ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19 ಲಾಕ್‌ಡೌನ್ | ‘ಸಮಸ್ಯೆ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ನಡೆಸಿ’

Last Updated 7 ಮೇ 2020, 2:41 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್-19 ಮತ್ತು ಲಾಕ್‌ಡೌನ್‌ನಿಂದಾಗಿ ಆಗಿರುವ ಸಮಸ್ಯೆ, ಅದಕ್ಕೆ ಪರಿಹಾರ ಸಂಬಂಧ ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕು. ಬಜೆಟ್ ಮರುಪರಿಶೀಲನೆ ಮಾಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಲೋಕೋಪಯೋಗಿ, ನೀರಾವರಿ, ರಸ್ತೆಯಂತಹ ಅಭಿವೃದ್ಧಿ ಕಾರ್ಯಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು. ರೈತರು, ಲಾರಿ ಚಾಲಕರು, ಬೀದಿ ವ್ಯಾಪಾರಿಗಳು, ಗಾಣಿಗರು, ಮೀನುಗಾರರು, ಹೋಟೇಲ್ ಸಿಬ್ಬಂದಿ, ಕುಂಬಾರರು ಸೇರಿದಂತೆ ಅಂಸಂಘಟಿತ ವಲಯದಲ್ಲಿ ಯಾರಿಗೆಲ್ಲಾ ಈಗ ನಷ್ಟವಾಗಿದೆಯೋ ಅವರನ್ನು ಗುರುತಿಸಿ, ಕನಿಷ್ಠ ₹ 10 ಸಾವಿರ ಕೊಡಬೇಕು. ಇದಕ್ಕಾಗಿ ಬಜೆಟ್‌ಗೆ ಹೊಸ ರೂಪ ನೀಡುವುದು ಅನಿವಾರ್ಯ’ ಎಂದರು.

‘ಕನಿಷ್ಠ ಮೂರು ದಿನವಾದರೂ ಈ ವಿಚಾರವಾಗಿ ಅಧಿವೇಶನದಲ್ಲಿ ಚರ್ಚೆ ನಡೆಸಿ ಸಲಹೆ ತೆಗೆದುಕೊಳ್ಳಬೇಕು. ಈ ಚರ್ಚೆ ವೇಳೆ ನಾವು ನಿಮಗೆ ಯಾವುದೇ ರೀತಿಯ ಮುಜುಗರ ಮಾಡುವುದಿಲ್ಲ. ಬೇಕಾದಷ್ಟು ವಿಚಾರದಲ್ಲಿ ನಿಮ್ಮ ವೈಫಲ್ಯಗಳಿರಬಹುದು. ಆದರೆ ನಮ್ಮ ಸಲಹೆಯನ್ನು ನೀವು ಪಡೆಯಬೇಕು. ಈ ಅಧಿವೇಶನದಲ್ಲಿ ಭಾಗವಹಿಸಲು ನಮ್ಮ ಪಕ್ಷದ ಶಾಸಕರು, ಸದಸ್ಯರು ಯಾವುದೇ ಭತ್ಯೆಗಳನ್ನು ಪಡೆಯುವುದಿಲ್ಲ’ ಎಂದರು.

‘ನಮ್ಮ ಸಲಹೆಯಂತೆ ಈಗ ನಾಲ್ಕೈದು ವರ್ಗದ ಜನರಿಗೆ ₹ 5 ಸಾವಿರ ನೀಡಲು ನಿರ್ಧರಿಸಿದ್ದೀರಿ. ಅದಕ್ಕೆ ಅಭಿನಂದನೆ ಸಲ್ಕಿಸುತ್ತೇನೆ‌. ಆದರೆ ಇದು ಸಾಲದು. ಉಳಿದ ಅಸಂಘಟಿತ ಕಾರ್ಮಿಕರಿಗೆ ಸಹಾಯ ಮಾಡಲು ಕೇವಲ ₹ 1,610 ಕೋಟಿ ಅಲ್ಲ, ₹ 10 ಸಾವಿರ ಕೋಟಿ ರೂಪಾಯಿ ಕೊಟ್ಟರೂ ಸಾಲದು. ಈ ವಿಚಾರದಲ್ಲಿ ನಿಮ್ಮ ಜತೆ ನಾವಿದ್ದೇವೆ’ ಎಂದರು.

‘ಹೂ ಬೆಳೆಗಾರರ ಖರ್ಚನ್ನಾದರೂ ಭರಿಸಿ’
‘ಹೂ ಬೆಳೆದವರಿಗೆ ಈಗ ನೀಡಿದ ಕೊಡುಗೆ ಸಾಲದು. ಅವರು ಬೆಳೆಗೆ ಖರ್ಚು ಮಾಡಿದ್ದನ್ನಾದರೂ ನೀಡಬೇಕು. ತರಕಾರಿ, ಹಣ್ಣು ಬೆಳೆಗಾರರಿಗೆ ಪರಿಹಾರ ಘೋಷಣೆ ಮಾಡಿಲ್ಲ. ಈ ಬೆಳೆಗಾರರಿಗೂ ದೊಡ್ಡ ನಷ್ಟವಾಗಿದೆ. ಅವರನ್ನೂ ಸರ್ಕಾರ ಗಮನಿಸಬೇಕು’ ಎಂದು ಶಿವಕುಮಾರ್‌ ಹೇಳಿದರು.

‘ವಿಶೇಷ ಅಧಿವೇಶನ ಅನಗತ್ಯ’
ಕೋವಿಡ್‌–19 ಲಾಕ್‌ಡೌನ್‌ನಿಂದ ಉದ್ಭವಿಸಿರುವ ಪರಿಸ್ಥಿತಿ ಬಗ್ಗೆ ಚರ್ಚಿಸಲು ವಿಧಾನಮಂಡಲದ ವಿಶೇಷ ಅಧಿವೇಶನ ನಡೆಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕಾರ್ಮಿಕರು, ರೈತರು ಮತ್ತು ಇತರ ವರ್ಗಕ್ಕೆ ಪರಿಹಾರವನ್ನು ಪ್ರಕಟಿಸಲಾಗಿದೆ. ಅಲ್ಲದೆ, ಸಿದ್ದರಾಮಯ್ಯ ನೇತೃತ್ವದಲ್ಲಿ ವಿವಿಧ ನಾಯಕರು ಬಂದು ಚರ್ಚೆ ನಡೆಸುವುದಾಗಿಯೂ ಹೇಳಿದ್ದಾರೆ. ಏನೆಲ್ಲ ಮಾಡಬೇಕೊ ಅವುಗಳನ್ನೆಲ್ಲ ಮಾಡುತ್ತಿದ್ದೇವೆ. ವಿರೋಧ ಪಕ್ಷ – ಆಡಳಿತ ಪಕ್ಷವೆಂಬ ತಾರತಮ್ಯವಿಲ್ಲದೆ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

‘ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಸಂದರ್ಭದಲ್ಲಿ ಪೂರ್ವ ತಯಾರಿ ನಡೆಸಿಲ್ಲ ಮತ್ತು ಆತುರವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂಬ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ಕುಡಿಯುವವರು ತಯಾರಾಗಿ ಬಂದು ತುದಿಗಾಲಿನಲ್ಲಿ ನಿಂತಾಗ ಪೂರ್ವ ತಯಾರಿ ಮಾಡುವುದೇನು ಬಂತು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT