ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಗಳ ಉದ್ಯಾನ: ಹೇಳಿದಷ್ಟು ಸಲೀಸಲ್ಲ

ಮಲೆನಾಡಿನಲ್ಲಿ ಮಂಗನ ಕಾಯಿಲೆ ಹರಡಲು ಸಹಕಾರಿ ಆಗಲಿದೆ ಎಂಬುವ ವಾದವೂ ಕೇಳಿಬರುತ್ತಿದೆ
Last Updated 6 ನವೆಂಬರ್ 2019, 20:30 IST
ಅಕ್ಷರ ಗಾತ್ರ

ಶಿವಮೊಗ್ಗ/ಹೊಸನಗರ: ಮಲೆನಾಡಿನ ಭಾಗದಲ್ಲಿಹೆಚ್ಚುತ್ತಿರುವಮಂಗಗಳ ಹಾವಳಿ ತಪ್ಪಿಸಲು ಹೊಸನಗರ ತಾಲ್ಲೂಕಿನ ನಾಗೋಡಿ ಸಮೀಪ ‘ಮಂಗಗಳ ಉದ್ಯಾನ’ ನಿರ್ಮಿಸಲುಸರ್ಕಾರ ನಿರ್ಧರಿಸಿದೆ. ಇದು 'ಹೇಳಿದಷ್ಟು ಸಲೀಸಲ್ಲ’ ಎಂಬ ನಿಲುವು ವ್ಯಕ್ತವಾಗಿದೆ.

ಮಲೆನಾಡಿನ ಈ ಭಾಗಗಳಲ್ಲಿ ಮಂಗಗಳ ಉಪಟಳ ತೀವ್ರ ಸ್ವರೂಪವಾಗಿದೆ. ರೈತರ ಮನೆಗಳ ಮೇಲೆ ನಿರಂತರ ಆಕ್ರಮಣ ಮಾಡುವ ಮನೋಭಾವ ಬೆಳೆಸಿಕೊಂಡಿವೆ. ಮಂಗಗಳು ಮಾಡುತ್ತಿರುವ ಲೂಟಿಗೆ ಶಾಶ್ವತ ಮಾರ್ಗೋಪಾಯ ಅವಶ್ಯ. ಪಟಾಕಿ, ಹುಸಿ ಈಡು, ಬೆಂಕಿ ಹಾಕುವುದು, ಮಂಗಗಳನ್ನು ಹಿಡಿಯವುದು ಹೀಗೆ ಯಾವುದಕ್ಕೂ ಅವು ಬಗ್ಗದಿರುವಾಗ ‘ಮಂಗಗಳ ಉದ್ಯಾನ’ದ ಪರಿಕಲ್ಪನೆಮೂಡಿದೆ.

ಬಾಧಕವೇ ಹೆಚ್ಚು:ಮಂಗಗಳನ್ನು ಒಂದೆಡೆ ಕೂಡಿಡುವ ಪರಿಕಲ್ಪನೆಯೇ ನಗೆಪಾಟಲು. ಮಂಗಗಳನ್ನು ಹಿಡಿಯುವುದು ಸುಲಭವಲ್ಲ. ವಿಪರೀತ ಹಣ ಖರ್ಚು ಮಾಡಿ, ಹಿಡಿದರೂ ಅವುಗಳನ್ನು ಒಂದೆಡೆ ಕೂಡಿಟ್ಟುಕೊಳ್ಳುವುದು ಅಸಾಧ್ಯ. ಮಂಗಗಳನ್ನು ಹಿಡಿದು ಸಂತಾನಶಕ್ತಿ ಹರಣ ಚಿಕಿತ್ಸೆ ನಡೆಸುವುದು ಸಾಹಸದ ಕೆಲಸವಾದೀತು ಎಂಬ ಅಭಿಪ್ರಾಯ ಪರಿಸರ ಪ್ರೇಮಿಗಳದ್ದು.

ಮಲೆನಾಡ ಜನರನ್ನು ಮಂಗನ ಕಾಯಿಲೆ ಕಿತ್ತು ತಿಂದು ಹಾಕುತ್ತಿದೆ. ಈ ಕಾಲಘಟ್ಟದಲ್ಲಿ ಮಂಗಗಳ ಉದ್ಯಾನ ನಿರ್ಮಾಣವಾದಲ್ಲಿ ಮಂಗನ ಕಾಯಿಲೆ ಹರಡಲು ಸಹಕಾರಿ ಆಗಲಿದೆ. ಈ ಯೋಜನೆ ಕೈ ಬಿಡುವುದೇ ಉತ್ತಮ ಎಂಬ ವಾದವೂ ವ್ಯಕ್ತವಾಗಿದೆ.

ಸಮಸ್ಯೆ ಕಡಿವಾಣಕ್ಕೆಸಹಾಯಕ:‘ಬೇರೆ ದಾರಿ ಇಲ್ಲವಾದಾಗ ಅವುಗಳಿಗೆ ಉದ್ಯಾನ ನಿರ್ಮಾಣವೊಂದೇ ಅಂತಿಮ ಆಯ್ಕೆ. ಇದೊಂದು ಪರಿಕ್ಷಾರ್ಥ ಕ್ರಮ. ಯೋಜನೆ ಯಶಸ್ವಿಯಾದಲ್ಲಿ ಪೂರ್ಣ ಪ್ರಮಾಣದ ಜಾರಿಗೆ ಚಿಂತನೆ ನಡೆದಿದೆ’ ಎನ್ನುತ್ತಾರೆ ನಿಟ್ಟೂರು ಶೋಧ ಸಂಸ್ಥೆಯ ಪುರುಷೋತ್ತಮ ಬೆಳ್ಳಕ್ಕ.

100 ಎಕರೆ ಪ್ರದೇಶದಲ್ಲಿ ₹ 20 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ಈ ಉದ್ಯಾನ ಯಶಸ್ವಿಯಾದಲ್ಲಿ ನಂತರ ಗೊಂಡಾರಣ್ಯಕ್ಕೆ ಸ್ಥಳಾಂತರ ಮಾಡಲಾಗುವುದು ಎನ್ನುತ್ತಾರೆ ಅವರು.

‘ಉತ್ತರ ರಾಜ್ಯಗಳಲ್ಲಿ ಮಂಗಗಳ ಹಾವಳಿಯಿಂದ ಪಾರಾಗಲು ಸೇನೆ ಬಳಸಿ ಅವುಗಳನ್ನು ಗುಂಡಿಟ್ಟು ಕೊಂದ ಉದಾಹರಣೆ ಇದೆ. ಆದರೆ, ಮಲೆನಾಡಿನ ಭಾಗಗಳಲ್ಲಿ ಅವುಗಳನ್ನು ಪೂಜಿಸುವವರು ಇದ್ದಾರೆ. ಅವುಗಳ ಸಾಮೂಹಿಕ ಹತ್ಯೆ ಕಷ್ಟ’ ಎನ್ನುತ್ತಾರೆ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಜಿ.ವಿ ರವೀಂದ್ರ.

ಮಂಗಗಳ ಉದ್ಯಾನ: ಪ್ರಸ್ತಾವ ವ್ಯರ್ಥ
ಚಿಕ್ಕಮಗಳೂರು: ಪಾರ್ಕ್‌, ಸೋಲಾರ್‌ ಬೇಲಿ, ಕಂದಕ ನಿರ್ಮಿಸಿ ಮಂಗಗಳನ್ನು ನಿಯಂತ್ರಿಸಲಾಗದು. ಅದು ನೆಲ ಮತ್ತು ಮರದ ಮೇಲೆ ವಾಸಿಸುವ, ಓಡುವ ಮತ್ತು ಹಾರುವ ಪ್ರಾಣಿ. ಸ್ವಾಭಾವಿಕವಾಗಿ ಅದರ ನಿಯಂತ್ರಣ ಮಾಡಬೇಕೇ ಹೊರತು ಇಂಥ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂಬುದು ತಜ್ಞರ ಅಭಿಮತ.

‘ಮನುಷ್ಯರ ಒಡನಾಟ ಅಭ್ಯಾಸವಾಗಿರುವುದು, ಬೆಳೆ ತಿನ್ನುವುದು ರೂಢಿಯಾಗಿರುವುದು, ಅಕೇಶಿಯಾ ಪ್ಲಾಂಟೆಷ್‌ನಗಳು ಜಾಸ್ತಿಯಾಗಿರುವುದು, ಹದ್ದುಗಳು ಕಡಿಮೆಯಾಗಿರುವುದು ಮಂಗಗಳ ಸಂತತಿ ಹೆಚ್ಚಳಕ್ಕೆ ಕಾರಣ’ ಎಂದು ಕೃಷಿಕ ಮತ್ತು ಹೋರಾಟಗಾರ ಕಲ್ಕುಳಿ ವಿಠಲ್‌ ಹೆಗ್ಗಡೆ ವಿಶ್ಲೇಷಿಸುತ್ತಾರೆ. ‘ಕಾಡಿನಲ್ಲಿ ಹಣ್ಣು ಸಿಗುತ್ತಿಲ್ಲ ಹೀಗಾಗಿ ಮಂಗಗಳು ನಾಡಿನತ್ತ ಮುಖಮಾಡಿವೆ ಎಂಬುದು ಶುದ್ಧ ಸುಳ್ಳು. ಮಂಗಗಳು ವರ್ಷಪೂರ್ತಿ ಹಣ್ಣನ್ನು ತಿನ್ನಲ್ಲ. ಅವು ಜಾಸ್ತಿ ತಿನ್ನುವುದು ಚಿಗುರೆಲೆ. ಒಂದು ಪ್ರದೇಶದ ಮಂಗ ಮತ್ತೊಂದು ಕಡೆಯದ್ದರ ಜತೆ ಇರಲ್ಲ. ಸರ್ಕಾರ ಈ ಪ್ರಸ್ತಾವ ಕೈಬಿಡುವುದು ಒಳಿತು’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

‘ಮನುಷ್ಯನ್ನು ಕಾಡುವ ಬಹಳಷ್ಟು ಸಾಂಕ್ರಾಮಿಕ ರೋಗಗಳು ಇಂಥ ಉದ್ಯಾನಗಳಲ್ಲಿ ಮಂಗಗಳಿಗೂ ಬರುವ ಸಾಧ್ಯತೆ ಇರುತ್ತದೆ. ಇದ್ದ ಜಾಗದಲ್ಲೇ ಅವುಗಳನ್ನು ಸ್ವಾಭಾವಿಕವಾಗಿ ನಿಯಂತ್ರಿಸಬೇಕು’ ಎಂಬುದು ಬೆಂಗಳೂರಿನ ಇನ್‌ಸ್ಟಿಟ್ಯೂಟ್‌ ಆಫ್‌ ಬಯೊಇನ್ಫರ್ಮೆಟಿಕ್ಸ್‌ ಅಂಡ್‌ ಅಪ್ಲೈಡ್‌ ಬಯೊಟೆಕ್ನಾಲಜಿ ಸಂಸ್ಥೆಯ ಪ್ರೊ.ಶಿವಕುಮಾರ ಸ್ವಾಮಿ ಅವರ ಸಲಹೆ.

ಪಶ್ಚಿಮ ಘಟ್ಟದಲ್ಲಿ 7 ಲಕ್ಷ ಮಂಗಗಳು
ಪಶ್ಚಿಮ ಘಟ್ಟಗಳ ಕಾಡುಗಳಿರುವ ಮಲೆನಾಡಿನ 8 ಜಿಲ್ಲೆಗಳ ವ್ಯಾಪ್ತಿಯಲ್ಲಿ ಸುಮಾರು 7 ಲಕ್ಷ ಮಂಗಗಳಿವೆ. ಅವುಗಳಿಂದ ವರ್ಷಕ್ಕೆ 1 ಲಕ್ಷ ರೈತರ ₹ 25 ಕೋಟಿಯಷ್ಟು ಬೆಳೆ ನಾಶವಾಗುತ್ತಿದೆ. ಹೀಗೆ ನಾಶವಾಗುವ ಬೆಳೆಗೆ ಪರಿಹಾರ ಕೊಡುವ ಪದ್ಧತಿಯನ್ನು ಪಂಚಾಯಿತಿ ಮಟ್ಟದಲ್ಲಿ ಪರಿಶೀಲನೆ ನಡೆಸುವ ಮೂಲಕ ಜಾರಿಗೆ ತರಬೇಕಿದೆ ಎಂದು ವೃಕ್ಷಲಕ್ಷ ಆಂದೋಲನದ ಅನಂತ ಹೆಗಡೆ ಅಶೀಸರ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT