ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಪರಿಣಾಮ: ಗಡಿಯಲ್ಲಿ ಸಿಲುಕಿಕೊಂಡಿದ್ದಾರೆ ಸಾವಿರಾರು ಜನ

ತುತ್ತಿನಚೀಲ ತುಂಬಿಸಿಕೊಳ್ಳಲು ಗುಳೇ ಹೋದವರ ನೆರವಿಗೆ ಧಾವಿಸಿದ ಸಂಸದ
Last Updated 28 ಮಾರ್ಚ್ 2020, 10:19 IST
ಅಕ್ಷರ ಗಾತ್ರ

ಕಲಬುರ್ಗಿ: ಕೂಲಿ ಅರಸಿ ಹೊರ ರಾಜ್ಯಗಳಿಗೆ ಗುಳೇ ಹೋಗಿದ್ದ ಈ ಭಾಗದ ಸಾವಿರಾರು ಜನ ಈಗ ಗಡಿಗಳಲ್ಲಿ ಸಿಲುಕಿಕೊಂಡಿದ್ದಾರೆ. ಅಂತರರಾಜ್ಯ ಜನ ಸಂಚಾರ ನಿರ್ಬಂಧಿಸಿದ ಕಾರಣ ಈ ಜನರೀಗ ಜಿಲ್ಲೆಯ ಗಡಿ ಭಾಗದಲ್ಲಿ ನಿರಾಶ್ರಿತರಾಗಿ ಕಾಲ ಕಳೆಯಬೇಕಾಗಿದೆ.

ಈ ಬಗ್ಗೆ ಸ್ವತಃ ಗುಳೇ ಹೋಗಿದ್ದ ನೂರಾರು ಜನ, ಸಂಸದ ಡಾ.ಉಮೇಶ ಜಾಧವ ಅವರಿಗೆ ಫೋನ್‌ ಕರೆಯ ಮೂಲಕ ಅಳಲು ತೋಡಿಕೊಂಡಿದ್ದಾರೆ. ತಮ್ಮನ್ನು ರಕ್ಷಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಅತ್ತ ವಲಸೆ ಜಾಗದಲ್ಲಿ ಉದ್ಯೋಗವೂ ಇಲ್ಲ, ಇತ್ತ ತಮ್ಮ ಸ್ವಂತ ಊರಿಗೂ ಹೋಗಲು ಬಿಡಿತ್ತಿಲ್ಲ. ಮಕ್ಕಳು, ಮಹಿಳೆಯರು, ವಯಸ್ಸಾದವರನ್ನು ಕಟ್ಟಿಕೊಂಡು ಈ ಕುಟುಂಬಗಳು ದಯನೀಯ ಸ್ಥಿತಿ ತಲುಪಿವೆ.‌‌

ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಗಳಿಂದ ಸುಮಾರು 1 ಲಕ್ಷಕ್ಕೂ ಹೆಚ್ಚು ಬಡವರು ಉದ್ಯೋಗ ಅರಸಿ ಆರು ತಿಂಗಳ ಹಿಂದೆಯೇ ವಲಸೆ ಹೋಗಿದ್ದಾರೆ. ಮಹಾರಾಷ್ಟ್ರದ ಪುಣೆ, ಮುಂಬೈ, ಸೊಲ್ಲಾಪುರ, ಕೊಲ್ಲಾಪುರ, ತಾಂಡೂರು ಹಾಗೂ ಹೈದರಾಬಾದ್‌, ಗೋವಾ ರಾಜ್ಯದ ವಿವಿಧ ನಗರಗಳಿಗೆ ಹೋಗಿದ್ದರು. ಅವರಲ್ಲೀಗ ಸುಮಾರು 70 ಸಾವಿರಕ್ಕೂ ಹೆಚ್ಚು ಜನ ತಮ್ಮ ತವರಿಗೆ ಮರಳಲು ಹವಣಿಸುತ್ತಿದ್ದಾರೆ. ಆದರೆ, ಅಂತರರಾಜ್ಯ ಜನ ಸಂಚಾರ ನಿರ್ಬಂಧದ ಹಿನ್ನೆಲೆಯಲ್ಲಿ ಎಲ್ಲರೂ ಬೇರೆಬೇರೆ ಭಾಗದ ಗಡಿಗಳಲ್ಲೇ ಸಿಲುಕಿಕೊಂಡಿದ್ದಾರೆ. ಆದರೆ, ಕೊರೊನಾ ವೈರಾಣು ಭೀತಿಯ ಹಿನ್ನೆಲೆಯಲ್ಲಿ ವಲಸಿಗರೇ ಆ ಊರುಗಳನ್ನು ತೊರೆದಿದ್ದಾರೋ ಅಥವಾ ಅಲ್ಲಿನ ಆಡಳಿತಗಳು ಹೊರ ಹಾಕಿವೆಯೋ ಇನ್ನೂ ಸ್ಪಷ್ಟವಾಗಿಲ್ಲ.

ಜಿಲ್ಲಾಧಿಕಾರಿಯೊಂದಿಗೆ ಸಂಸದ ಚರ್ಚೆ

ನಿರಾಶ್ರಿತರ ಕರೆಗೆ ಸ್ಪಂದಿಸಿದ ಸಂಸದ ಡಾ.ಜಾಧವ, ಜಿಲ್ಲಾಧಿಕಾರಿ ಬಿ.ಶರತ್‌ ಅವರೊಂದಿಗೆ ಸಭೆ ನಡೆಸಿ ಚರ್ಚಿಸಿದರು. ತಮ್ಮ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಜನರನ್ನು ಮರಳಿ ಒಳಗೆ ಬಿಟ್ಟುಕೊಳ್ಳಲು ಕಂಡುಕೊಳ್ಳಬೇಕಾದ ಕಾರ್ಗೋಪಾಯಗಳ ಬಗ್ಗೆಯೂ ವಿವರಿಸಿದರು. ನೆರೆ ರಾಜ್ಯದ ಜಿಲ್ಲಾಧಿಕಾರಿಗಳ ಜತೆಗೆ ಮಾತುಕತೆ ನಡೆಸಿ ದಾರಿ ಕಂಡುಕೊಳ್ಳುವಂತೆಯೂ ನಿರ್ದೇಶನ ನೀಡಿದರು.

‘ಗಡಿಯಲ್ಲಿ ಸಿಲುಕಿಕೊಂಡ ಜನ ಆತಂಕ ಪಡುವ ಅಗತ್ಯವಿಲ್ಲ. ಅವರ ನೆರವಿಗೆ ತಕ್ಷಣ ಧಾವಿಸುತ್ತೇನೆ. ಆದಷ್ಟು ಬೇಗ ಅವರು ತವರನ್ನು ತವರಿಗೆ ಸೇರಿಸಲು ಯತ್ನಿಸುತ್ತೇನೆ. ಒಂದು ವೇಳೆ ಅದು ಸಾಧ್ಯವಾಗದೇ ಇದ್ದರೆ; ಅವರೀಗ ಇರುವ ಜಾಗದಲ್ಲೇ ತಾತ್ಕಾಲಿಕ ವಸತಿ ಹಾಗೂ ಊಟದ ವ್ಯವಸ್ಥೆ ಮಾಡುತ್ತೇನೆ. ಜನ ಯಾವುದೇ ಕಾರಣಕ್ಕೂ ಭಯ ಪಡಬೇಕಿಲ್ಲ’ ಎಂದು ಸಂಸದರು ‘ಪ್ರಜಾವಾಣಿ’‌ಗೆ ಮಾಹಿತಿ ನೀಡಿದರು.

*

ಸಹಾಯಕ್ಕಾಗಿ ಸಂಪರ್ಕಿಸಿ

ಗಡಿಯಲ್ಲಿ ಸಿಲುಕಿಕೊಂಡ ಜನರ ಸಹಾಯ ಹಾಗೂ ರಕ್ಷಣೆಗಾಗಿ ಕಲಬುರ್ಗಿಯ ಸಂಸದ ಕಚೇರಿಯಲ್ಲಿ ಒಂದು ‘ವಾರ್‌ ರೂಮ್‌’ ತೆರೆಯಲಾಗಿದೆ. ಮಾರ್ಚ್‌ 28ರಿಂದಲೇ ಇದು 24X7 ಕಾರ್ಯನಿರ್ವಹಿಸಲಿದೆ. ನಾಲ್ವರು ಸಿಬ್ಬಂದಿಯನ್ನೂ ನಿಯೋಜಿಸಿದ್ದು, ಗಡಿಗಳಲ್ಲಿ ತೊಂದರೆಗೆ ಸಿಕ್ಕಿಕೊಂಡವರು ತಮ್ಮ ಸಹಾಯಕ್ಕಾಗಿ ಇವರನ್ನು ಸಂಪರ್ಕಿಸಬಹುದು.

ಸಂಸದರ ಕಚೇರಿ: 08472–279999

ಸಂಪರ್ಕಕ್ಕೆ: ರಮೇಶ ಆರ್‌. ದುತ್ತರಗಿ: 9739976311

ಪ್ರಹ್ಲಾದ್‌: 9535569103

ರೋಷನ್‌: 9611006601

ದಾಷ್ಟಯ್ಯ: 990169998

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT