ಶನಿವಾರ, ಏಪ್ರಿಲ್ 4, 2020
19 °C
ವಿಧಾನಪ‍ರಿಷತ್ತಿನಲ್ಲಿ ಚರ್ಚೆ

ಬಿಎಸ್‌ವೈ ಇಲ್ಲದಿದ್ದರೆ ಬಿಜೆಪಿ ಝೀರೊ: ಮೌನಕ್ಕೆ ಶರಣಾದ ಸಚಿವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೌನಕ್ಕೆ ಶರಣಾದ ಸಚಿವರು ಬಿ.ಎಸ್‌.ಯಡಿಯೂರಪ್ಪ ಇಲ್ಲದಿದ್ದರೆ ಬಿಜೆಪಿ ಝೀರೊ (ಶೂನ್ಯ) ಎಂಬ ಮಾತು ವಿಧಾನಪರಿಷತ್ತಿನಲ್ಲಿ ಸೋಮವಾರ ಕಾವೇರಿದ ಚರ್ಚೆಗೆ ಕಾರಣವಾಯಿತು. ಆಡಳಿತ–ವಿರೋಧ ಪಕ್ಷದ ಸದಸ್ಯರು ವಾಕ್ಸಮರ ನಡೆಸಿದರೆ, ತಮ್ಮ ನಾಯಕನನ್ನು ಸಮರ್ಥಿಸಬೇಕಾದ ಸಚಿವರು ಮಾತ್ರ ಮೌನಕ್ಕೆ ಶರಣಾಗಿದ್ದರು.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿರುವ ವಿಷಯ ಪ್ರಸ್ತಾಪಿಸುತ್ತಾ ಪ್ರಾಸಂಗಿಕವಾಗಿ ಯಡಿಯೂರಪ್ಪ ಅವರೇ ಹೀರೊ. ಅವರು ಇಲ್ಲದಿದ್ದರೆ ಬಿಜೆಪಿ ಝೀರೊ ಎಂದರು. 

ಬಿಜೆಪಿ ಝೀರೊ ಎಂದು ಹೇಳಿದ್ದನ್ನು ಆಕ್ಷೇಪಿಸಿದ ಬಿಜೆಪಿಯ ಎಂ.ಕೆ. ಪ್ರಾಣೇಶ್ ಹಾಗೂ ತೇಜಸ್ವಿನಿ ಗೌಡ, ‘ನಿಮ್ಮ ಪಕ್ಷದಲ್ಲಿ ಸಿದ್ದರಾಮಯ್ಯ ಅವರು ಹೀರೊ. ಅವರನ್ನು ನಿರ್ಲಕ್ಷ್ಯ ಮಾಡಿದ್ದರಿಂದಲೇ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಕಾಂಗ್ರೆಸ್ ಝೀರೊ ಆಯಿತು ಎಂದು ಕೆಣಕಿದರು. ಆಗ ಕಾಂಗ್ರೆಸ್–ಬಿಜೆಪಿ ಸದಸ್ಯರ ಮಧ್ಯೆ ಮಾತಿಗೆ ಮಾತು ಬೆಳೆಯಿತು.

ಜೆಡಿಎಸ್‌ನ ಬಸವರಾಜ ಹೊರಟ್ಟಿ, ‘ಯಡಿಯೂರಪ್ಪ ಇಲ್ಲದಿದ್ದರೆ ಬಿಜೆಪಿ ಝೀರೊ ಎಂದು ಒಪ್ಪಿಕೊಳ್ತೀರಾ’ ಎಂದು ಸವಾಲು ಹಾಕಿದರು.

ಬಿಜೆಪಿಯ ಪ್ರಾಣೇಶ್‌, ‘ಅಟಲ್‌ಜಿ ಇದ್ದಾಗ ಅವರು ಹೀರೊ, ಈಗ ನರೇಂದ್ರ ಮೋದಿ ಹೀರೊ. ಯಡಿಯೂರಪ್ಪ ಇರುವವರೆಗೆ ಅವರೇ ಹೀರೊ. ನಮ್ಮಲ್ಲಿ ಝೀರೋ ಪ್ರಶ್ನೆಯೇ ಇಲ್ಲ’ ಎಂದರು.

ಬಿಜೆಪಿಯ ಲಹರ್ ಸಿಂಗ್ ಸಿರೋಯ, ‘ಸಿದ್ದರಾಮಯ್ಯ, ಶಿವಕುಮಾರ್, ದಿನೇಶ್‌ಗುಂಡೂರಾವ್‌ ಎಲ್ಲರೂ ಹೀರೊಗಳೇ. ಕಾಂಗ್ರೆಸ್‌ ಪಕ್ಷ ರಾಜ್ಯ ಮತ್ತು ದೇಶದಲ್ಲಿ ಸದ್ಯಕ್ಕೆ ಝೀರೊ ಆಗಿದೆ’ ಎಂದು ಕುಟುಕಿದರು.

ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌, ‘ನಿಮ್ಮ ಪಕ್ಷ ಈಗ ಹೀರೊ ಆಗಿರಬಹುದು. ಬಹಳ ಬೇಗನೇ ಝೀರೊ ಆಗ್ತೀರಾ. ನಿಮ್ಮದು ಅಲ್ಪಾಯುಷ್ಯ’ ಎಂದರು.

ಆದರೆ, ಸಚಿವರಾದ ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ, ಆನಂದ್ ಸಿಂಗ್‌, ಕೋಟ ಶ್ರೀನಿವಾಸ ಪೂಜಾರಿ ಸುಮ್ಮನೇ ಕುಳಿತಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು