ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಬಿಜೆಪಿ ಲೋಕಪಾಲರ ನೇಮಿಸಿಲ್ಲ: ಸಿದ್ದರಾಮಯ್ಯ

7
ಸ್ವಾಮಿನಾಥನ್ ವರದಿಯಂತೆ ಬೆಳೆಗೆ ಬೆಲೆ ನೀಡಿಲ್ಲ

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಬಿಜೆಪಿ ಲೋಕಪಾಲರ ನೇಮಿಸಿಲ್ಲ: ಸಿದ್ದರಾಮಯ್ಯ

Published:
Updated:

ಹುಬ್ಬಳ್ಳಿ: ‘ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಬಿಜೆಪಿ ಸರ್ಕಾರ, ಕಳೆದ 5 ವರ್ಷಗಳಿಂದ ಲೋಕಪಾಲರ ನೇಮಕ ಮಾಡಿಲ್ಲ. ಆದ್ದರಿಂದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಲೋಕಪಾಲರ ನೇಮಕಕ್ಕೆ ಆಗ್ರಹಿಸಿ ಉಪಾವಾಸ ಸತ್ಯಾಗ್ರಹ ಮಾಡುವುದಾಗಿ ಹೇಳಿದ್ದಾರೆ’ ಎಂದು ಶಾಸಕ ಸಿದ್ದರಾಮಯ್ಯ ಹೇಳಿದರು.

ಭಾನುವಾರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ‘ರೈತರು ದೆಹಲಿಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಿದರೂ ಕೇಂದ್ರ ಸರ್ಕಾರ ಸ್ಪಂದಿಸಲಿಲ್ಲ. ಸ್ವಾಮಿನಾಥನ್ ವರದಿಯಂತೆ ಬೆಳೆಗೆ ಬೆಲೆ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ ಅದನ್ನು ಈಡೇರಿಸಿಲ್ಲ. ಎಫ್‌ಆರ್‌ಪಿ ದರ ನೀಡಿ ಕಬ್ಬು ಖರೀದಿ ಮಾಡಲಾಗುತ್ತದೆ. ಬಾಕಿ ಹಣವನ್ನು ಸಹ ಸರ್ಕಾರ ಕೊಡಿಸಲಿದೆ’ ಎಂದರು.

‘ಶಾಸಕ ಬಿ.ಸಿ.ಪಾಟೀಲ್ ಅವರು ಸಚಿವರಾಗುವ ಆಸೆ ವ್ಯಕ್ತಪಡಿಸಿದ್ದಾರೆ. ಅದನ್ನು ಬಿಟ್ಟರೆ ಯಾವುದೇ ಅಸಮಾಧಾನ ಇಲ್ಲ ಹಾಗೂ ಶಾಸಕರ ಸಭೆಯೂ ನಡೆದಿಲ್ಲ. ನನ್ನ ವಿರುದ್ಧ ದೂರು ನೀಡಿರುವ ಸುದ್ದಿ ಸುಳ್ಳು. ಇದೇ 5ರಂದು ಸಮನ್ವಯ ಸಮಿತಿ ಸಭೆ ನಡೆಯಲಿದ್ದು, ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಾಗುವುದು. ಬಿಜೆಪಿಗೆ ಜನರು ಸರಳ ಬಹುಮತ ನೀಡದಿದ್ದರೂ ಯಡಿಯೂರಪ್ಪ ಮತ್ತು ಈಶ್ವರಪ್ಪ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಈ ಸರ್ಕಾರ ಐದು ವರ್ಷ ಪೂರೈಸಲಿದೆ. ಬಿಜೆಪಿ ಕನಸು ನನಸಾಗುವುದಿಲ್ಲ’ ಎಂದರು.

‘ಇಂದಿರಾ ಕ್ಯಾಂಟೀನ್‌ಗೆ ಹಣದ ಕೊರತೆ ಇಲ್ಲ. ಬಿಜೆಪಿಯವರು ಬಡವರ ವಿರೋಧಿಗಳಾಗಿರುವುದರಿಂದ ಇಂದಿರಾ ಕ್ಯಾಂಟೀನ್ ಯೋಜನೆ ವಿರೋಧಿಸುತ್ತಿದ್ದಾರೆ’ ಎಂದು ಹೇಳಿದರು.

ಹಂಪಿ ಉತ್ಸವ ರದ್ದು ಸಚಿವರ ತೀರ್ಮಾನ

ರಾಜ್ಯದಲ್ಲಿ ಬರ ಇದ್ದರೂ ಮೈಸೂರು ದಸರಾ ನಡೆಸಲಾಯಿತು, ಆದರೆ ಹಂಪಿ ಉತ್ಸವ ರದ್ದು ಮಾಡಿರುವುದು ಏಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ. ‘ಮೈಸೂರು ದಸರಾ ನಡೆಸಲಾಗಿದೆ. ಆದರೆ, ಬಳ್ಳಾರಿ ಉಸ್ತುವಾರಿ ಸಚಿವರು ಅಲ್ಲಿ ನಭೆ ನಡೆಸಿ ಹಂಪಿ ಉತ್ಸವ ನಡೆಸದಿರುವ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆ’ ಎಂದರು.

‘ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯ ಬಾಕಿ ಪಿಂಚಣಿ ಹಣವನ್ನು ನೀಡುವ ಬಗ್ಗೆ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು. ಸ್ಮಾರ್ಟ್‌ ಸಿಟಿ ಯೋಜನೆ ಬಗ್ಗೆಯೂ ಸಭೆ ನಡೆಸಲಾಗಿದೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !