ಶುಕ್ರವಾರ, ಮೇ 29, 2020
27 °C
ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ವಿಡಿಯೊ ಸಂವಾದ

ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿ: ಶಿಕ್ಷಕ,ಪದವೀಧರ ಕ್ಷೇತ್ರ ಶಾಸಕರ ಒಕ್ಕೊರಲ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ನಂತರದ ಸಾಮಾಜಿಕ ಸ್ಥಿತಿಯಲ್ಲಿ ಎಸ್ಎಸ್ಎಲ್ಸಿ ಹಾಗೂ ಬಾಕಿ ಉಳಿದಿರುವ ಪಿಯುಸಿ ಇಂಗ್ಲಿಷ್ ಪರೀಕ್ಷೆ, ಶಾಲಾ ಶೈಕ್ಷಣಿಕ ವರ್ಷ ಆರಂಭ ಸೇರಿದಂತೆ ಹಲವಾರು ವಿಷಯಗಳ ಕುರಿತು ಪ್ರಾಥಮಿಕ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಶನಿವಾರ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯರೊಂದಿಗೆ ವಿಡಿಯೊ ಸಂವಾದ ನಡೆಸಿ ಸಲಹೆ ಸೂಚನೆಗಳನ್ನು ಪಡೆದರು. 

ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಾಗ್ಯೂ ಕೊರೊನಾ ಹಿನ್ನೆಲೆಯಲ್ಲಿ ಈಗಾಗಲೇ ಪರೀಕ್ಷೆಗಳು ಮುಂದೂಡಿಕೆಯಾಗಿವೆ. ಮುಂದಿನ ಶೈಕ್ಷಣಿಕ ವರ್ಷ ಸಮಯಕ್ಕೆ ಸರಿಯಾಗಿ ಆರಂಭವಾಗುವ ಸಾಧ್ಯತೆಗಳಿಲ್ಲವಾದ್ದರಿಂದ ಶೈಕ್ಷಣಿಕ ವರ್ಷಕ್ಕೆ ದಿನಗಳು ಕೊರತೆಯಾಗುವ ಹಿನ್ನೆಲೆಯಲ್ಲಿ ಪಠ್ಯಕ್ರಮ ಕಡಿತ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯೊಂದಿಗೆ ತರಗತಿಗಳನ್ನು ಆರಂಭಿಸುವುದು, ಬೋಧನೆ, ತರಗತಿ ಮಾಡುವುದು, ಎಸ್ಎಸ್ಎಲ್‌ಸಿ ಮತ್ತು ಪಿಯು ಪ್ರಶ್ನೆಪತ್ರಿಕೆಗಳ ಮೌಲ್ಯಮಾಪನ ಕುರಿತು ವಿಧಾನಪರಿಷತ್ ಸದಸ್ಯರು ಸಲಹೆ ಸೂಚನೆ ನೀಡಿದರು. 

ಇನ್ನು ಕೆಲವೇ ದಿನಗಳಲ್ಲಿ ಎಸ್ಎಸ್ಎಲ್‌ಸಿ ಮತ್ತು ಪಿಯು ಇಂಗ್ಲಿಷ್ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟಣೆ, ಕೊರೊನಾ ಹಿನ್ನೆಲೆಯಲ್ಲಿ ಅದಕ್ಕೆ ಹೇಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ, ಮುಂದೆ ತರಗತಿಗಳನ್ನು ನಡೆಸುವ ಕುರಿತು ಇಲಾಖೆಯ ಮುಂದಿರುವ ಮತ್ತು ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು, ಶಿಕ್ಷಕರು, ಸಾಮಾಜಿಕ ಮುಖಂಡರು ಸೇರಿದಂತೆ ಹಲವಾರು ಮಂದಿ ನೀಡಿರುವ ಸಲಹೆಗಳನ್ನು ವಿವರಿಸಿ ಈಗಾಗಲೇ ರಾಜ್ಯದ ಶಿಕ್ಷಣ ಸಚಿವರೊಂದಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವರು ನಡೆಸಿದ ಚರ್ಚೆಯ ವಿಷಯಗಳನ್ನು ಹಂಚಿಕೊಂಡು ಈ ಕುರಿತಂತೆ ತಮ್ಮ ಸಲಹೆ ಸೂಚನೆಗಳನ್ನು ಮುಕ್ತ ಮನಸ್ಸಿನಿಂದ ಹಂಚಿಕೊಳ್ಳಬೇಕೆಂದು ಶಿಕ್ಷಣ ಸಚಿವ ಎಸ್ . ಸುರೇಶ್ ಕುಮಾರ್ ಕೋರಿದರು.

ಬಹುತೇಕ ಎಲ್ಲ ಸದಸ್ಯರು, ನಮ್ಮ ರಾಜ್ಯದಲ್ಲಿ ಪ್ರತಿಯೊಂದಕ್ಕೂ ಪ್ರಮುಖ ಮಾನದಂಡವಾಗಿರುವ ಹಿನ್ನೆಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ನಡೆಸಲೇಬೇಕು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಅದರೊಂದಿಗೆ ಹೋರಾಡುತ್ತಲೇ ನಾವು ನಮ್ಮ ಚಟುವಟಿಕೆಗಳನ್ನು ಮುಂದುವರೆಸಬೇಕಾದ ಅಗತ್ಯವಿರುವುದರಿಂದ ಅಂತರ ಕಾಪಾಡಿಕೊಳ್ಳುವುದರೊಂದಿಗೆ ಪರೀಕ್ಷೆ ನಡೆಸಬೇಕು, ಹಾಗೆಯೇ ಪಾಳಿ ಮೇಲೆ ತರಗತಿ ನಡೆಸಬೇಕೆಂದು ಸಲಹೆ ನೀಡಿದರು. ಕೆಲವರು ದಿನಬಿಟ್ಟು ದಿನ ಒಂದೊಂದು ತರಗತಿ ಶಾಲೆ ನಡೆಸಬೇಕು ಎಂದರೆ ಹಲವರು ಸಿಲೆಬಸ್ ಕಡಿಮೆ ಮಾಡುವುದು ತರವಲ್ಲ ಎಂದರು. ಶಾಲಾ ಹಂತದಲ್ಲಿ ಇಲ್ಲವೇ ಕ್ಲಸ್ಟರ್ ಹಂತದಲ್ಲಿ ಪರೀಕ್ಷೆ ಮತ್ತುಮೌಲ್ಯಮಾಪನ ನಡೆಸುವುದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮತ್ತು ಶೀಘ್ರವಾಗಿ ಪ್ರಕ್ರಿಯೆ ಮುಗಿಸಲು ಸಾಧ್ಯವಾಗುತ್ತದೆ ಎಂದು ಕೆಲವರು ಸಲಹೆ ನೀಡಿದರು. 

ಪಿಯುಸಿ ಹಂತದ ಸಿಲೆಬಸ್ ಕಡಿಮೆ ಮಾಡುವುದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿ ನಿರ್ಧಾರ ಮಾಡಬೇಕು. ನಮ್ಮ ರಾಜ್ಯವೊಂದರಲ್ಲೇ ಕಡಿತ ಮಾಡಿದರೆ ಅದು ಮುಂದೆ ನಮ್ಮ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರಬಬಹುದಾದ ಸಾಧ್ಯತೆಗಳಿರುತ್ತವೆ. ಕೇಂದ್ರ ಪಠ್ಯದ ಶಾಲೆಗಳಲ್ಲಿ ಈ ಕುರಿತು ತೆಗೆದುಕೊಳ್ಳುವ ತೀರ್ಮಾನಗಳಿಗೆ ಅನುಗುಣವಾಗಿ ನಾವು ನಮ್ಮ ನಡೆಯನ್ನು ನಿರ್ಧರಿಸಬೇಕಾಗುತ್ತದೆ ಎಂದರು. 
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷಾ ಮತ್ತು ಮೌಲ್ಯಮಾಪನ ಕೇಂದ್ರಗಳನ್ನು ಹೆಚ್ಚಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮುಂದಾಗಬೇಕು. ಶೀಘ್ರವೇ ಪಿಯುಸಿ ಮೌಲ್ಯಮಾಪನ ಶುರು ಮಾಡಬೇಕು. ಇಂಗ್ಲಿಷ್ ಪರೀಕ್ಷೆಯೊಳಗೆ ಪಿಯುಸಿ ಎಲ್ಲ ಪತ್ರಿಕೆಗಳ ಮೌಲ್ಯಮಾಪನ ಮುಗಿಯುವಂತಹ ವ್ಯವಸ್ಥೆಯಾಗಬೇಕು ಎಂದು ಹಲವಾರು ಮಂದಿ ಸಲಹೆ ನೀಡಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮತ್ತು ಶೀಘ್ರ ಪರೀಕ್ಷಾ ಪ್ರಕ್ರಿಯೆ ಮುಗಿಸಲು ಅನುವಾಗುವಂತೆ ಮೌಲ್ಯಮಾಪನದಲ್ಲಿ ವಿಕೇಂದ್ರೀಕೃತ ವ್ಯವಸ್ಥೆ ಮಾಡಬೇಕಿದೆ ಎಂದೂ ಸಲಹೆ ನೀಡಿದರು. 

ಕೆಲವರು ಸಿಲೆಬಸ್ ಕಡಿಮೆ ಮಾಡುವುದು ಸರಿಯಲ್ಲ, ಶನಿವಾರ ಪೂರ್ಣ ಶಾಲೆ ನಡೆಸಬೇಕು, ದಸರಾ, ಬೇಸಿಗೆ ರಜೆ ರದ್ದು ಮಾಡಿ ಶಾಲಾ ಶೈಕ್ಷಣಿಕ ವರ್ಷ ಸರಿದೂಗಿಸಬೇಕೆಂದರೆ, ಕೆಲವರು ಕಡಿತವಾಗುವ ಶೈಕ್ಷಣಿಕ ವರ್ಷದ ಅವಧಿಗನುಗುಣವಾಗಿ ಮುಖ್ಯವಲ್ಲದ ಪಠ್ಯಗಳನ್ನು ಕೈಬಿಡುವುದು ಒಳ್ಳೆಯದೆಂದು ಸಲಹೆ ನೀಡಿದರು. ಸಚಿವರು ಈ ಕುರಿತಂತೆ ಈ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಲು ಕೈಗೊಂಡ ಕ್ರಮದ ಕುರಿತು ಎಲ್ಲ ಸದಸ್ಯರು ಹರ್ಷ ವ್ಯಕ್ತಪಡಿಸಿ ಸಚಿವರ ನಡೆಯನ್ನು ಪ್ರಶಂಶಿಸಿದರು. 
ಈ ಬಗ್ಗೆ ಇನ್ನೊಮ್ಮೆ ತಮ್ಮೊಂದಿಗೆ ಚರ್ಚಿಸಿ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಹಿತವಾವಂತಹ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಿ, ತಮ್ಮೊಂದಿಗೆ ಒತ್ತಾಸೆಯಾಗಿ ನಿಂತ ಎಲ್ಲ ಸದಸ್ಯರಿಗೂ ಕೃತಜ್ಞತೆ ಸಲ್ಲಿಸಿದರು.

ವಿಡಿಯೊ ಸಂವಾದದಲ್ಲಿ ವಿಧಾನಪರಿಷತ್ತಿನ ಸದಸ್ಯರಾದ ಬಸವರಾಜ  ಹೊರಟ್ಟಿ, ಶರಣಪ್ಪ ಮಟ್ಟೂರು, ಡಾ. ಚಂದ್ರಶೇಖರ ಪಾಟೀಲ, ಪುಟ್ಟಣ್ಣ, ಸಂಕನೂರು, ಅ. ದೇವೇಗೌಡ, ಹನುಮಂತ ನಿರಾಣಿ, ಆಯೂನೂರು ಮಂಜುನಾಥ, ಚೌಡರೆಡ್ಡಿ ತೂಪಲ್ಲಿ, ಮರಿತಿಬ್ಬೇಗೌಡ, ಅರುಣ ಶಹಾಪುರ ಭಾಗವಹಿಸಿದ್ದರೆ, ಸಚಿವರೊಂದಿಗೆ ಕೆ.ಟಿ. ಶ್ರೀಕಂಠೇಗೌಡ, ಭೋಜೆಗೌಡ, ನಾರಾಯಣಸ್ವಾಮಿ ಚರ್ಚೆಯಲ್ಲಿ ನೇರವಾಗಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು