ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಶ್ರೀಮಂತ ಪಾಟೀಲ ನಾಪತ್ತೆ: ಮಾಹಿತಿ ನೀಡಲು ಗೃಹ ಸಚಿವರಿಗೆ ಸ್ಪೀಕರ್‌ ಆದೇಶ

Last Updated 18 ಜುಲೈ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ರೆಸಾರ್ಟ್‌ನಿಂದ ಬುಧವಾರ ರಾತ್ರಿ ನಾಪತ್ತೆಯಾಗಿರುವ ಶಾಸಕ ಶ್ರೀಮಂತಪಾಟೀಲ ಅವರು ಎಲ್ಲಿದ್ದಾರೆ ಮತ್ತು ಹೇಗಿದ್ದಾರೆ ಎಂಬುದರ ಬಗ್ಗೆ ತನಿಖೆ ಮಾಡಿಸಿ ಸಮಗ್ರ ಮಾಹಿತಿಯನ್ನು ಶುಕ್ರವಾರ ಸದನಕ್ಕೆ ಒಪ್ಪಿಸಬೇಕು ಎಂದು ಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್ ಗೃಹ ಸಚಿವ ಎಂ.ಬಿ.ಪಾಟೀಲರಿಗೆ ಆದೇಶ ನೀಡಿದರು.

‘ಮೊದಲಿಗೆ ಅವರ ಕುಟುಂಬದವರನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ. ಶಾಸಕರು ಎಲ್ಲಿದ್ದಾರೆ ಎಂಬುದನ್ನು ಪತ್ತೆ ಮಾಡಿ. ನೀವು ಮಾಡಲಾಗದಿದ್ದರೆ ಪೊಲೀಸ್‌ ಮಹಾ ನಿರ್ದೇಶಕರಿಗೆ ಸೂಚನೆ ನೀಡಬೇಕಾಗುತ್ತದೆ’ ಎಂದು ಅವರು ವಿಧಾನಸಭೆಯಲ್ಲಿ ಖಡಕ್‌ ಆಗಿ ತಿಳಿಸಿದರು.

‘ಶ್ರೀಮಂತಪಾಟೀಲ ಅವರನ್ನು ಅಪಹರಣ ಮಾಡಲಾಗಿದೆ ಎಂದು ಕಾಂಗ್ರೆಸ್‌ ಪಕ್ಷದವರು ಹೇಳುತ್ತಿದ್ದಾರೆ. ಆದರೆ, ಅವರ ಹೆಸರಿನಲ್ಲಿ ಬೆಳಿಗ್ಗೆ ನನಗೆ ಪತ್ರವೊಂದು ಬಂದಿದೆ. ಶಾಸಕರ ಲೆಟರ್‌ ಪ್ಯಾಡ್‌ ಅಲ್ಲದ ಆ ಪತ್ರದಲ್ಲಿ ಹೃದಯ ನೋವಿನಿಂದಾಗಿ ಮುಂಬೈನ ಸೆಂಟ್‌ಜಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು, ಸದನದ ಕಲಾಪಕ್ಕೆ ಗೈರಾಗುವುದಾಗಿಯೂ ತಿಳಿಸಲಾಗಿದೆ. ಲೆಟರ್‌ ಪ್ಯಾಡ್‌ನಲ್ಲಿ ಇಲ್ಲದ ಈ ಪತ್ರ ಮತ್ತು ಮಾಹಿತಿಯನ್ನು ನಂಬಲು ಸಾಧ್ಯವೇ’ ಎಂದು ರಮೇಶ್‌ ಕುಮಾರ್‌ ಪ್ರಶ್ನಿಸಿದರು.

‘ಪಾಟೀಲರನ್ನು ಅಪಹರಿಸಲಾಗಿದೆ. ಅವರನ್ನು ಮುಂಬೈಗೆ ಬಿಜೆಪಿಯ ಮಾಜಿ ಸಚಿವರೊಬ್ಬರು ಕರೆದೊ
ಯ್ದಿರುವುದಕ್ಕೆ ನಮ್ಮ ಬಳಿ ದಾಖಲೆಗಳು ಇವೆ’ ಎಂದುಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು. ತಮ್ಮ ಆರೋಪಕ್ಕೆ ಪೂರಕವಾಗಿ, ವಿಮಾನದ ಟಿಕೆಟ್‌ ಮತ್ತು ಆಸ್ಪತ್ರೆಯಲ್ಲಿ ಪಾಟೀಲ ಅವರು ಚಿಕಿತ್ಸೆ ಪಡೆಯುತ್ತಿರುವ ಚಿತ್ರಗಳನ್ನು ಸದನದಲ್ಲಿ ಪ್ರದರ್ಶಿಸಿದರು.

ತಂದೆ ಅಪಹರಣವಾಗಿಲ್ಲ ಪುತ್ರ ಯೋಗೇಶ ಸ್ಪಷ್ಟನೆ
ಬೆಳಗಾವಿ: ‘ನನ್ನ ತಂದೆಯನ್ನು ಯಾರೂ ಅಪಹರಿಸಿಲ್ಲ. ಅವರಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಅಣ್ಣ ಶ್ರೀನಿವಾಸನನ್ನು ಕರೆದುಕೊಂಡು, ಮುಂಬೈ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ’ ಎಂದು ಶಾಸಕ ಶ್ರೀಮಂತ ಪಾಟೀಲ ಅವರ ಎರಡನೇ ಪುತ್ರ ಯೋಗೇಶ ‍‍ಪಾಟೀಲ ಪೊಲೀಸರಿಗೆ ತಿಳಿಸಿದ್ದಾರೆ.

ನೆರೆಯ ಮಹಾರಾಷ್ಟ್ರದ ಸಾಂಗ್ಲಿಯಲ್ಲಿರುವ ತಮ್ಮ ನಿವಾಸಕ್ಕೆ ಗುರುವಾರ ಸಂಜೆ ಭೇಟಿ ನೀಡಿದ ಅಥಣಿ ಹಾಗೂ ಚಿಕ್ಕೋಡಿ ಪೊಲೀಸರಿಗೆ ಮಾಹಿತಿ ನೀಡಿದರು.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವ ಚರ್ಚೆ ಸಂದರ್ಭದಲ್ಲಿ ಗೈರುಹಾಜರಾಗಿದ್ದ ಶ್ರೀಮಂತ ಪಾಟೀಲ ಅವರನ್ನು ಬಿಜೆಪಿಯವರು ಅಪಹರಿಸಿದ್ದಾರೆ ಎಂದು ಕಾಂಗ್ರೆಸ್‌ ಶಾಸಕರು ದೂರಿದ್ದರು. ಇದರ ಸತ್ಯಾಸತ್ಯತೆ ಪರಿಶೀಲಿಸಲು ಪೊಲೀಸರು ಅಲ್ಲಿಗೆ ಭೇಟಿ ನೀಡಿದ್ದರು.

‘ಅವರಿಗೆ ಆಗಾಗ ಎದೆನೋವು ಕಾಣಿಸಿಕೊಳ್ಳುತ್ತದೆ. ಆಗ ಅವರು ಮುಂಬೈನಲ್ಲಿರುವ ಕುಟುಂಬದ ವೈದ್ಯರೊಬ್ಬರಿಗೆ ತೋರಿಸುತ್ತಾರೆ. ಅದೇ ರೀತಿ ಈ ಸಲವೂ ಅವರಿಗೆ ತೋರಿಸಲು ಹೋಗಿದ್ದಾರೆ. ಅವರ ಜೊತೆ ಅಣ್ಣ, ತಾಯಿ ಹಾಗೂ ಇತರ ಕುಟುಂಬದ ಸದಸ್ಯರು ಇದ್ದಾರೆ. ಅವರನ್ನು ಯಾರೂ ಅಪಹರಿಸಿಲ್ಲ. ಅವರು ನಮ್ಮ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ’ ಎಂದು ವಿವರಣೆ ನೀಡಿದರು.

ದೂರು ನೀಡಿಲ್ಲ: ‘ಶಾಸಕರ ಅಪಹರಣವಾಗಿದೆ ಎಂದು ವಿಧಾನಸಭೆಯಲ್ಲಿ ಚರ್ಚೆಯಾಗಿದೆಯೇ ಹೊರತು, ನಮಗೆ ಯಾರೂ ದೂರು ನೀಡಿಲ್ಲ. ಮುಂಜಾಗ್ರತಾ ಕ್ರಮವಾಗಿ ಶಾಸಕರ ಮನೆಗೆ ಭೇಟಿ ನೀಡಿರುವ ಸ್ಥಳೀಯ ಪೊಲೀಸರು, ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದಾರೆ. ಅಪಹರಣವಾಗಿಲ್ಲವೆಂದು ಅವರ ಪುತ್ರ ಹೇಳಿಕೆ ನೀಡಿದ್ದಾರೆ’ ಎಂದು ಐಜಿಪಿ (ಉತ್ತರ ವಲಯ) ಡಾ.ರಾಘವೇಂದ್ರ ಸುಹಾಸ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT