ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಸೇವೆ ಸಿಗುತ್ತಿಲ್ಲ; ಹೊರಗೆ ಲಾಠಿ ಏಟು ತಪ್ಪುತ್ತಿಲ್ಲ !

ಸೂಪರ್‌ ಮಾರುಕಟ್ಟೆಗಳಲ್ಲಿ ಸೀಮಿತ ಸಂಖ್ಯೆಯ ಗ್ರಾಹಕರಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ * ಮನೆ ಬಾಗಿಲಿಗೆ ಸೇವೆಯೂ ಕಷ್ಟ
Last Updated 28 ಮಾರ್ಚ್ 2020, 9:04 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸೂಪರ್‌ ಮಾರ್ಕೆಟ್‌ಗಳು ಸೀಮಿತ ಸಂಖ್ಯೆಯ ಗ್ರಾಹಕರಿಗೆ ಸೇವೆ ಒದಗಿಸುತ್ತಿವೆ. ಆದರೆ, ಮನೆಯವರಿಗೆ ಸೇವೆ ಒದಗಿಸಲು ಅಥವಾ ಆನ್‌ಲೈನ್‌ನಲ್ಲಿ ಖರೀದಿಸುವವರಿಗೆ ಸೇವೆ ಒದಗಿಸಲು ಸಾಧ್ಯವಾಗದ ಕಾರಣ ಗ್ರಾಹಕರು ಪರದಾಟ ಅನುಭವಿಸುವಂತಾಗಿದೆ.

ಅಗತ್ಯ ವಸ್ತುಗಳನ್ನು ಖರೀದಿಸಲು ಬೀದಿಗೆ ಬರುವ ಕೆಲವರ ಮೇಲೆ ಪೊಲೀಸರು ಲಾಠಿ ಬೀಸುತ್ತಿರುವುದು ಗ್ರಾಹಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಆದರೆ, ಆನ್‌ಲೈನ್‌ನಲ್ಲಿ ಒಂದು ಉತ್ಪನ್ನ ತರಿಸಿಕೊಳ್ಳಲು ವಾರಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಉದ್ಭವವಾಗಿದೆ.

ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಉದ್ದೇಶದಿಂದ ಸುಮಾರು ಅರ್ಧ ಗಂಟೆ ಅವಧಿಯಲ್ಲಿ 20ರಿಂದ 30 ಗ್ರಾಹಕರನ್ನು ಮಾತ್ರ ಸೂಪರ್‌ ಮಾರುಕಟ್ಟೆ ಒಳಗೆ ಬಿಡಲಾಗುತ್ತಿದೆ. ಮೆಟ್ರೊ, ಡಿ–ಮಾರ್ಟ್‌, ರಿಲಯನ್ಸ್‌ ಸೇರಿದಂತೆ ಹಲವು ಸೂಪರ್‌ ಮಾರ್ಕೆಟ್‌ಗಳಲ್ಲಿ ಈ ನಿಯಮ ಪಾಲಿಸಲಾಗುತ್ತಿದೆ. ಮೋರ್‌ ಮಧ್ಯಾಹ್ನದವರೆಗೆ ಮಾತ್ರ ಸೇವೆ ನೀಡುತ್ತಿದ್ದರೆ, ಬಿಗ್‌ ಬಜಾರ್‌ ಆನ್‌ಲೈನ್‌ನಲ್ಲಿ ಅಥವಾ ಮನೆ ಬಾಗಿಲಿಗೆ ಸೇವೆ ಒದಗಿಸುವುದಾಗಿ ಘೋಷಿಸಿದೆ. ಆದರೆ, ಸಿಬ್ಬಂದಿ ಕೊರತೆ ಇರುವುದರಿಂದ ಹೆಚ್ಚು ಬೇಡಿಕೆ ಪೂರೈಸಲು ಅದಕ್ಕೆ ಸಾಧ್ಯವಾಗುತ್ತಿಲ್ಲ.

‘ಆನ್‌ಲೈನ್‌ನಲ್ಲಿ ನಾನು ದಿನಸಿ ಪದಾರ್ಥಗಳ ಖರೀದಿಗೆ ಬೇಡಿಕೆ ಇಟ್ಟಿದ್ದೇನೆ. ಏಪ್ರಿಲ್‌ 5ರ ನಂತರ ಪೂರೈಸುವುದಾಗಿ ಕಂಪನಿ ಹೇಳಿದೆ’ ಎಂದು ಜಯನಗರ ನಿವಾಸಿ ತನ್ಮಯಿ ಹೇಳುತ್ತಾರೆ.

‘ನಿತ್ಯದ ಅಗತ್ಯಕ್ಕೆ ತಕ್ಕಂತೆ ದಿನಸಿ ಪದಾರ್ಥ ಖರೀದಿಸುವುದು ಕಷ್ಟವೇನಲ್ಲ. ಆದರೆ, ಮನೆಯಲ್ಲಿ ಮಗು ಇದೆ. ಮಗುವನ್ನು ಮನೆಯಲ್ಲಿ ಬಿಟ್ಟು, ಹೊರಗೆ ಬಂದು, ಉದ್ದದ ಸರದಿ ಸಾಲಿನಲ್ಲಿ ನಿಲ್ಲುವುದಕ್ಕೆ ಸಾಧ್ಯವಾಗುತ್ತಿದೆ. ಮನೆ ಬಾಗಿಲಿಗೇ ದಿನಸಿ ತಂದುಕೊಡುವ ಕೆಲಸವಾದರೆ ಅನುಕೂಲವಾಗುತ್ತದೆ’ ಎಂದು ಅವರು ಹೇಳುತ್ತಾರೆ.

‘ಮನೆ ಬಾಗಿಲಿಗೆ ದಿನಸಿ ತಲುಪಿಸುವ ಕೆಲಸವನ್ನು ಯಾವ ಸೂಪರ್‌ ಮಾರುಕಟ್ಟೆಯೂ ಮಾಡುತ್ತಿಲ್ಲ. ಸರ್ಕಾರ ಏನು ಮಾಡುತ್ತಿದೆ. ಜನರು ಮನೆಯಿಂದ ಹೊರಗೆ ಬರಬೇಕು ಎಂದು ಸರ್ಕಾರವೇ ಬಯಸುತ್ತಿದೆಯೇ’ ಎಂದು ಪ್ರದೀಪ್‌ ಪಾಂಡೆ ಎಂಬುವರು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಗ್‌ಬಾಸ್ಕೆಟ್‌ ಸಂಸ್ಥೆ, ‘ಕಳೆದ ಕೆಲವು ದಿನಗಳಿಂದ ಹಲವು ನಿರ್ಬಂಧಗಳನ್ನು ನಮ್ಮ ಮೇಲೆ ಹೇರಲಾಗಿದೆ. ನಮ್ಮ ಸಿಬ್ಬಂದಿ ಹಾಗೂ ವಾಹನಗಳ ಸಂಚಾರಕ್ಕೆ ಅನುಮತಿ ಸಿಗುತ್ತಿರಲಿಲ್ಲ. ಆದರೆ, ಈಗ ಅವಕಾಶ ನೀಡಲಾಗುತ್ತಿದೆ. ಹೆಚ್ಚು ಬೇಡಿಕೆ ಇರುವುದರಿಂದ ಪೂರೈಕೆ ಕಷ್ಟವಾಗುತ್ತಿದೆ. ಬೇಡಿಕೆ ಸಲ್ಲಿಸಿದ ನಾಲ್ಕೈದು ದಿನಗಳ ನಂತರ ಮನೆ ಬಾಗಿಲಿಗೆ ದಿನಸಿ ತಲುಪಬಹುದು’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT