ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತದಲ್ಲಿ ಹಾಕಿ ಆಟಗಾರ್ತಿಯ ದುರ್ಮರಣ

Last Updated 7 ಮೇ 2019, 14:44 IST
ಅಕ್ಷರ ಗಾತ್ರ

ಧಾರವಾಡ: ತರಬೇತಿ ಕ್ಯಾಂಪ್ ಮುಗಿಸಿ ಊರಿಗೆ ಬಂದಿದ್ದ ಉದಯೋನ್ಮುಖ ಹಾಕಿ ಆಟಗಾರ್ತಿ ಸುಜಾತಾ ಕೆರಳ್ಳಿ (16) ವೆಂಕಟಾಪುರ ಬಳಿ ಮಂಗಳವಾರ ಸಂಭವಿಸಿದ ಬೈಕ್ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಇವರ ತಂದೆ ಮಲ್ಲಿಕಾರ್ಜುನ ಕೆರಳ್ಳಿ (52) ಅವರೂ ಮೃತಪಟ್ಟಿದ್ದಾರೆ. ತಾಯಿ ಅನ್ನಪೂರ್ಣಾ ಅವರು ಗಂಭೀರವಾಗಿ ಗಾಯಗೊಂಡಿದ್ದು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಷ್ಟ್ರಮಟ್ಟದ ಸಬ್‌ಜೂನಿಯರ್ ಹಂತದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಸುಜಾತಾ, ಕಳೆದ ಮೂರು ವರ್ಷಗಳಿಂದ ಕೊಡಗು ಜಿಲ್ಲೆಯ ಕೂಡಿಗೆ ಕ್ರೀಡಾ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದರು. ಆಟ ಮತ್ತು ಪಾಠಗಳಲ್ಲೂ ಚುರುಕಾಗಿದ್ದ ಇವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲೂ ಉತ್ತಮ ಅಂಕಗಳೊಂದಿಗೆ ಪಾಸಾಗಿದ್ದರು. ಮುಂದಿನ ವಿದ್ಯಾಭ್ಯಾಸಕ್ಕೆ ಮೈಸೂರಿನ ಕ್ರೀಡಾ ಶಾಲೆಗೆ ಸೇರಲು ಸಿದ್ಧತೆ ನಡೆಸಿದ್ದರು.

ಕೂಡಿಗೆಯಲ್ಲಿ ಏ. 24ರಿಂದ ಮೇ 5ರವರೆಗೆ ನಡೆದ ಬೇಸ್ ಕ್ಯಾಂಪ್‌ನಲ್ಲಿ ತರಬೇತಿ ಪೂರ್ಣಗೊಳಿಸಿ ಸುಜಾತಾ ತನ್ನ ಊರು ಮಾದನಭಾವಿಗೆ ಮರಳಿದ್ದರು. ಮಂಗಳವಾರ ತನ್ನ ಪಾಲಕರೊಂದಿಗೆ ರಾಮಾಪುರಕ್ಕೆ ಹೊರಟಿದ್ದರು. ಈ ಸಂದರ್ಭದಲ್ಲಿ ವೆಂಕಟಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 4 ಅನ್ನು ದಾಟುವ ಸಂದರ್ಭದಲ್ಲಿ ಎದುರಿನಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸುಜಾತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಂಭೀರವಾಗಿ ಗಾಯಗೊಂಡ ಮಲ್ಲಿಕಾರ್ಜುನ ಅವರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರೂ ಮೃತಪಟ್ಟಿದ್ದಾರೆ.

ಡಿಕ್ಕಿ ಹೊಡೆದ ಕಾರು (ಎಂಎಚ್‌44–ಎಎಲ್‌ 6977) ಪರಾರಿಯಾಗಿದೆ. ಆದರೆ ಘಟನಾ ಸ್ಥಳದಲ್ಲಿ ಕಾರಿನ ನಂಬರ್ ಪ್ಲೇಟ್‌ ಬಿದ್ದಿದ್ದು, ಶೀಘ್ರದಲ್ಲಿ ಪತ್ತೆ ಮಾಡಲಾಗುವುದು ಎಂದು ಡಿವೈಎಸ್‌ಪಿ ರಾಮನಗೌಡ ಹಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT