ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ದರ ಏರಿಕೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

Last Updated 29 ಜೂನ್ 2020, 21:17 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್‌ ಬೆಲೆ ಏರಿಸುವ ಮೂಲಕ ಜನಸಾಮಾನ್ಯರಿಗೆ ಬರೆ ಹಾಕುತ್ತಿದೆ ಎಂದು ಆ‍ರೋಪಿಸಿರುವ ಕಾಂಗ್ರೆಸ್ ಪಕ್ಷವು ರಾಜ್ಯದಾದ್ಯಂತ ಸೋಮವಾರ ಪ್ರತಿಭಟನೆ ನಡೆಸಿತು.

ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರತಿಭಟನಾ ಸಭೆಗೆ ಸೈಕಲ್ ಏರಿ ಬಂದರು. ಬಳಿಕ ಮಾತನಾಡಿದ ನಾಯಕರು, ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ದಾವಣಗೆರೆಯಲ್ಲಿ ಕಾರ್ಯಕರ್ತರು ಎತ್ತಿನಗಾಡಿಗೆ ಮೊರೆ ಹೋದರೆ, ಧಾರವಾಡದಲ್ಲಿ ಎಮ್ಮೆ ಮೆರವಣಿಗೆ ನಡೆಸಿದರು. ಮಂಗಳೂರಿನಲ್ಲಿ ಸೈಕಲ್‌ಗೆ ಸ್ಥಳೀಯ ಸಂಸದರ ಮುಖವಾಡವನ್ನು ಸಿಕ್ಕಿಸಿದ್ದರು.‌

ಹುಬ್ಬಳ್ಳಿಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಚಕ್ಕಡಿ ಹಾಗೂ ಸೈಕಲ್‌ ಸವಾರಿ ಮಾಡಿದರು. ಮಾಜಿ ಸಚಿವ, 82 ವರ್ಷದ ಎ.ಎಂ. ಹಿಂಡಸಗೇರಿ, ಮಾಜಿ ಸಂಸದ, 82 ವರ್ಷದ ಐ.ಜಿ. ಸನದಿ ಅವರು ಸುಮಾರು ಒಂದು ಕಿ.ಮೀ. ಸೈಕಲ್‌ ತುಳಿದು ಪ್ರತಿಭಟಿಸಿದರು.

ಹಾವೇರಿ ಜಿಲ್ಲಾಕೇಂದ್ರ ಬಿಟ್ಟು ಉಳಿದೆಲ್ಲ ಜಿಲ್ಲೆಗಳಲ್ಲಿ ಸೈಕಲ್‌ ಏರಿ ಚಳವಳಿ ನಡೆಯಿತು. ಕಲಬುರ್ಗಿ ನಗರದಲ್ಲಿ ಶಾಸಕಿ ಖನೀಜ್‌ ಫಾತಿಮಾ ಟಾಂಗಾದಲ್ಲಿ ಸಂಚರಿಸಿ ಗಮನ ಸೆಳೆದರು.‌

‘ಕೈ‌ ನಾಯಕರ ವಿರುದ್ಧ ಎಫ್‌ಐಆರ್‌’
ಪ್ರತಿಭಟನೆ ನಡೆಸಲು ಅನುಮತಿ ಪಡೆಯದ ಕಾರಣ ಕಾಂಗ್ರೆಸ್‌ ನಾಯಕರ ವಿರುದ್ಧ ಎಫ್‌ಐಆರ್‌ ದಾಖಲಿಸಿ, ಕ್ರಮ ತೆಗೆದುಕೊಳ್ಳುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಪೊಲೀಸರು ಯಾವ ಕಾಯ್ದೆ ಮೇಲೆ, ಯಾರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವುದು ಗೊತ್ತಾಗುತ್ತದೆ. ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡಿರಲಿಲ್ಲ ಎಂದರು.

ಈ ಮಧ್ಯೆ, ಪ್ರತಿಭಟನೆಯ ವಿಡಿಯೊ ಚಿತ್ರೀಕರಣ ಮಾಡಿರುವ ಪೊಲೀಸರು, ಈ ಬಗ್ಗೆ ವರದಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ನೀಡುವಂತೆ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT