ಭಾನುವಾರ, ಜೂಲೈ 5, 2020
23 °C

ಬಿರುಗಾಳಿ ಎಬ್ಬಿಸಿದ ಬಿಜೆಪಿ ಅತೃಪ್ತರ ಸಭೆ, ಬಿಜೆಪಿ ಮುಖಂಡರಿಂದ ವಿಭಿನ್ನ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿಯ ಅತೃಪ್ತ ಶಾಸಕರು ಗುರುವಾರ ರಾತ್ರಿ ನಗರದಲ್ಲಿ ನಡೆಸಿದ ಸಭೆ ರಾಜಕೀಯವಾಗಿ ಬಿರುಗಾಳಿ ಎಬ್ಬಿಸಿದೆ. ಶುಕ್ರವಾರ ಇನ್ನಷ್ಟು ಬಿಜೆಪಿ ಶಾಸಕರು ಮತ್ತು ಸಚಿವರು ಈ ಕುರಿತು ವಿಭಿನ್ನ ವ್ಯಾಖ್ಯಾನಗಳನ್ನು ಮಾಡಿದ್ದು, ಪಕ್ಷದಲ್ಲಿ ಮತ್ತೆ ಭಿನ್ನಮತ ತಲೆದೋರುವ ಲಕ್ಷಣಗಳು ಕಾಣುತ್ತಿವೆ.

ಕೊರೊನಾ ಕಾಲಿಡುವುದಕ್ಕೂ ಮುನ್ನ ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡವರು ಮತ್ತು ತಮ್ಮ ಕ್ಷೇತ್ರಗಳಲ್ಲಿ ಕೆಲಸಗಳು ಆಗುತ್ತಿಲ್ಲ ಎಂಬ ಕಾರಣಕ್ಕೆ ಶಾಸಕರು ಸಭೆಗಳನ್ನು ನಡೆಸಿ, ಮುಖ್ಯಮಂತ್ರಿ ಮತ್ತು ವರಿಷ್ಠರಿಗೆ  ಬಿಸಿ ಮುಟ್ಟಿಸಿದ್ದರು. ಸರ್ಕಾರ ಲಾಕ್‌ಡೌನ್‌ ಘೋಷಿಸಿದ ಬಳಿಕ, ಈ ಚಟುವಟಿಕೆಗಳಿಗೆ ತಡೆ ಬಿದ್ದಿತ್ತು.

ಲಾಕ್‌ಡೌನ್‌ ಸಡಿಲಿಸಿದ ನಂತರ ಹಿರಿಯ ಶಾಸಕ ಉಮೇಶ್‌ ಕತ್ತಿ ಎರಡನೇ ಬಾರಿಗೆ ರಹಸ್ಯ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಭಾಗವಹಿಸಿದ ಪ್ರಮುಖ ಶಾಸಕರೆಂದರೆ, ಬಸನಗೌಡ ಪಾಟೀಲ ಯತ್ನಾಳ, ಬಾಲಚಂದ್ರ ಜಾರಕಿಹೊಳಿ, ಶಿವರಾಜ್‌ ಪಾಟೀಲ, ರಾಜೂಗೌಡ, ಸುಭಾಷ್‌ ಗುತ್ತೇದಾರ್‌, ಗೂಳಿಹಟ್ಟಿ ಶೇಖರ್, ಸಿದ್ದು ಸವದಿ ಎಂದು ಮೂಲಗಳು ಹೇಳಿವೆ.

ನಾಯಕತ್ವ ಬದಲಾವಣೆಗೆ ಕೆಲವು ಶಾಸಕರು ಒತ್ತಾಯಿಸಿದ್ದಾರೆ ಎಂದು ಹೇಳಲಾಗಿದೆ.

ರಾತ್ರಿ ಬೆಳವಣಿಗೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೆಲವು ಶಾಸಕರ ಸಭೆಯನ್ನು ಕರೆದಿದ್ದಾರೆ ಎಂಬ ವದಂತಿ ಶುಕ್ರವಾರ ಹರಡಿತ್ತು. ಈ ಕುರಿತು ಟ್ವೀಟ್‌ ಮಾಡಿದ ಯಡಿಯೂರಪ್ಪ ಅವರು, ‘ಪಕ್ಷದ ಕೆಲವು ಶಾಸಕರೊಂದಿಗೆ ಚರ್ಚಿಸಲು ನಾನು ತುರ್ತು ಸಭೆ ಕರೆದಿದ್ದೇನೆ ಎನ್ನುವ ಸುದ್ದಿ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದನ್ನು ಗಮನಿಸಿದ್ದೇನೆ. ಇದು ಸತ್ಯಕ್ಕೆ ದೂರವಾದ ಸಂಗತಿ. ಅಂತಹ ಯಾವುದೇ ಸಭೆಯನ್ನು ನಾನು ಕರೆದಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ಈ ಬೆಳವಣಿಗೆ ಕುರಿತು ಸಚಿವರು ಮತ್ತು ಶಾಸಕರು ನೀಡಿರುವ ಹೇಳಿಕೆಗಳು

‘ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಬಸನಗೌಡ ಪಾಟೀಲ ಯತ್ನಾಳ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಮತ್ತಿತರರು ಸಭೆ ನಡೆಸಿದ್ದಾರೆ ಎನ್ನುವ ಬಗ್ಗೆ ನಾನು ಮಾಧ್ಯಮಗಳಲ್ಲಿ ನೋಡಿ ಕೇಳಿ ತಿಳಿದಿದ್ದೇನೆ. ಈ ಬಗ್ಗೆ ನನಗೇನೂ ಗೊತ್ತಿಲ್ಲ’

- ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ

***

ಸರ್ಕಾರ ಇನ್ನಷ್ಟು ಉತ್ತಮ ಆಡಳಿತ ನಡೆಸುವ ಅಗತ್ಯವಿದೆ. ಯಡಿಯೂರಪ್ಪ ಅವರು ವಯಸ್ಸಿಗೆ ಮೀರಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕೆಲವು ಸಚಿವರು ಅಭಿವೃದ್ಧಿ ಬಗ್ಗೆ ಗಮನಹರಿಸುತ್ತಿಲ್ಲ. ಇದು ಬಿಜೆಪಿ ಸರ್ಕಾರದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ.

- ಜಿ.ಎಚ್‌. ತಿಪ್ಪಾರೆಡ್ಡಿ, ಶಾಸಕ, ಚಿತ್ರದುರ್ಗ

***

ರೆಸಾರ್ಟ್‌ನಲ್ಲಿ ಬಿಜೆಪಿ ಶಾಸಕರು ಸಭೆ ನಡೆಸಿದ್ದರೆ ತಪ್ಪಿಲ್ಲ. ಒಂದೂವರೆ ತಿಂಗಳ ಲಾಕ್‌ಡೌನ್‌ನಿಂದ ಅವರು ಪರಸ್ಪರ ಭೇಟಿಯಾಗಲು ಆಗಿರಲಿಲ್ಲ. ಕ್ಷೇತ್ರಗಳ ಸಮಸ್ಯೆ ಕುರಿತು ಚರ್ಚಿಸಲು ಒಟ್ಟಿಗೆ ಸಭೆ ಸೇರಿರಬಹುದು. ವಿಧಾನಪರಿಷತ್ ಹಾಗೂ ರಾಜ್ಯಸಭಾ ಚುನಾವಣಾ ವಿಷಯವೂ ಇದೇ ವೇಳೆ ಚರ್ಚೆಗೆ ಬಂದಿದ್ದರೆ ಅದೂ ತಪ್ಪಲ್ಲ

- ರಮೇಶ್ ಜಾರಕಿಹೊಳಿ, ಜಲಸಂಪನ್ಮೂಲ ಸಚಿವ

***

ನನಗೆ ಮಂತ್ರಿ ಮಾಡಿ ಅಂತ ಯಾರ ಬಳಿಯೂ ಕೈಚಾಚುವುದಿಲ್ಲ. ಅಷ್ಟು ಸಣ್ಣವನೂ ಅಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುವವರೆಗೂ ಮಂತ್ರಿ ಮಾಡಿ ಎಂದು ಕೇಳುವುದಿಲ್ಲ. ಪಕ್ಷದಲ್ಲಿ ನಾನೂ ಹಿರಿಯವನಿದ್ದೇನೆ. ಊಟಕ್ಕೆಂದು ಸೇರಿದ್ದೆವು, ಕತ್ತಿಯನ್ನು ಮಂತ್ರಿ ಮಾಡಿ ಅಥವಾ ರಮೇಶ್ ಕತ್ತಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ಎಂದು ಒತ್ತಡ ಹೇರಿಲ್ಲ

- ಬಸನಗೌಡ ಪಾಟೀಲ ಯತ್ನಾಳ, ಶಾಸಕ, ವಿಜಯಪುರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು