ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ವಿತರಣೆ ಮಾಫಿಯಾ, ಅಸಲಿ ನಕಲಿ ಆಟದಲ್ಲಿ ಬಡವರು ಬಲಿಪಶು

ಒಳನೋಟ
Last Updated 8 ಡಿಸೆಂಬರ್ 2018, 19:56 IST
ಅಕ್ಷರ ಗಾತ್ರ

ರಾಜಕಾರಣಿಗಳು, ಅಧಿಕಾರಿಗಳು, ದಲ್ಲಾಳಿಗಳು, ವರ್ತಕರು ಮತ್ತು ಅಕ್ರಮ ಸಾಗಣೆಯ ದುಷ್ಟಕೂಟ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯನ್ನು ಆಕ್ಟೋಪಸ್ ನಂತೆ ಆವರಿಸಿದೆ. ಇದರ ಮೇಲೆ ಬೆಳಕು ಚೆಲ್ಲುವ ಒಳನೋಟ.

ಬೆಂಗಳೂರು: ಬಡತನವನ್ನೇ ಬಂಡವಾಳ ಮಾಡಿಕೊಂಡು ಕಾನೂ ನನ್ನೇ ವಂಚನೆಯ ಗುರಾಣಿಯನ್ನಾಗಿ ಬಳಸುತ್ತಿರುವ ಜಾಲದ ಕಪಿಮುಷ್ಟಿಯಲ್ಲಿ ಸಿಲುಕಿರುವ ರಾಜ್ಯದ ಪಡಿತರ ವ್ಯವಸ್ಥೆ ಸರಿಪಡಿಸಲಾರದಷ್ಟು ಗಬ್ಬೆದ್ದು ಹೋಗಿದೆ.

ಮಾಫಿಯಾ ರೂಪ ತಳೆದಿರುವ ಈ ಜಾಲ ಕರ್ನಾಟಕ ಮಾತ್ರವಲ್ಲ, ದೇಶದ ಬಹುತೇಕ ರಾಜ್ಯಗಳಲ್ಲಿ ಕರಾಳ ಹಸ್ತ ಚಾಚಿದ್ದು ಬಡವರ ಹೆಸರಿನಲ್ಲಿ ಪ್ರತಿ ತಿಂಗಳು ನೂರಾರು ಕೋಟಿ ರೂಪಾಯಿಗಳನ್ನು ನುಂಗಿ ನೀರು ಕುಡಿಯುತ್ತಿದೆ. ದಿನೇ ದಿನೇ ಇದರ ಜಾಲ ವಿಸ್ತರಣೆಯಾಗುತ್ತಲೇ ಇದೆ.

ಈ ಜಾಲ ಹೆಣೆಯುವ ತಂತ್ರಗಳಿಂದ ರಾಜ್ಯದ ಪಡಿತರ ವ್ಯವಸ್ಥೆ ಸೂತ್ರ ಹರಿದ ಗಾಳಿ ಪಟದಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಡವರಿಗೆ ಸಬ್ಸಿಡಿ ರೂಪದಲ್ಲಿ ವಿನಿಯೋಗಿಸುತ್ತಿರುವ ಕೋಟ್ಯಂತರ ರೂಪಾಯಿ ಖದೀಮರ ಜೇಬು ಭರ್ತಿ ಮಾಡುತ್ತಿದೆ. ಎರಡು ದಶಕಗಳಿಂದ ಈಚೆಗೆ ಹಳಿ ತಪ್ಪಿರುವ ಪಡಿತರ ಚೀಟಿ ವಿತರಣೆಯನ್ನು ಸರಿದಾರಿಗೆ ತರಲು ಇನ್ನೂ ಸಾಧ್ಯವಾಗುತ್ತಿಲ್ಲ.

ಸುಧಾರಣೆಗೆ ಮುಂದಾಗುವ ಪ್ರಾಮಾಣಿಕ ಅಧಿಕಾರಿಗಳನ್ನು ಶಾಶ್ವತವಾಗಿ ಬಾಯಿ ಮುಚ್ಚಿಸುವ, ಇಲ್ಲವೇ ಎತ್ತಂಗಡಿ ಮಾಡಿಸುವಷ್ಟು ಬಲಾಢ್ಯವಾಗಿದೆ ಈ ದುಷ್ಟಕೂಟ. ಇದರಿಂದ ಹಕ್ಕಿನ ಪಡಿತರ ದೊರಕದೆ ಅವೆಷ್ಟೋ ಕುಟುಂಬ ಒಪ್ಪತ್ತಿನ ಊಟಕ್ಕೂ ಪರಿತಪಿಸುವ ಸ್ಥಿತಿ ಮುಂದುವರಿದಿದೆ. ಹಸಿವು ಮುಕ್ತ ಆಶಯ ಘೋಷಣೆಯಾಗೇ ಉಳಿದಿದೆ.

ಗೊಂದಲಗಳ ಗೂಡಿನಂತಿರುವ ರಾಜ್ಯದ ಪಡಿತರ ವ್ಯವಸ್ಥೆ ಸುಲಭಕ್ಕೆ ನಿಲುಕುವಂಥದ್ದಲ್ಲ. ವಿಶ್ವ ಆರೋಗ್ಯ ಸಂಸ್ಥೆ ನಿಗದಿಗೊಳಿಸಿರುವ ಮಾನದಂಡ, ಕೇಂದ್ರದ ಆಹಾರ ಭದ್ರತಾ ಕಾಯ್ದೆ, ಸುಪ್ರೀಂಕೋರ್ಟ್ ನಿರ್ದೇಶನಗಳು ಮತ್ತು ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷಗಳ ಜನಪ್ರಿಯ ಘೋಷಣೆಗಳ ನೆರಳಲ್ಲೇ ಸಮಸ್ಯೆ ಸೃಷ್ಟಿಸುವ ವಂಚಕರ ಜಾಲ ಪಡಿತರ ವ್ಯವಸ್ಥೆ ಮರಳಿ ಹಳಿ ಮೇಲೆ ಕೂರಲು ಬಿಡುತ್ತಿಲ್ಲ.

ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡಾ 90 ಕ್ಕಿಂತ ಹೆಚ್ಚು ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ ಎಂಬ ಲೆಕ್ಕದಲ್ಲಿ ಅಧಿಕೃತವಾಗಿ ಸಬ್ಸಿಡಿ ಪಡಿತರ ವಿತರಣೆ ಆಗಿದೆ, ಶೇಕಡಾವಾರು ಏರಿಳಿತಗಳ ನಡುವೆ ಈಗಲೂ ಅದು ಮುಂದುವರಿದಿದೆ...!, ಎಂದರೆ ಇಲಾಖೆಯ ದುರವಸ್ಥೆಯನ್ನು ಯಾರು ಬೇಕಾದರೂ ಊಹಿಸಿಕೊಳ್ಳಬಹುದು.

ರಾಜ್ಯದ ಒಟ್ಟು ಜನಸಂಖ್ಯೆ ಮತ್ತು ಕುಟುಂಬಗಳ ಸಂಖ್ಯೆಗೂ ಆಹಾರ ಇಲಾಖೆ ನೀಡಿರುವ ಬಿಪಿಎಲ್, ಎಪಿಎಲ್, ಎಎವೈ(ಅಂತ್ಯೋದಯ ಅನ್ನ ಯೋಜನೆ) ಕಾರ್ಡುಗಳು ಮತ್ತು ಕಾರ್ಡು ಬಯಸಿ ಹೊಸದಾಗಿ ಸಲ್ಲಿಕೆಯಾಗಿರುವ ಅರ್ಜಿಗಳಿಗೂ ಯಾವತ್ತೂ ತಾಳೆಯಾಗುವುದಿಲ್ಲ. ತಾಳೆಯಾಗಲು ವಂಚನೆ ಜಾಲ ಬಿಡುವುದಿಲ್ಲ. ಗೊಂದಲ ಮುಂದುವರಿದರೆ ಮಾತ್ರ ಅವರ ದಂಧೆ ನಿರಾಯಾಸವಾಗಿ ಮುಂದುವರಿಯಲು ಸಾಧ್ಯ.

ಈ ಹಿಂದೆ ತಹಶೀಲ್ದಾರ್ ಕಚೇರಿಗಳಲ್ಲೇ ಅರ್ಜಿ ಪಡೆದು ಪಡಿತರ ಚೀಟಿ ನೀಡುವ ವ್ಯವಸ್ಥೆ ಜಾರಿಯಲ್ಲಿತ್ತು. ನೇರ ವಿತರಣೆಯಲ್ಲಿ ಅಕ್ರಮ ನಡೆಯುತ್ತಿದೆ, ಪರಿಶೀಲಿಸದೆ ಲಂಚ ಪಡೆದು ಕಾರ್ಡು ವಿತರಿಸಲಾಗುತ್ತಿದೆ, ಪಡಿತರ ವಿತರಣೆಯಲ್ಲೂ ಗೋಲ್‌ಮಾಲ್ ನಡೆಯುತ್ತಿದೆ, ಲೆಡ್ಜರ್ ಅಡ್ಜೆಸ್ಟ್ ಮೆಂಟ್ ಮಾಡಿ ಲೂಟಿ ಹೊಡೆಯಲಾಗುತ್ತಿದೆ. ಆನ್‌ಲೈನ್ ವ್ಯವಸ್ಥೆ ಮೂಲಕ ಅದನ್ನು ಸರಿಪಡಿಸಬೇಕು ಎಂಬ ಚರ್ಚೆ ಆರಂಭವಾಯಿತು. ಅಲ್ಲಿಂದ ಶುರುವಾದ ಹೈಟೆಕ್ ವಂಚನೆ ಮತ್ತು ಪಡಿತರದಾರರ ಶೋಷಣೆ ನಾನಾ ರೂಪ ಪಡೆಯುತ್ತಾ ಇಂದು ಹೆಮ್ಮರವಾಗಿ ಬೆಳೆದುನಿಂತಿದೆ.

ಒಂದರ ಹಿಂದೆ ಮತ್ತೊಂದರಂತೆ ಸುಧಾರಣೆ ನೆಪದ ಪ್ರಯೋಗಗಳು ನಡೆದವು. ಲಾಭ ಪಡೆದವರು ಮಾತ್ರ ದುಡ್ಡು ಹೊಡೆಯುವ ಸ್ಕೀಂ ರೂಪಿಸಿ ಅನುಮತಿ ಪಡೆದ ಖಾಸಗಿ ಸಂಸ್ಥೆಗಳು, ದಲ್ಲಾಳಿಗಳು, ಅಧಿಕಾರಿ ವರ್ಗ, ವರ್ತಕರು ಮತ್ತದೇ ಅಕ್ರಮ ಸಾಗಾಟದ ದುಷ್ಟಕೂಟ. ಅಷ್ಟೋ, ಇಷ್ಟೋ ಸುಮಾರಾಗಿದ್ದ ವ್ಯವಸ್ಥೆ ಸಂಪೂರ್ಣ ಕುಲಗೆಟ್ಟು ಹೋಯಿತು. ಬಲಿಪಶು ಆಗಿದ್ದು ಮಾತ್ರ ಬಡತನ ರೇಖೆಗಿಂತ ಕಳೆಗಿರುವ ಮತ್ತು ಬುಡುಕಟ್ಟು ಕುಟುಂಬಗಳು, ಹಿರಿಯ ನಾಗರೀಕರು, ನಿರ್ಗತಿಕರು ಹಾಗೂ ಒಂಟಿ ಜೀವನ ಸಾಗಿಸುತ್ತಿರುವ ಮಹಿಳೆಯರು (ಎಎವೈ ಫಲಾನುಭವಿ). ಕೊಮ್ಯಾಟ್‌ ಎಂಬ ಸಂಸ್ಥೆ ಹಾಳುಗಗೆಡವಿದ ವ್ಯವಸ್ಥೆಯನ್ನು ಇಂದಿಗೂ ಸರಿಪಡಿಸಲು ಸಾಧ್ಯವಾಗೇ ಇಲ್ಲ.

54 ಕಾಲಂಗಳ ಮಾಹಿತಿ ನೀಡಿ ಎಂದು ಆರಂಭಗೊಂಡ ಪಡಿತರದಾರರ ಶೋಷಣೆ, ಫೋಟೋ – ಹೆಬ್ಬೆಟ್ಟು ಗುರುತು ನೀಡಿ, ಬೆಂಗಳೂರು ಒನ್/ತಹಸೀಲ್ದಾರ್ ಕಚೇರಿ/ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿ, ಮೊಬೈಲ್ ನಂಬರ್ ಲೋಡ್ ಮಾಡಿ ಮೆಸೇಜ್ ತೋರಿಸಿ ರೇಷನ್ ಖರೀದಿಸಿ, ರೇಷನ್ ಕಾರ್ಡ್ – ವೋಟರ್ ಐಡಿ ತೋರಿಸಿ ಕೂಪನ್ ಪಡೆದು ನಂತರ ರೇಷನ್ ಖರೀದಿಸಿ, ವಿದ್ಯುತ್ ಬಿಲ್ – ಆಸ್ತಿ ಸಂಖ್ಯೆ ಅಪ್‌ಲೋಡ್ ಮಾಡಿ, ಆಧಾರ್ ಕೊಡಿ, ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಇಲ್ಲದಿದ್ದರೆ ಪಡಿತರ ಇಲ್ಲ ಎಂಬಿತ್ಯಾದಿ ಗೊಂದಲಗಳ ಶೋಷಣೆ ಮುಂದುವರಿಯುತ್ತಲೇ ಇದೆ.

ಸದ್ಯ ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಅಟಲ್ ಜನಸ್ನೇಹಿ ಕೇಂದ್ರಗಳ್ನು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ನೋಡಲ್ ಕೇಂದ್ರಗಳನ್ನಾಗಿ ಮಾಡಿದ್ದರೆ ತಾಲ್ಲೂಕು ಕೇಂದ್ರಗಳಲ್ಲಿ ಖಾಸಗಿ ಫ್ರಾಂಚೈಸಿ ಕೇಂದ್ರಗಳನ್ನು ಗುರುತಿಸಿ ಅನುಮತಿ ನೀಡಲಾಗಿದೆ.

ಪ್ರತಿ ಪ್ರಯೋಗದಲ್ಲೂ ಲಕ್ಷಗಟ್ಟಲೇ ನಕಲಿ ಕಾರ್ಡು ಪತ್ತೆ ಮಾಡಿ ವಜಾ ಮಾಡಿರುವುದಾಗಿ ಅಧಿಕಾರಿಗಳು ಬೆನ್ನು ತಟ್ಟಿಕೊಳ್ಳುತ್ತಾರೆ. ಆದರೆ, ಅನುದಾನದಲ್ಲಿ ಎಷ್ಟು ಉಳಿತಾಯ ಆಗಿದೆ? ಮಿಕ್ಕ ಪಡಿತರದ ಪ್ರಮಾಣ ಎಷ್ಟು ಮತ್ತು ಏನಾಯ್ತು ? ಅದರ ಮೌಲ್ಯಮಾಪನ ಮಾಡಿದವರು ಯಾರು ಎಂಬ ನಿಖರ ಲೆಕ್ಕ ಮಾತ್ರ ಕೊಡುವುದಿಲ್ಲ. ಪ್ರತಿ ಪ್ರಯೋಗದಲ್ಲೂ ನೂರಾರು ಅರ್ಹ ಫಲಾನುಭವಿಗಳ ಹೆಸರು ಕೈ ಬಿಟ್ಟು ಹೋಗುತ್ತವೆ, ಮತ್ತೆ ಸೇರ್ಪಡೆ ಸರ್ಕಸ್ ಶುರು ಮಾಡಬೇಕು. ಪಟ್ಟಿಯಲ್ಲಿ ಉಳಿದುಕೊಂಡವರಿಗೆ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಸಾಧ್ಯವಾಗದೆ ಪಡಿತರದಿಂದ ವಂಚಿತರಾಗುತ್ತಿರುವ ಕುಟುಂಬಗಳ ಸಂಖ್ಯೆಯೂ ಸಾಕಷ್ಟಿವೆ.

ಈ ಅಸಲಿ, ನಕಲಿ ಕಾರ್ಡುಗಳ ಲೆಕ್ಕದ ಲಾಭ ಪಡೆಯುವ ಜಾಲ ಒಂದಿಷ್ಟು ಪಾಲಿಶ್ ಮಾಡಿ ಕಾಳಸಂತೆಯಲ್ಲಿ ಮಾರುವ ಅಕ್ಕಿಯೇ ಬೆಣ್ಣೆದೋಸೆ, ಇಡ್ಲಿ, ಅನ್ನವಾಗಿ ಹೋಟೆಲ್‌ಗಳಲ್ಲಿ, ಮನೆಗಳಲ್ಲಿ ಪರಿವರ್ತನೆ ಆಗುತ್ತಿವೆ. ಮತ್ತೊಂದೆಡೆ, ಬ್ರಾಂಡೆಡ್ ಅಕ್ಕಿಯಾಗಿ, ಬೇಳೆಯಾಗಿ ಒಂದಕ್ಕೆ ಹತ್ತರಷ್ಟು ದರದಲ್ಲಿ ಕಾಳಸಂತೆಯಲ್ಲಿ ಬಿಕರಿಯಾಗುತ್ತಿವೆ. ಅಕ್ರಮ ಕೂಟದ ತಿಜೋರಿ ತುಂಬುತ್ತಲೇ ಇದೆ. ಬಡ ಪಡಿತರದಾರರ ಶೋಷಣೆ ನಿರಂತರ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT