಲ್ಪಿಸುತ್ತದೆ. ರಾಜ್ಯ ವಿದ್ಯುತ್‌ ನಿಯಂತ್ರಣ ಆಯೋಗಕ್ಕೆ (ಎಸ್‌ಇಆರ್‌ಸಿ) ರಾಜ್ಯ ಸರ್ಕಾರದ ಆಯ್ಕೆ ಸಮಿತಿಯೇ ಸದಸ್ಯರನ್ನು ಆಯ್ಕೆ ಮಾಡಲು ಹಾಲಿ ಕಾಯ್ದೆಯಲ್ಲಿ ಅವಕಾಶವಿದೆ. ಮಸೂದೆಗೆ ಅಂಗೀಕಾರ ದೊರೆತರೆ ಎಸ್‌ಇಆರ್‌ಸಿಗೆ ಸದಸ್ಯರ ನೇಮಕ ಮಾಡುವುದು ಕೇಂದ್ರ ಸರ್ಕಾರ ನೇಮಕ ಮಾಡಿದ ಸಮಿತಿ. ಇದರಿಂದ ಬೆಲೆ ನಿಗದಿ ಮಾಡುವ ಪ್ರಕ್ರಿಯೆಯಲ್ಲಿ ರಾಜ್ಯದ ಪಾತ್ರ ಗೌಣವಾಗಲಿದೆ. ವಿದ್ಯುತ್‌ ಖರೀದಿ–ಪೂರೈಕೆ ಕುರಿತ ವ್ಯಾಜ್ಯಗಳು ಇನ್ನುಮುಂದೆ ಕೇಂದ್ರ ಸರ್ಕಾರ ಅಧೀನದ ವಿದ್ಯುತ್‌ ಒಪ್ಪಂದ ಜಾರಿ ಪ್ರಾಧಿಕಾರ (ಎಸಿಇಎ) ವ್ಯಾಪ್ತಿಗೆ ಬರಲಿವೆ.

ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್‌ ಉತ್ಪಾದಿಸುವ ಘಟಕಗಳು ಸದಾ ಚಾಲ್ತಿಯಲ್ಲಿರಬೇಕು ಮತ್ತು ಅವುಗಳಿಂದ ಮೂಲ ದರದಲ್ಲೇ ವಿದ್ಯುತ್‌ ಖರೀದಿಸಬೇಕು ಎನ್ನುವ ನಿಯಮ ವಿದ್ಯುತ್‌ ದರ ಏರಿಕೆಗೂ ಕಾರಣವಾಗುವ ಸಾಧ್ಯತೆ ಇದೆ. ತಮಿಳುನಾಡಿನ ಉದಾಹರಣೆಯನ್ನೇ ತೆಗೆದುಕೊಂಡರೆ ಅದಾನಿ ಕಂಪನಿಯು ರಾಮನಾಥಪುರಂನಲ್ಲಿ 648 ಮೆಗಾವಾಟ್‌ ಸಾಮರ್ಥ್ಯದ ಸೌರ ವಿದ್ಯುತ್‌ ಘಟಕ ಹೊಂದಿದೆ. ಆ ಕಂಪನಿಯ 313 ಮೆಗಾವಾಟ್‌ ವಿದ್ಯುತ್‌ಅನ್ನು ಪ್ರತಿಯೂನಿಟ್‌ಗೆ ₹7.01ರಂತೆ, ಉಳಿದ 335 ಮೆಗಾವಾಟ್‌ ವಿದ್ಯುತ್‌ಅನ್ನು ಪ್ರತಿಯೂನಿಟ್‌ಗೆ ₹5.10ರಂತೆ ಖರೀದಿ ಮಾಡಲಾಗುತ್ತಿದೆ. ಆದರೆ, ಸೌರ ವಿದ್ಯುತ್‌ನ ಸದ್ಯದ ಮಾರುಕಟ್ಟೆ ದರ ಪ್ರತಿ ಯೂನಿಟ್‌ಗೆ ₹ 3ರಷ್ಟಿದೆ. ಸದಾ ಚಾಲ್ತಿಯಲ್ಲಿರಬೇಕು ಎಂಬ ಒಪ್ಪಂದದ ನಿಯಮವನ್ನೇ ಮುಂದಿಟ್ಟುಕೊಂಡು ತಮಿಳುನಾಡು ವಿದ್ಯುತ್‌ ಕಂಪನಿಗೆ ಹೆಚ್ಚಿನ ದರದಲ್ಲೇ ಖರೀದಿಸುವಂತೆ ಒತ್ತಾಯಿಸುತ್ತಿದೆ. ಹೊಸ ಇಸಿಇಎ ಅಸ್ತಿತ್ವಕ್ಕೆ ಬಂದು ಒಪ್ಪಂದದಂತೆ ನಡೆಯಲು ತಮಿಳುನಾಡು ವಿದ್ಯುತ್‌ ಕಂಪನಿಗೆ ಸೂಚಿಸಿದರೆ, ಒಂದೋ ಅದು ದಿವಾಳಿ ಆಗಬೇಕಾಗುತ್ತದೆ. ಇಲ್ಲದಿದ್ದರೆ ಆ ಹೊರೆಯನ್ನು ಗ್ರಾಹಕರ ಮೇಲೆ ಹೊರಿಸಬೇಕಾಗುತ್ತದೆ.

ತಿದ್ದುಪಡಿಯಲ್ಲಿರುವ ಅಂಶಗಳು ದುರ್ಬಲ ವರ್ಗಗಳಿಗೆ ವಿದ್ಯುತ್‌ ಸುಲಭವಾಗಿ ಸಿಗದಂತೆ ಮಾಡುತ್ತವೆ. ರಾಜ್ಯ ಸರ್ಕಾರಗಳು ಈ ವರ್ಗಗಳಿಗೆ ನೆರವು ನೀಡುವುದನ್ನೂ ತಪ್ಪಿಸುತ್ತವೆ. ವಿದ್ಯುತ್‌ ಮೇಲಿನ ಹಿಡಿತ ಕೇಂದ್ರೀಕೃತಗೊಳ್ಳಲು ಕಾರಣವಾಗಲಿದ್ದು, ದೊಡ್ಡ ಕಂಪನಿಗಳಿಗೆ ಅನುಕೂಲ ಮಾಡಿಕೊಡುತ್ತವೆ. ಗ್ರಾಹಕರ ಮೇಲೂ ಹೊರೆ ಹಾಕುತ್ತವೆ.

ವಿದ್ಯುತ್‌ ವಲಯದಲ್ಲಿ ರಾಜ್ಯಗಳ ಅಧಿಕಾರವನ್ನು ‘ಆಫ್‌’ ಮಾಡುವುದೇ ಈ ಕ್ರಮದ ಹಿಂದಿನ ಉದ್ದೇಶವೇ?

ಲೇಖಕ: ನಿವೃತ್ತ ಸೇನಾ ಹಾಗೂ ಐಎಎಸ್‌ ಅಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು