ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೋನಾ: ಮನೆ ನಿಗಾದಲ್ಲಿರುವವರ ಮನೆ ಕಸವೂ ಪ್ರತ್ಯೇಕ

ರಾಜ್ಯದಲ್ಲಿ ಸೋಂಕು ತಡೆಗೆ ಪೌರಾಡಳಿತ ನಿರ್ದೇಶನಾಲಯ ಕ್ರಮ
Last Updated 3 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಕೊರೋನಾ ಸೋಂಕು ತಗುಲಿರಬಹುದು ಎಂಬ ಶಂಕೆಯ ಮೇರೆಗೆ ರಾಜ್ಯದಲ್ಲಿ ಕಡ್ಡಾಯವಾಗಿ ಮನೆ ನಿಗಾದಲ್ಲಿರುವವರ ಮನೆ ಕಸವನ್ನೂ ರಾಜ್ಯದ ಎಲ್ಲೆಡೆ ಪ್ರತ್ಯೇಕವಾಗಿ ಸಂಗ್ರಹಿಸಿ ರವಾನಿಸಲಾಗುತ್ತಿದೆ.

ಆಸ್ಪತ್ರೆಗಳ ತ್ಯಾಜ್ಯವನ್ನು ಸಂಗ್ರಹಿಸುತ್ತಿರುವ ಖಾಸಗಿ ಸಂಸ್ಥೆಗಳಿಗೇ ಈ ಹೊಣೆಯನ್ನು ನೀಡಲಾಗಿದ್ದು, ಸಂಸ್ಥೆಯ ಪ್ರತಿನಿಧಿಗಳು ಹಾಗೂ ಪೌರಕಾರ್ಮಿಕರು ಜಂಟಿಯಾಗಿ ಈ ಕೆಲಸ ಮಾಡುತ್ತಿದ್ದಾರೆ. ನಿಗಾದಲ್ಲಿರುವವರೇ ತಮ್ಮ ಮನೆಯ ಕಸವನ್ನು ವೈಜ್ಞಾನಿಕವಾಗಿ ಪ್ಯಾಕ್‌ ಮಾಡಿ ನೀಡಬೇಕು ಎಂದೂ ಪೌರಾಡಳಿತ ಇಲಾಖೆ ಸೂಚನೆ ನೀಡಿದೆ.

ಮುನಿಸಿಪಲ್‌ ನಿಧಿ ಮೀಸಲು: ಏಪ್ರಿಲ್‌ ಮತ್ತು ಮೇ ತಿಂಗಳಿಗೆ ಸಾಕಾಗುವಷ್ಟು ಕೆಮಿಕಲ್ಸ್‌ಗಳನ್ನು ಮುನಿಸಿಪಲ್‌ ನಿಧಿ ಅಥವಾ ಎಸ್‌ಎಫ್‌ಸಿ ಮುಕ್ತನಿಧಿಯಡಿ ಕಾಯ್ದಿರಿಸಿರುವ ಶೇ 24.10ರ ಅನುದಾನದಲ್ಲಿ ಖರೀದಿಸಬೇಕು. ಅದನ್ನು ಅತಿ ಅವಶ್ಯವಿರುವ ಕಾರ್ಯಗಳಿಗೆ ಬಿಟ್ಟು ಬೇರೆ ಉದ್ದೇಶಗಳಿಗೆ ಬಳಸುವಂತಿಲ್ಲ. ಕೊರೋನಾ ಸೋಂಕು ತಡೆಗಟ್ಟುವ ಕಾರ್ಯಕ್ರಮಗಳಿಗೆ ಮತ್ತು ಸ್ವಚ್ಛತಾ ಪರಿಕರ ಖರೀದಿಸಲು ಮಾತ್ರ ಬಳಸಬೇಕು ಎಂದು ಇಲಾಖೆ ಸೂಚಿಸಿದೆ.

ತ್ಯಾಜ್ಯ ಸಂಗ್ರಹದ ಕುರಿತು ‘ಪ್ರಜಾವಾಣಿ’ಗೆ ಶುಕ್ರವಾರ ಪ್ರತಿಕ್ರಿಯಿಸಿದ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಹನುಮಂತಪ್ಪ, ‘ಮನೆ ನಿಗಾದಲ್ಲಿರುವವರ ಮನೆ ಕಸವನ್ನು ಪ್ರತ್ಯೇಕವಾಗಿಯೇ ಸಂಗ್ರಹಿಸಬೇಕು ಎಂಬ ಸೂಚನೆಯನ್ನು ಪಾಲಿಸಲಾಗುತ್ತಿದೆ. ತಾಲ್ಲೂಕು ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಈ ಕೆಲಸ ನಡೆಯುತ್ತಿದೆ’ ಎಂದು ತಿಳಿಸಿದರು.

ಮಿಶ್ರಣ ಸಿಂಪಡಣೆ: ಸೂಕ್ಷ್ಮ ಪ್ರದೇಶಗಳಲ್ಲಿ ಅಗ್ನಿಶಾಮಕ ವಾಹನದಲ್ಲಿ ಹೈಪೋಕ್ಲೋರೈಡ್‌ ಮಿಶ್ರಣ (350 ಗ್ರಾಂ ಬ್ಲೀಚಿಂಗ್‌ ಪುಡಿಗೆ 10 ಲೀಟರ್‌ ನೀರು) ಸಿಂಪಡಿಸುವ ಕಾರ್ಯಕ್ಕೆ ಸಹಕರಿಸಲು ಪೌರಕಾರ್ಮಿಕರನ್ನು ನಿಯೋಜಿಸಲಾಗಿದೆ.

ಪೌರಕಾರ್ಮಿಕರ ವೇಳಾಪಟ್ಟಿ

ಪೌರಕಾರ್ಮಿಕರು, ಲೋಡರ್ಸ್‌, ಚಾಲಕರು, ಸ್ಯಾನಿಟರಿ ಸೂಪರ್‌ವೈಸರ್ಸ್‌ ಹಾಗೂ ಇತರೆ ಸ್ವಚ್ಛತಾ ಕೆಲಸಗಾರರಿಗೆ ಬೆಳಿಗ್ಗೆ 6.30ರಿಂದ 10.30ರವರೆಗೆ ಕೆಲಸದ ಅವಧಿಯನ್ನು ನಿಗದಿಪಡಿಸಿ ಪೌರಾಡಳಿತ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿದೆ.

‘ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈಗ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿರುವುದರಿಂದ ಅವರ ಮೇಲಿನ ಒತ್ತಡ ಕಡಿಯಾಗುತ್ತದೆ’ ಎಂದು ಸಮಾನತೆ ಯೂನಿಯನ್‌ ಸಂಘಟನೆಯ ಮುಖಂಡ ರಾಮಚಂದ್ರ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT