ಸೋಮವಾರ, ಜೂನ್ 1, 2020
27 °C
ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಹಣ್ಣು–ತರಕಾರಿ ಮುಕ್ತ ಸಾಗಣೆಗೆ ಅವಕಾಶ: ಸಿಎಂ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಹಣ್ಣು–ತರಕಾರಿಗಳ ಸಾಗಣೆಗೆ ಮುಕ್ತ ಅವಕಾಶ ನೀಡಬೇಕು, ಎಲ್ಲೂ ಅಡ್ಡಿ ಉಂಟು ಮಾಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪೊಲೀಸ್‌ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೇ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಬುಧವಾರ ತುರ್ತು ಸಭೆ ನಡೆಸಿದ ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

ರಾಜ್ಯದಿಂದ ಟೊಮೆಟೊ, ನಿಂಬೆ, ಕರಬೂಜ, ದ್ರಾಕ್ಷಿ, ಕಲ್ಲಂಗಡಿ, ದಾಳಿಂಬೆ ಅಪಾರ ಪ್ರಮಾಣದಲ್ಲಿ ಇತರ ರಾಜ್ಯಗಳಿಗೆ ಸಾಗಣೆ ಮಾಡಲಾಗುತ್ತಿತ್ತು. ಅದಕ್ಕೆ ತಡೆ ಬಿದ್ದಿರುವುದರಿಂದ ದರ ಕುಸಿತವಾಗಿದೆ. ಈ ಪರಿಸ್ಥಿತಿ ಸುಧಾರಿಸಲು ತಕ್ಷಣದಿಂದಲೇ ಹಣ್ಣು–ತರಕಾರಿ ಮತ್ತು ಇತರ ಅವಶ್ಯ ವಸ್ತುಗಳ ಸಾಗಣೆಗೆ ಅನುಮತಿ ನೀಡಬೇಕು ಎಂದು ಅವರು ಸೂಚಿಸಿದರು.

ರಾಜ್ಯದ ಎಲ್ಲೆಡೆ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೆ ಹಣ್ಣು–ತರಕಾರಿ, ಮೊಟ್ಟೆ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಎಲ್ಲೂ ಹಣ್ಣು ತರಕಾರಿ ಕೊರತೆ ಆಗದಂತೆ ಕ್ರಮ ವಹಿಸಬೇಕು. ಖರೀದಿದಾರರು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ ಅಗತ್ಯ ವಸ್ತುಗಳನ್ನು ಖರೀದಿಸಬಹುದು ಎಂದು ಹೇಳಿದರು. 

‘ಟೊಮೆಟೊ, ಮೊಟ್ಟೆ, ಕೋಳಿ ತಿನ್ನುವುದರಿಂದ ಆರೋಗ್ಯ ಕೆಡುವುದಿಲ್ಲ. ಇಂತಹ ಅಪ ಪ್ರಚಾರಗಳಿಗೆ ಕಿವಿಗೊಡುವುದು ಬೇಡ’ ಎಂದರು.

ಹೆಚ್ಚು ಬೆಲೆಗೆ ಮಾರಿದರೆ ಲೈಸೆನ್ಸ್ ರದ್ದು
ಈಗಿನ ಸಂಕಷ್ಟದ ಪರಿಸ್ಥಿತಿಯ ಲಾಭ ಪಡೆದು ಹಣ್ಣು–ತರಕಾರಿ ಮತ್ತು ದಿನಸಿ ಪದಾರ್ಥಗಳನ್ನು ಹೆಚ್ಚು ಬೆಲೆಗೆ ಮಾರಿದರೆ ಅಂತಹ ಮಾರಾಟಗಾರರ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಮಾರುಕಟ್ಟೆಗಳಲ್ಲಿ ಆಹಾರ ಧಾನ್ಯಗಳು, ಹಣ್ಣು ತರಕಾರಿಗಳ ಕೊರತೆ ಇಲ್ಲ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದರು. ಅಡುಗೆ ಎಣ್ಣೆ ಸಾಕಷ್ಟು ದಾಸ್ತಾನು ಇದೆ. ಪ್ಯಾಕೇಜಿಂಗ್‌ ವ್ಯವಸ್ಥೆ ಮಾಡಿ, ಪೂರೈಕೆಗೆ ಕ್ರಮ ತೆಗೆದುಕೊಳ್ಳಲಾಗುವುದು. ವ್ಯಾಪಾರಿಗಳು ಸಂಕಷ್ಟದ ಅವಧಿಯನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದರು.

ಪ್ರಮುಖ ತೀರ್ಮಾನಗಳು

* ಟೊಮೇಟೊ ಕೆಚಪ್‌ ತಯಾರಿಕೆಗೆ ಒತ್ತು. ವೈನರಿಗಳಲ್ಲಿ ಉತ್ಪಾದನೆ ಮುಂದುವರಿಸಲು ಸೂಚನೆ.

* ರೈಲುಗಳ ಮೂಲಕ ಹೊರ ರಾಜ್ಯಗಳಿಗೆ ಹಣ್ಣು –ತರಕಾರಿ ಕಳುಹಿಸಲು ವ್ಯವಸ್ಥೆ.

* ರಾಜ್ಯದಲ್ಲಿ ಬೇಸಿಗೆ ಬೆಳೆಯನ್ನು ಕಟಾವು ಮಾಡಲು ನೆರೆಯ ರಾಜ್ಯಗಳಿಂದ ಕಟಾವು ಯಂತ್ರಗಳನ್ನು ತರಿಸಲಾಗುವುದು. ಮುಂದಿನ ಮೂರು ತಿಂಗಳಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಬಿತ್ತನೆ ಆರಂಭವಾಗಲಿದ್ದು,  ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಇಟ್ಟುಕೊಳ್ಳಬೇಕು.

 * ರಾಜ್ಯದ 27 ರೇಷ್ಮೆ ಮಾರುಕಟ್ಟೆಗಳನ್ನು ತೆರೆಯಲು ಕ್ರಮ. 14 ಮಾರುಕಟ್ಟೆಗಳಲ್ಲಿ ತಂಡಗಳನ್ನು ರಚಿಸಿ, ರೀಲರುಗಳು ನೇರವಾಗಿ ರೈತರನ್ನು ಸಂಪರ್ಕಿಸಲು ಸೂಚನೆ. ಒಂದು ವೇಳೆ ಏಜೆಂಟರನ್ನು ಕಳುಹಿಸಿ, ಕಡಿಮೆ ದರಕ್ಕೆ ಖರೀದಿ ಮಾಡಿದರೆ ಅದಕ್ಕೆ ಕಾರಣರಾದ ಅಧಿಕಾರಿ, ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಸೂಕ್ತ ಮುನ್ನೆಚ್ಚರಿಕೆ ವಹಿಸಿ ರೇಷ್ಮೆ ಮಾರುಕಟ್ಟೆಗಳನ್ನು ತೆರೆಯಬೇಕು.

* ರೈಸ್‌ ಮಿಲ್‌ಗಳನ್ನು ಆರಂಭಿಸಲು ಸೂಚನೆ.

*
ಟೊಮೆಟೊ, ಮೊಟ್ಟೆ, ಕೋಳಿ ತಿನ್ನುವುದರಿಂದ ಆರೋಗ್ಯ ಕೆಡುವುದಿಲ್ಲ. ಇಂತಹ ಅಪ ಪ್ರಚಾರಗಳಿಗೆ ಕಿವಿಗೊಡುವುದು ಬೇಡ
-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

*
ರೈತರು ಫಸಲನ್ನು ರಸ್ತೆಗೆ ಚೆಲ್ಲುವುದಾಗಲೀ, ನಾಶ ಮಾಡುವುದಾಗಲೀ ಮಾಡಬಾರದು. ಕೊರೊನಾ ಜಗತ್ತಿಗೆ ಎದುರಾದ ಸಮಸ್ಯೆ
-ಬಿ.ಸಿ.ಪಾಟೀಲ, ಕೃಷಿ ಸಚಿವ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು