ಮಂಗಳವಾರ, ನವೆಂಬರ್ 19, 2019
23 °C
ಕನ್ನಡದಲ್ಲಿ ಬ್ಯಾಂಕಿಂಗ್‌ ಪರೀಕ್ಷೆ ಬರೆಯಲು ಸಿಗದ ಅವಕಾಶ l ಜಾಲತಾಣದಲ್ಲೂ ಖಂಡನೆ

ಬ್ಯಾಂಕಿಂಗ್‌ ಪರೀಕ್ಷೆ : ಕೇಂದ್ರದ ನಿರ್ಲಕ್ಷ್ಯಕ್ಕೆ ವ್ಯಾಪಕ ಆಕ್ರೋಶ

Published:
Updated:

ಬೆಂಗಳೂರು: ಬ್ಯಾಂಕಿಂಗ್‌ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯಲು ಅವಕಾಶ ನೀಡಬೇಕೆಂಬ ಕೋರಿಕೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನಿರ್ಲಕ್ಷಿಸಿರುವುದಕ್ಕೆ ಕಾಂಗ್ರೆಸ್‌, ಜೆಡಿಎಸ್‌ ಸಹಿತ ಸಮಾಜದ ವಿವಿಧ ವಲಯಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌. ಡಿ. ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದ ಧೋರಣಿಗೆ ಟ್ವೀಟ್ ಮೂಲಕ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಹಲವು ಸಾಮಾಜಿಕ ಜಾಲತಾಣಗಳಲ್ಲಿ ಸಹ ನೂರಾರು ಮಂದಿ ಕೇಂದ್ರದ ಕನ್ನಡ ವಿರೋಧಿ ಕ್ರಮವನ್ನು ಖಂಡಿಸಿದ್ದಾರೆ.

‘ಕನ್ನಡ ನಾಡು–ನುಡಿ ಬಗೆಗಿನ ಮಲತಾಯಿ ಧೋರಣೆಯಿಂದ ಕೇಂದ್ರ ಸರ್ಕಾರ ಕನ್ನಡಿಗರ ಆತ್ಮಾಭಿಮಾನವನ್ನು ಕೆಣಕುತ್ತಿದೆ. ಹಿಂದಿ ಹೇರಿಕೆ, ನಾಡ ಧ್ವಜಕ್ಕೆ ಅಡ್ಡಗಾಲು, ನೆರೆ ಪರಿಹಾರದಲ್ಲಿ ನಿರ್ಲಕ್ಷ್ಯ ಮೊದಲಾದ ವಿಷಯಗಳಲ್ಲಿ ಕರ್ನಾಟಕದ ಕೂಗಿಗೆ ಬೆಲೆಯೇ ಇಲ್ಲದಂತಾಗಿದೆ. ಕನ್ನಡಿಗರ ಔದಾರ್ಯ ಮತ್ತು ಹೃದಯವಂತಿಕೆಯನ್ನು ದೌರ್ಬಲ್ಯ ಎಂದು ತಿಳಿಯಬೇಡಿ’ ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

‘ಕನ್ನಡಿಗರ ಹಲವಾರು ಬೇಡಿಕೆಗಳ ನಂತರವೂ ಕೇಂದ್ರ ಸರ್ಕಾರ ಐಬಿಪಿಎಸ್‌ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಿಲ್ಲ. ಮೊದಲು ಇದ್ದ ಪ್ರಾದೇಶಿಕ ನಿಯಮವನ್ನು ಮರು ಜಾರಿ ಮಾಡಿಲ್ಲ. ಇದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೇಂದ್ರ ಸರ್ಕಾರದ ಮಲತಾಯಿ ಧೋರಣಿಗೆ ಇದು ಸಾಕ್ಷಿ. ಇದನ್ನು ನಾನು ಖಂಡತುಂಡವಾಗಿ ವಿರೋಧಿಸುತ್ತೇನೆ’ ಎಂದು ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಕನ್ನಡಕ್ಕೆ ಕಿಮ್ಮತ್ತು ಕೊಡದ ಕೇಂದ್ರ

‘2014ಕ್ಕೂ ಮೊದಲು ಸ್ಥಳೀಯ ಬ್ಯಾಂಕಿಂಗ್‌ ಪರೀಕ್ಷೆ ಬರೆಯಲು ಕನ್ನಡ ಕಲಿಯುವಿಕೆ ಕಡ್ಡಾಯವಾಗಿತ್ತು. ಹಿಂದಿ ಹೇರಿಕೆ ಹುನ್ನಾರದಿಂದ ಕನ್ನಡಿಗರ ಉದ್ಯೋಗ ಕಿತ್ತುಕೊಳ್ಳಲಾಗುತ್ತಿದೆ. ರಾಜ್ಯದ ಎಲ್ಲ ಸಂಸದರು ಮತ್ತು ರಾಜ್ಯ ಸರ್ಕಾರ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕು’ ಎಂದು ಕೆಪಿಸಿಸಿ ಒತ್ತಾಯಿಸಿದೆ.

‘ಈ ಸರ್ಕಾರದಿಂದ ಕನ್ನಡಿಗರಿಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇಲ್ಲ, ಹಿಂದಿ ಗುಲಾಮರು, ಇಂಗ್ಲಿಷ್‌ ಗೊತ್ತಿದ್ದವರಿಗೆ ಮಾತ್ರ ಬ್ಯಾಂಕ್‌ ಕೆಲಸ’ ಎಂದು ಪ್ರವೀಣ್‌ ರಾಜ್‌ ಎಂಬುವವರು ಬೇಸರ ವ್ಯಕ್ತಪಡಿಸಿದ್ದಾರೆ. ‘ಕನ್ನಡದಲ್ಲಿ ಬರೆಯುವ ಪ್ರಿಂಟರ್‌ ಖರೀದಿಸಲು ಬಜೆಟ್‌ ಖಾಲಿಯಾಗಿದೆ’ ಎಂದು ಹುಂಚೀರಾಯ ಮಗೇರಿ ಎಂಬುವವರು ಚುಚ್ಚಿದ್ದಾರೆ. ‘25 ಸೀಟು ಸಿಕ್ಕಿದೆ ತಾನೆ, ಮುಂದಿನ ಚುನಾವಣೆಯಲ್ಲಿ ಹೊಸದಾಗಿ ಭರವಸೆ ನೀಡಿದರಾಯಿತು, ಈಗಿನ ರಾಜಕೀಯದಲ್ಲಿ ಇದೆಲ್ಲ ಹೊಸದೇನಲ್ಲ’ ಎಂದು ಚಂದು ನಾಯಕ ಎಂಬುವವರು ವಿಷಾದಿಸಿದ್ದಾರೆ.

 

"ರಾಜ್ಯದಿಂದ 25 ಮಂದಿ ಬಿಜೆಪಿ ಸಂಸದರು ಆಯ್ಕೆಯಾಗಿದ್ದು, ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡದಿರುವುದು ಕನ್ನಡಿಗರಿಗೆ ಬಗೆದ ದ್ರೋಹ"

-ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ

****

"ಕೇಂದ್ರದ ಸಂಬಂಧಪಟ್ಟ ಸಚಿವಾಲಯಗಳೊಂದಿಗೆ ಚರ್ಚಿಸಿ, ಕನ್ನಡದಲ್ಲಿ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಮಾಡಲು ಪ್ರಯತ್ನಿಸುತ್ತೇನೆ"
-ಪ್ರಹ್ಲಾದ ಜೋಶಿ,ಕೇಂದ್ರದ ಸಂಸದೀಯ ವ್ಯವಹಾರ ಸಚಿವ

ಪ್ರತಿಕ್ರಿಯಿಸಿ (+)