ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಹಿಲೇಪಿತ ಕಹಿ ಗುಳಿಗೆ ನೀಡಿದ ಕೇಂದ್ರ : ಹೋರಾಟಗಾರ ಅಶೋಕ ಚಂದರಗಿ ಆಕ್ರೋಶ

Last Updated 25 ಡಿಸೆಂಬರ್ 2019, 14:10 IST
ಅಕ್ಷರ ಗಾತ್ರ

ಬೆಳಗಾವಿ: ‘ಮಹದಾಯಿ ವಿಷಯದಲ್ಲಿ ಕೇಂದ್ರ ಸರ್ಕಾರವು ಮತ್ತೊಮ್ಮೆ ಕರ್ನಾಟಕದ ಜನತೆಯ ಕಣ್ಣುಗಳಿಗೆ ಮಣ್ಣು ಹಾಕಿದೆ. ಸಿಹಿ ಸುದ್ದಿ ಸಿಗುವ ನಿರೀಕ್ಷೆಯಲ್ಲಿದ್ದ ಮುಂಬೈ ಕರ್ನಾಟಕದ ಜನರಿಗೆ ಸಿಹಿಲೇಪಿತ ಕಹಿ ಗುಳಿಗೆಯನ್ನು ನೀಡಿದೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕಳೆದ ಅಕ್ಟೋಬರ್‌ನಲ್ಲಿ ನೀಡಿದ್ದ ಪರಿಸರ ಇಲಾಖೆಯ ಅನುಮತಿಯನ್ನು ಗೋವಾ ಸರ್ಕಾರದ ಒತ್ತಡದಿಂದಾಗಿ ತಡೆಹಿಡಿದಿದ್ದ ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್‌ ಅವರು, ಈಗ ಅರಣ್ಯ ಮತ್ತು ವನ್ಯಜೀವಿ ಇಲಾಖೆಗಳ ಅನುಮತಿ ಪಡೆದುಕೊಂಡ ನಂತರ ಮಹಾದಾಯಿ ಯೋಜನೆಯನ್ನು ಅನುಷ್ಠಾನ ಮಾಡಬಹುದು ಎಂದು ತಿಳಿಸಿರುವುದು ಅತ್ಯಂತ ಹಾಸ್ಯಾಸ್ಪದವಾಗಿದೆ’ ಎಂದು ಟೀಕಿಸಿದ್ದಾರೆ.

‘ಅರಣ್ಯ ಇಲಾಖೆಯ ಅನುಮತಿ ನೀಡುವವರು ಲಂಡನ್, ಅಮೆರಿಕಲ್ಲಿದ್ದಾರೆಯೇ? ಜಾವಡೇಕರ್‌ ಯಾರಿಗೆ ಮೋಸ ಮಾಡಬೇಕೆಂದಿದ್ದಾರೆ? ಕರ್ನಾಟಕ ಪ್ರತಿನಿಧಿಸುವ ಕೇಂದ್ರದ ಸಚಿವರಾದ ಸುರೇಶ ಅಂಗಡಿ ಮತ್ತು ಪ್ರಹ್ಲಾದ ಜೋಶಿ ಅವರನ್ನು ಕೇಂದ್ರ ಸರ್ಕಾರ ಲೆಕ್ಕಕ್ಕೇ ತೆಗೆದುಕೊಳ್ಳದಿರುವುದು ಸ್ಪಟಿಕದಷ್ಟೇ ಸ್ಪಷ್ಟವಾಗಿದೆ. ಕೇಂದ್ರದ ಮೇಲೆ ಒತ್ತಡ ತರಲು ವಿಫಲರಾಗುತ್ತಿರುವ ಈ ಸಚಿವರು ಭಾಗವಹಿಸುವ ಅಧಿಕೃತ ಕಾರ್ಯಕ್ರಮಗಳಲ್ಲಿ ಮಹದಾಯಿ ಹೋರಾಟಗಾರರು ಪ್ರತಿಭಟನೆ ನಡೆಸುವ ಕಾಲ ದೂರವಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಮಹದಾಯಿ ಮತ್ತು ಕೃಷ್ಣಾ ಜಲವಿವಾದಗಳ ಸಂಬಂಧ ಕೇಂದ್ರ ಸರ್ಕಾರದ, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗ್ರಹಿಸಬೇಕು. ಸರ್ವಪಕ್ಷಗಳ, ಮಹದಾಯಿ ಹೋರಾಟಗಾರರ ನಿಯೋಗವನ್ನು ಪ್ರಧಾನಿ ಬಳಿಗೆ ಬರೆದುಕೊಂಡು ಹೋಗಿ ಮನವರಿಕೆ ಮಾಡಿಕೊಡಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT