ಮಂಗಳವಾರ, ಜೂನ್ 2, 2020
27 °C
ಕಾರ್ಮಿಕ ಇಲಾಖೆ ಪ್ರಾರಂಭಿಸಿರುವ ಸಹಾಯವಾಣಿ ವಿರುದ್ಧ ಆರೋಪ

ಸಹಾಯವಾಣಿಯಿಂದ ಸ್ಪಂದನೆಯಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಈಡಾಗಿರುವವರಿಗೆ ಆಹಾರ ಪೊಟ್ಟಣ ಮತ್ತು ದಿನಸಿ ಪದಾರ್ಥಗಳನ್ನು ವಿತರಿಸುವ ಉದ್ದೇಶದಿಂದ ಕಾರ್ಮಿಕ ಇಲಾಖೆ ಪ್ರಾರಂಭಿಸಿರುವ ಸಹಾಯವಾಣಿಗೆ ಕರೆ ಮಾಡಿದರೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. 

‘ಸಹಾಯವಾಣಿ ಸಂಖ್ಯೆ 155214ಗೆ ಕರೆ ಮಾಡಿದರೆ ಸಂಪರ್ಕ ಸಾಧ್ಯವಾಗುತ್ತಿಲ್ಲ. ಹಲವು ಬಾರಿ ಕರೆ ಮಾಡಿದರೂ, ನಮ್ಮ ಪ್ರತಿನಿಧಿಗಳು ಶೀಘ್ರವೇ ನಿಮ್ಮ ಬಳಿ ಮಾತನಾಡುತ್ತಾರೆ ಎಂಬ ಧ್ವನಿಮುದ್ರಿತ ಸಂದೇಶ ಬರುತ್ತದೆ. ಆದರೆ ಯಾರೂ ಕರೆ ಸ್ವೀಕರಿಸುತ್ತಿಲ್ಲ’ ಎಂದು ಸಿಲ್ಕ್‌ ಬೋರ್ಡ್‌ ಸಮೀಪ ವಾಸವಿರುವ ಕಾರ್ಮಿಕರೊಬ್ಬರು ದೂರಿದರು. 

‘ಹಲವು ಬಾರಿ ಕರೆ ಮಾಡಿದಾಗ ಸ್ವೀಕರಿಸಲಾಯಿತು. ನಮ್ಮ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆ ತೆಗೆದುಕೊಂಡರು. ಆದರೆ, ಈವರೆಗೆ ದಿನಸಿ ಪದಾರ್ಥಗಳನ್ನು ಯಾರೂ ತಂದುಕೊಟ್ಟಿಲ್ಲ’ ಎಂದು ಕಾರ್ಮಿಕ ಮಹಾಂತೇಶ್‌ ಎಂಬುವರು ಹೇಳಿದರು. 

ಇಂದಿನಿಂದ ದಿನಸಿ: ‘ರಾಜ್ಯದಾದ್ಯಂತ ಕರೆಗಳು ಬರುತ್ತಿರುವುದರಿಂದ ಕೆಲವರಿಗೆ ಸಂಪರ್ಕ ಸಾಧ್ಯವಾಗಿಲ್ಲ ಎನಿಸುತ್ತದೆ. ಆದರೆ, ಸಹಾಯವಾಣಿ ಉತ್ತಮವಾಗಿ ಕೆಲಸ ಮಾಡುತ್ತಿದೆ. ಕರೆ ಸ್ವೀಕರಿಸುತ್ತಿರುವ ಏಜೆಂಟರ ಕೊರತೆ ಇರುವುದರಿಂದ ಎಲ್ಲರಿಗೂ ಸಕಾಲಕ್ಕೆ ಸ್ಪಂದಿಸಲು ಸಾಧ್ಯವಾಗಿಲ್ಲದಿರಬಹುದು’ ಎಂದು ಸಹಾಯವಾಣಿ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಒಬ್ಬೊಬ್ಬ ಏಜೆಂಟರ್‌ಗೆ ದಿನಕ್ಕೆ 200ರಿಂದ 250 ಕರೆಗಳು ಬರುತ್ತಿವೆ. ಇಂತಹ ನೂರಾರು ಏಜೆಂಟರು ಸಹಾಯವಾಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ, ರಾಜ್ಯದಾದ್ಯಂತ ಕರೆಗಳು ಬರುತ್ತಿರುವುದರಿಂದ ಕೆಲವರಿಗೆ ಸಂಪರ್ಕ ಸಿಕ್ಕಿಲ್ಲ ಎನಿಸುತ್ತದೆ’ ಎಂದು ಅವರು ಹೇಳಿದರು. 

‘ಯಾರೇ ಕರೆ ಮಾಡಲಿ ಅವರ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆ ತೆಗೆದುಕೊಳ್ಳಲಾಗುತ್ತದೆ.ಸ್ಥಳೀಯ ಅಧಿಕಾರಿಗಳಿಗೆ ಈ ಮಾಹಿತಿ ರವಾನಿಸಲಾಗುತ್ತದೆ. ಅವರು ಒಂದು ಕುಟುಂಬದಲ್ಲಿ ಎಷ್ಟು ಜನ ಇದ್ದಾರೆ. ಎಷ್ಟು ಆಹಾರ ಪದಾರ್ಥ ಬೇಕಾಗುತ್ತದೆ ಎಂಬುದರ ಮಾಹಿತಿ ಪಡೆದು, ಅಷ್ಟು ಆಹಾರ ಕೊಟ್ಟು ಬರುತ್ತಾರೆ. ಸದ್ಯ, ಆಹಾರದ ಪೊಟ್ಟಣಗಳನ್ನು ಕರೆ ಮಾಡಿದ ಎರಡು–ಮೂರು ಗಂಟೆಗಳಲ್ಲಿ ಕೊಟ್ಟು ಬರಲಾಗುತ್ತಿದೆ. ಅಡುಗೆ ತಯಾರಿಸಲು ಬೇಕಾದ ಎಲ್ಲ ದಿನಸಿ ಮತ್ತು ಪದಾರ್ಥಗಳನ್ನು ಬುಧವಾರದಿಂದ (ಏ.1) ಪೂರ್ಣಪ್ರಮಾಣದಲ್ಲಿ ಒದಗಿಸಲಾಗುತ್ತದೆ’ ಎಂದು ತಿಳಿಸಿದರು.

‘ಎಲ್ಲರೂ ಮಾಸ್ಕ್‌ ಧರಿಸಬೇಕಾಗಿಲ್ಲ’
ಬೆಂಗಳೂರು: ಕೋವಿಡ್‌– 19 ಗುಣಲಕ್ಷಣ ಕಂಡುಬಂದವರು ಮಾತ್ರವೇ ಮಾಸ್ಕ್‌ ಧರಿಸಬೇಕೇ ವಿನಾ ಉಳಿದವರಿಗೆ ಮಾಸ್ಕ್‌ ಧರಿಸುವಂತೆ ಕಡ್ಡಾಯ ಮಾಡುವಂತಿಲ್ಲ ಎಂದು ಆರೋಗ್ಯ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿದೆ.

ಕೆಲವು ಡಿಪಾರ್ಟ್‌ಮೆಂಟಲ್‌ ಸ್ಟೋರ್‌ಗಳು, ಅಂಗಡಿಗಳು ಮತ್ತಿತರ ಕಡೆಗಳಲ್ಲಿ ಜನರಿಗೆ ಮಾಸ್ಕ್‌ ಕಡ್ಡಾಯವಾಗಿ ಧರಿಸುವಂತೆ ಹೇಳಲಾಗುತ್ತಿದೆ. ಆದರೆ, ಸರ್ಕಾರ ತನ್ನ ಸುತ್ತೋಲೆ ಮತ್ತು ಸಂವಹನಗಳ ಮೂಲಕ ಈಗಾಗಲೇ ಮಾಸ್ಕ್‌ ಯಾರು ಧರಿಸವೇಕು ಎಂಬ ಕುರಿತು ಸ್ಪಷ್ಟವಾದ ಸೂಚನೆಗಳನ್ನು ನೀಡಿದ್ದರೂ, ಈ ವಿಷಯದಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದು ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.

ಯಾರು ಮಾಸ್ಕ್‌ ಧರಿಸಬೇಕು
1. ಶೀತ, ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆ ಇರುವ ವ್ಯಕ್ತಿಗಳು

2. ಶಂಕಿತ ಕೋವಿಡ್‌ ರೋಗಿಗಳು ಮತ್ತು ರೋಗ ದೃಢಪಟ್ಟವರನ್ನು ಆರೈಕೆ ಮಾಡುವವರು

3. ಉಸಿರಾಟದ ತೊಂದರೆ ಇರುವ ರೋಗಿಗಳನ್ನು ನೋಡಿಕೊಳ್ಳುವ ಆರೋಗ್ಯ ಕಾರ್ಯಕರ್ತರು

4. ರೋಗಿಗಳು ಅಥವಾ ಶಂಕಿತರನ್ನು ಉಪಚರಿಸುವವರು ಎನ್‌–95 ಮಾಸ್ಕ್‌ ಧರಿಸಬೇಕು. ಉಳಿದವರು ಮೂರು ಮಡಿಕೆಯ ಸರ್ಜಿಕಲ್‌ ಮಾಸ್ಕ್‌ ಧರಿಸಿದರೆ ಸಾಕು ಎಂದು ಆಯುಕ್ತಾಲಯ ಸ್ಪಷ್ಟಪಡಿಸಿದೆ.

ಇದರಿಂದಾಗಿ ಮಾಸ್ಕ್‌ ಧರಿಸುವ ಗೊಂದಲ ನಿವಾರಣೆಯಾದಂತಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು