ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಭೂಮಿ ಪೂಜೆ ಇಂದು

Last Updated 26 ಜೂನ್ 2020, 19:29 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಹಾಗೂ 23 ಎಕರೆ ವಿಸ್ತೀರ್ಣದ ಸೆಂಟ್ರಲ್ ಪಾರ್ಕ್ ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶನಿವಾರ ಭೂಮಿಪೂಜೆ ನೆರವೇರಿಸಲಿದ್ದಾರೆ.

‘ಕೋವಿಡ್–19 ಕಾರಣದಿಂದ ಈ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ, ಅರ್ಥಪೂರ್ಣವಾಗಿ ನೆರೆವೇರಿಸಲಾಗುತ್ತಿದೆ. ಹೆಚ್ಚು ಜನರನ್ನು ಸೇರಿಸುತ್ತಿಲ್ಲ, ಕೆಂಪೇಗೌಡರ ಮಾದರಿ ಪ್ರತಿಮೆಯನ್ನೂ ಮುಖ್ಯಮಂತ್ರಿಗಳು ಅನಾವರಣಗೊಳಿಸುವರು’ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕಾರ್ಯಕ್ರಮವನ್ನು ವರ್ಚುವಲ್ ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು. ಯು ಟ್ಯೂಬ್ ಸೇರಿ ಫೇಸ್‌ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಗಳಲ್ಲಿಯೂ http://bit.ly/kdbkar ಲಿಂಕ್ ಅನ್ನು ಕ್ಲಿಕ್ ಮಾಡಿ ವೀಕ್ಷಿಸಬಹುದು. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಆದಿ ಚುಂಚನಗಿರಿ ಮಠದ ನಿರ್ಮಲಾನಂದ ನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಅವರೂ ಸೇರಿ ಪ್ರತಿಪಕ್ಷ ನಾಯಕರು, ಸಂಬಂಧಿತ ಅಧಿಕಾರಿಗಳು ಪಾಲ್ಗೊಳ್ಳುವರು’ ಎಂದರು.

ಕೆಂಪಾಪುರ ಅಭಿವೃದ್ಧಿ

‘ಕೆಂಪೇಗೌಡರ ವೀರ ಸಮಾಧಿ ಇರುವ ಮಾಗಡಿ ತಾಲ್ಲೂಕಿನ ಕೆಂಪಾಪುರವನ್ನು ಜಾಗತಿಕ ಮಟ್ಟದ ಐತಿಹಾಸಿಕ ಪ್ರವಾಸಿ ತಾಣವಾಗಿ ರೂಪಿಸಲಾಗುತ್ತಿದೆ. ಇಡೀ ಗ್ರಾಮವನ್ನು ಕೆಂಪೇಗೌಡರ ಹೆಸರಿನಲ್ಲಿ ಅಭಿವೃದ್ಧಿ ಮಾಡಲಾಗುವುದು, ಸ್ಥಳೀಯರು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆ ಸೂಕ್ತ ವ್ಯವಸ್ಥೆ, ಕೆಂಪಾಪುರ ಕೆರೆಯ ಅಭಿವೃದ್ಧಿ ಮುಂತಾದ ಯೋಜನೆಗಳನ್ನು ಹಮ್ಮಿಕೊಂಡು ಈ ಗ್ರಾಮವನ್ನು ಸರ್ವಋತು ಪ್ರವಾಸಿ ತಾಣವನ್ನಾಗಿ ರೂಪಿಸಬೇಕೆಂಬ ಕನಸನ್ನು ಸಾಕಾರ ಮಾಡಲು ಪ್ರಯತ್ನಗಳನ್ನು ಆರಂಭಿಸಲಾಗಿದೆ’ ಎಂದು ಅಶ್ವತ್ಥನಾರಾಯಣ ಅವರು ಹೇಳಿದರು.

ನವನಗರ ನಿರ್ಮಾತೃ

‘ಬೆಂಗಳೂರು ಎಂಬ ನವನಗರ ನಿರ್ಮಾಣ ಮಾಡಿದವರುಕೆಂಪೇಗೌಡರು. ಎಲ್ಲಾ ಸಮುದಾಯಗಳಿಗೆ ಅನುಕೂಲವಾಗುವಂತೆ ಯೋಜನೆಯ ನಕ್ಷೆ ತಯಾರಿಸಿ, ತಮ್ಮ ಕಾಯಕ, ದುಡಿಮೆಯ ಮೂಲಕ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿದರು. ನಗರದಲ್ಲಿ ಸರ್ವರಿಗೂ ವೃತ್ತಿಗೆ ತಕ್ಕ ಪೇಟೆಗಳನ್ನು ನಿರ್ಮಿಸಿದವರು’ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ.

‘ನಗರದ ಮಧ್ಯಭಾಗದಲ್ಲಿ ಹಲವಾರು ಕೆರೆ ಕಟ್ಟೆಗಳನ್ನು ನಿರ್ಮಿಸಿ, ಜೀವ ವೈವಿಧ್ಯವನ್ನು ಸಮತೋಲನದಲ್ಲಿ ಇರಿಸಿದರು. ಉದ್ಯಾನಗಳನ್ನು ನಿರ್ಮಿಸುವ ಮೂಲಕ ದೇಶದ ಉದ್ಯಾನ ನಗರಿ, ಸ್ವಾಭಾವಿಕ ಹವಾನಿಯಂತ್ರಿತ ನಗರಿ ಎಂಬ ಹೆಗ್ಗಳಿಕೆ ಹೊಂದಿರುವ ಬೆಂಗಳೂರು ಇಂದು ವಿಶ್ವದ ಎಲ್ಲರನ್ನೂ ಸೂಜಿಗಲ್ಲಿನಂತೆ ತನ್ನೆಡೆಗೆ ಸೆಳೆಯುತ್ತಿದೆ’ ಎಂದು ಸ್ವಾಮೀಜಿ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT