ಬುಧವಾರ, ಏಪ್ರಿಲ್ 1, 2020
19 °C
ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ಕಾಂಗ್ರೆಸ್‌ ನಾಯಕರ ಯತ್ನ

‘ಬಿಜೆಪಿಯವರಿಂದಲೇ ದೇಶದ್ರೋಹ’

‍ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ ಸರ್ಕಾರ, ಎನ್‌ಆರ್‌ಸಿ, ಸಿಎಎ ವಿರುದ್ಧ ಹೋರಾಟ ಮಾಡುತ್ತಿರುವವರ ಮೇಲೆ ದೇಶದ್ರೋಹದ ಕೇಸು ಹಾಕುತ್ತಿದೆ. ಆ ಪ‍ಕ್ಷದವರೇ ದೇಶದ್ರೋಹದ ಕೆಲಸ ಮಾಡುತ್ತಿದ್ದರೂ ಅವರ ಮೇಲೆ ಕೇಸು ಹಾಕುತ್ತಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಪಾದಿಸಿದರು.

ಪೊಲೀಸರನ್ನು ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಮನೆಗೆ ಶನಿವಾರ ಮುತ್ತಿಗೆ ಹಾಕುವ ಕಾರ್ಯಕ್ರಮಕ್ಕೆ ಮುನ್ನ ಮೌರ್ಯ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ಮಂಗಳೂರಿನಲ್ಲಿ ಗೋಲಿಬಾರ್‌ ನಡೆಸಿದ್ದನ್ನು ಖಂಡಿಸಿದ ಶಾಸಕ ಖಾದರ್ ಮೇಲೆ ಪೊಲೀಸರು ಕೇಸ್‌ ಹಾಕಿದ್ದಾರೆ. ಆದರೆ, ದೇಶದ್ರೋಹದ ಮಾತುಗಳನ್ನು ಆಡುತ್ತಿರುವ, ಪ್ರಚೋದನೆ ನೀಡುತ್ತಿರುವ ಬಿಜೆಪಿಯ ಸಂಸದರು, ಸಚಿವರ ವಿರುದ್ಧ ಯಾವುದೇ ಮೊಕದ್ದಮೆಗಳನ್ನು ಹೂಡುತ್ತಿಲ್ಲ. ಇದು ಪೊಲೀಸರ ದುರ್ಬಳಕೆಯಲ್ಲವೇ’ ಎಂದು ಪ್ರಶ್ನಿಸಿದರು.

‘ಮೈಸೂರಿನಲ್ಲಿ ಫ್ರೀ ಕಾಶ್ಮೀರ ಎಂದು ಘೋಷಣೆ ಕೂಗಿದ ಯುವತಿ ವಿರುದ್ಧ, ನಾಟಕ ಮಾಡಿದ್ದಕ್ಕೆ ಬೀದರ್‌ನ ಶಾಹಿನ್ ಶಾಲೆ ವಿರುದ್ಧ ದೇಶದ್ರೋಹದ ಕೇಸ್ ಹಾಕಲಾಗಿದೆ. ಬಾಬರಿ ಮಸೀದಿ ಧ್ವಂಸ ಮಾಡಿದ್ದುದು ಸರಿಯಲ್ಲ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. ಬಾಬರಿ ಮಸೀದಿ ಧ್ವಂಸ ಮಾಡಿದ್ದನ್ನು ಸಂಭ್ರಮಿಸುವಂತೆ ಕಾರ್ಯಕ್ರಮ ನೀಡಿದ ಕಲ್ಲಡ್ಕ ಪ್ರಭಾಕರ್ ಭಟ್‌ ನೇತೃತ್ವದ ಶಾಲೆ ವಿರುದ್ಧ ಯಾಕೆ ದೇಶದ್ರೋಹದ ಕೇಸ್ ಹಾಕಿಲ್ಲ’ ಎಂದು ಪ್ರಶ್ನೆ ಮಾಡಿದರು. 

‘ಬಿಜೆಪಿ ಸಂಸದ ಅನಂತಕುಮಾರ ಹೆಗಡೆ, ಪ್ರತಾಪ ಸಿಂಹ, ಅದು ಎಂತದ್ದೋ ಸೂರ್ಯ ಇದ್ದಾನಲ್ಲ ಅವರೆಲ್ಲ ಉಗ್ರವಾಗಿ ಮಾತನಾಡುತ್ತಲೇ ಇದ್ದಾರೆ. ಸಚಿವರಾದ ಅಶೋಕ, ಸಿ.ಟಿ.ರವಿ, ಶಾಸಕರಾದ ಸೋಮಶೇಖರ ರೆಡ್ಡಿ, ರೇಣುಕಾಚಾರ್ಯ ಎಲ್ಲರೂ ದ್ವೇಷ ಬಿತ್ತುವ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರದ ಕೈಗೊಂಬೆಯಂತಿರುವ ಪೊಲೀಸರು ಅವರ ಯಾರ ಮೇಲೂ ಕೇಸ್ ಹಾಕಿಲ್ಲ. ಪೊಲೀಸರು ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿಲ್ಲ ಎಂಬುದಕ್ಕೆ ಇದು ಸಾಕ್ಷಿ’ ಎಂದರು. 

‘ಯಡಿಯೂರಪ್ಪನವರೇ ನೀವು ಶಾಶ್ವತವಾಗಿ ಗೂಟ ಹೊಡೆದುಕೊಂಡಿರುವುದಿಲ್ಲ. ಪೊಲೀಸರೇ ನೀವು ಶಾಂತಿ ಕಾಪಾಡಲು ಇದ್ದೀರಿ. ಅದನ್ನು ಬಿಟ್ಟು ಬಿಜೆಪಿಯವರ ಮಾತು ಕೇಳಿ ಕಾನೂನು ದುರುಪಯೋಗ ಮಾಡಿಕೊಳ್ಳಬೇಡಿ. ಮುಂದಿನ ದಿನಗಳಲ್ಲಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದರು.

ವಶಕ್ಕೆ ಪಡೆದು ಬಿಡುಗಡೆ: ಸಭೆ ಬಳಿಕ ಮುಖ್ಯಮಂತ್ರಿಗೆ ಮನೆಗೆ ಮುತ್ತಿಗೆ ಹಾಕಲು ಮೆರವಣಿಗೆ ಹೊರಟ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌, ಸಂಸದ ಡಿ.ಕೆ. ಸುರೇಶ್‌, ಶಾಸಕ ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ನಾಯಕರನ್ನು ವಶಕ್ಕೆ ಪಡೆದ ಪೊಲೀಸರು ಬಳಿಕ ಬಿಡುಗಡೆ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು