ಸೋಮವಾರ, ಜೂನ್ 1, 2020
27 °C

ಸೋಂಕು ನಿವಾರಕ ಚೇಂಬರ್‌ ನಿರ್ಮಾಣ; ಗಮನ ಸೆಳೆದ ಬೆಳಗಾವಿ ಕಂಪನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕೊರೊನಾ ಸೋಂಕು ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ಇಡೀ ದೇಹಕ್ಕೆ ಸೋಂಕು ನಿವಾರಕ ದ್ರಾವಣ ಸಿಂಪರಿಸುವ ಪ್ಲಾಸ್ಟಿಕ್‌ ಚೇಂಬರ್‌ವೊಂದನ್ನು ತಯಾರಿಸುವ ಮೂಲಕ ಬೆಳಗಾವಿಯ ಯಶವಂತ ಕಾಸ್ಟಿಂಗ್ಸ್‌ ಕಂಪನಿಯು ಗಮನ ಸೆಳೆದಿದೆ.

ಸ್ಯಾನಿಟೈಸರ್‌ ಬಳಸಿದರೆ ಕೇವಲ ಕೈ ಸ್ವಚ್ಛಗೊಳಿಸಬಹುದು. ಆದರೆ, ವೈರಾಣು ಬಟ್ಟೆ, ತಲೆಗೂದಲು ಅಥವಾ ಪಾದರಕ್ಷೆಗಳಿಗೆ ಅಂಟಿಕೊಂಡಿದ್ದರೆ ಅವುಗಳಿಂದ ರಕ್ಷಣೆ ಪಡೆಯಲು ಇಡೀ ದೇಹಕ್ಕೆ ಆಗಾಗ ಸೋಂಕು ನಿವಾರಕ ಸಿಂಪರಿಸುತ್ತಿರಬೇಕು. ಈ ಪರಿಕಲ್ಪನೆ ಆಧಾರದ ಮೇಲೆ ಕಂಪನಿಯ ಮಾಲೀಕ ವೀರ ಧವಲ್‌ ಚೇಂಬರ್‌ ನಿರ್ಮಿಸಿದ್ದಾರೆ. 

ಮೂಲತಃ ಇವರೊಬ್ಬ ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿದ್ದಾರೆ. ಬೆಳಗಾವಿಯ ಉದ್ಯಮಬಾಗ್‌ದಲ್ಲಿ ಕಾಸ್ಟಿಂಗ್‌ ತಯಾರಿಕಾ ಘಟಕ ಹೊಂದಿದ್ದಾರೆ. ವಿದೇಶಿ ಕಂಪನಿಗಳ ಜೊತೆ ಸಹಭಾಗಿತ್ವದಲ್ಲಿ ಗ್ರೀನ್‌ ಹೌಸ್‌ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರು ಮಾಡುತ್ತಾರೆ. ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್‌ ಚೇಂಬರ್‌ ತಯಾರಿಸಿದ್ದಾರೆ.

ಹೇಗೆ ಕಾರ್ಯನಿರ್ವಹಿಸುತ್ತದೆ?:

ಚಿಕ್ಕ ಕುಟೀರ ಮಾದರಿಯಲ್ಲಿ ಪ್ಲಾಸ್ಟಿಕ್‌ ಹೊದಿಕೆಯನ್ನು ತಯಾರಿಸಿದ್ದಾರೆ. ಪಕ್ಕದಲ್ಲಿ ಸೋಂಕು ನಿವಾರಕ ದ್ರಾವಣ ಇರುವ ಟ್ಯಾಂಕ್‌ ನಿರ್ಮಿಸಿದ್ದಾರೆ. ಈ ಟ್ಯಾಂಕ್‌ನಿಂದ ಪೈಪ್‌ ಮೂಲಕ ಹೊದಿಕೆಯ ಮೇಲೆ ಸಿಂಪರಿಸಲಾಗುತ್ತದೆ. ಚೇಂಬರ್‌ ದ್ವಾರದಲ್ಲಿ ಹ್ಯಾಂಡ್‌ ಸ್ಯಾನಿಟೈಸರ್‌ ಇಡಲಾಗಿದ್ದು, ಒಳಪ್ರವೇಶಿಸುವ ವ್ಯಕ್ತಿ ಇದನ್ನು ಹಚ್ಚಿಕೊಂಡು ಒಳಹೋಗಬೇಕು.

ಒಳಗೆ ಸೆನ್ಸರ್‌ ಅಳವಡಿಸಲಾಗಿದ್ದು, ವ್ಯಕ್ತಿಯು ಪ್ರವೇಶಿಸುತ್ತಿದ್ದಂತೆ ಸ್ವಯಂಚಾಲಿತವಾಗಿ ಮೇಲಿನಿಂದ ಸ್ಪ್ರೇ ಮಾದರಿಯಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪರಣೆಯಾಗುತ್ತದೆ. ವ್ಯಕ್ತಿ ಚೇಂಬರ್‌ ದಾಟಿ ಹೋಗುತ್ತಿದ್ದಂತೆ ಸ್ಪ್ರೇ ಸ್ವಯಂ ಚಾಲಿತವಾಗಿ ಸ್ಥಗಿತಗೊಳ್ಳುತ್ತದೆ.

ಜಿಲ್ಲಾಸ್ಪತ್ರೆಯಲ್ಲಿ ಅಳವಡಿಕೆ:

‘ಇದೇ ಮೊದಲ ಬಾರಿಗೆ ಇಂತಹದೊಂದು ಚೇಂಬರ್‌ ತಯಾರಿಸಿದ್ದೇನೆ. ಶಾಸಕ ಅಭಯ ಪಾಟೀಲ, ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯ್ತಿ ಸಿಇಒ ಡಾ.ರಾಜೇಂದ್ರ ಕೆ.ವಿ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಮಾದರಿಯನ್ನು ವೀಕ್ಷಿಸಿದರು. ಜಿಲ್ಲಾಸ್ಪತ್ರೆಯಲ್ಲಿ 2 ಹಾಗೂ ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಒಂದು ಅಳವಡಿಸಲು ಸೂಚಿಸಿದ್ದಾರೆ. 2–3 ದಿನಗಳಲ್ಲಿ ಅಳವಡಿಸಲಾಗುವುದು’ ಎಂದು ಕಂಪನಿಯ ಮಾಲೀಕ ವೀರ ಧವಲ್‌ ‘ಪ್ರಜಾವಾಣಿ’ಗೆ ಹೇಳಿದರು.

‘ಮುಂಬರುವ ದಿನಗಳಲ್ಲಿ ಸಾರ್ವಜನಿಕರಿಂದ ಅಥವಾ ದೊಡ್ಡ ದೊಡ್ಡ ಕಂಪನಿಗಳಿಂದ ಬೇಡಿಕೆ ಬಂದರೆ, ತಯಾರಿಸಿ ಮಾರಾಟ ಮಾಡಲಾಗುವುದು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು