ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ಜಿಲ್ಲಾಡಳಿತದಿಂದ ‘ಹಸಿದ ಹೊಟ್ಟೆಗೆ ತಣಿವು ಪೆಟ್ಟಿಗೆ’ ಸ್ಥಾಪನೆ

ಕೊಡಗಿನಲ್ಲಿ ಕಾಫಿ ತೋಟದ ಕಾರ್ಮಿಕರ ಹಸಿವು ನೀಗಿಸಲು ವಿಶೇಷ ಪ್ರಯತ್ನ
Last Updated 31 ಮಾರ್ಚ್ 2020, 6:11 IST
ಅಕ್ಷರ ಗಾತ್ರ

ಮಡಿಕೇರಿ: ಕೊರೊನಾ ವೈರಸ್‌ ತಡೆಗಟ್ಟಲು ದೇಶವೇ ಲಾಕ್‌ಡೌನ್‌ ಆಗಿದ್ದು ಅದರ ಬಿಸಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ವಲಸೆ ಬಂದು ಕೊಡಗಿನ ಕಾಫಿ ಎಸ್ಟೇಟ್‌ಗಳಲ್ಲಿ ದುಡಿಯುತ್ತಿರುವ ಸಾವಿರಾರು ಕಾರ್ಮಿಕರಿಗೂ ತಟ್ಟಿದೆ.

ಕಾಫಿ ಎಸ್ಟೇಟ್‌ಗಳಲ್ಲಿ ಕೂಲಿ ಕೆಲಸ ಸ್ಥಗಿತವಾಗಿದೆ. ಅತ್ತ ಊರಿಗೆ ತೆರಳಲು ವಾಹನದ ವ್ಯವಸ್ಥೆಯೂ ಇಲ್ಲದೆ ನೂರಾರು ಕುಟುಂಬಗಳು ಕಂಗಾಲಾಗಿವೆ. ಎಸ್ಟೇಟ್‌ನ ಲೈನ್‌ಮನೆ ಹಾಗೂ ಗುಡಿಸಗಳಲ್ಲಿ ದಿನದೂಡುತ್ತಿವೆ. ದುಡಿಮೆಯ ಆಸೆಗೆ ಬಂದ ಶ್ರಮಿಕ ವರ್ಗಕ್ಕೆ ಈಗ ದಿಕ್ಕು ತೋಚದಾಗಿದೆ.

ಹೊರಗಿನಿಂದ ಬಂದ ಕಾರ್ಮಿಕರಿಗೆ ಪಡಿತರ ಚೀಟಿಯಿಲ್ಲದ ಕಾರಣಕ್ಕೆ ಪಡಿತರವೂ ಲಭಿಸುತ್ತಿಲ್ಲ. ಅಂತಹ ಕಾರ್ಮಿಕರಿಗೆ ಆಹಾರ ಪದಾರ್ಥ ಹಾಗೂ ಊಟ ಒದಗಿಸುವುದು ಕೊಡಗು ಜಿಲ್ಲಾಡಳಿತಕ್ಕೂ ಸವಾಲಾಗಿದೆ.

ದಿನದಿಂದ ದಿನಕ್ಕೆ ಜಿಲ್ಲೆಗೆ ಆಹಾರ ಪದಾರ್ಥ ಹಾಗೂ ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಅಕ್ಕಿ, ಸಕ್ಕರೆ, ಅಡುಗೆ ಎಣ್ಣೆ, ಈರುಳ್ಳಿ, ಬೆಳ್ಳುಳ್ಳಿ, ಖಾರದಪುಡಿ ಸಿಗುತ್ತಿಲ್ಲ ಎಂಬ ನೋವಿನ ನುಡಿಗಳು ವ್ಯಕ್ತವಾಗುತ್ತಿವೆ. ಜತೆಗೆ, ಗುಡ್ಡಗಾಡು ಪ್ರದೇಶದ ಎಸ್ಟೇಟ್‌ಗಳಲ್ಲಿ ಹಸಿವಿನಿಂದ ಕಂಗಾಲಾದ ಕಾರ್ಮಿಕ ಕುಟುಂಬಕ್ಕೆ ಅಗತ್ಯ ವಸ್ತುಗಳನ್ನು ತಲುಪಿಸಲೂ ಸಾಧ್ಯವಾಗುತ್ತಿಲ್ಲ.
ಜಿಲ್ಲಾಡಳಿತ ರೂಪಿಸಿರುವ ವೆಬ್‌ಸೈಟ್‌ ನಗರ ಪ್ರದೇಶದ ಹಾಗೂ ಸುಶಿಕ್ಷಿತರಿಗೆ ಮಾತ್ರ ಅನುಕೂಲವಾಗಿದೆ. ಆದರೆ, ಕಾರ್ಮಿಕರ ಪಾಡೇನು ಎಂಬ ಪ್ರಶ್ನೆ ಎದುರಾಗಿದ್ದು, ಹೊರ ಜಿಲ್ಲೆ ಹಾಗೂ ರಾಜ್ಯದ ಕಾರ್ಮಿಕರ ಹಸಿವು ನೀಗಿಸಲು ಜಿಲ್ಲಾಡಳಿತ ವಿಶೇಷ ಪ್ರಯತ್ನಕ್ಕೆ ಮುಂದಾಗಿದೆ.

‘ಹಸಿದ ಹೊಟ್ಟೆಗೆ ತಣಿವು ಪೆಟ್ಟಿಗೆ’ ಎಂಬ ವಿಶೇಷ ಯೋಜನೆ ರೂಪಿಸಿದ್ದು, ಜಿಲ್ಲೆಯ ಐದು ಸ್ಥಳಗಳಲ್ಲಿ ಬೃಹತ್‌ ಪೆಟ್ಟಿಗೆ ಇಡಲಾಗಿದೆ. ಮಡಿಕೇರಿಯ ಹಳೇ ಖಾಸಗಿ ಬಸ್‌ ನಿಲ್ದಾಣ, ಕುಶಾಲನಗರದ ಖಾಸಗಿ ಬಸ್‌ ನಿಲ್ದಾಣ, ಸೋಮವಾರಪೇಟೆಯ ಖಾಸಗಿ ಬಸ್‌ ನಿಲ್ದಾಣ, ವಿರಾಜಪೇಟೆ ಗಡಿಯಾರ ಕಂಬ, ಗೋಣಿಕೊಪ್ಪಲು ಬಸ್‌ ನಿಲ್ದಾಣದಲ್ಲಿ ಬೃಹತ್‌ ಪೆಟ್ಟಿಗೆ ಇಡಲಾಗಿದೆ.

ಜಿಲ್ಲೆಯಲ್ಲಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರ ತನಕ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದ್ದು ಆಗ ಖರೀದಿಗೆ ಬಂದವರು, ಆಹಾರ ಪದಾರ್ಥ ಖರೀದಿಸಿ ಈ ಪೆಟ್ಟಿಗೆಗೂ ಸ್ವಲ್ಪ ಹಾಕಬಹುದು. ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಹಿಟ್ಟು ಮತ್ತಿತರ ಅಗತ್ಯ ಆಹಾರ ಸಾಮಗ್ರಿಗಳನ್ನು ಆ ಪೆಟ್ಟಿಗೆ ಹಾಕಿದರೆ, ಸ್ವಯಂ ಸೇವಕರ ಮೂಲಕ ಕಾರ್ಮಿಕ ಕುಟುಂಬಕ್ಕೆ ತಲುಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

‘ನಾವು ಕೊಳ್ಳುವಾಗ ಕಾರ್ಮಿಕರ ಬಗ್ಗೆಯೂ ಯೋಚಿಸೋಣ. ಹಸಿದ ಹೊಟ್ಟೆ ತುಂಬಿಸಲು ಸಹಾಯ ಹಸ್ತ ಚಾಚಿ’ ಎಂದು ಜಿಲ್ಲಾಡಳಿತ ಕೋರಿದೆ. ಆಹಾರ ಪದಾರ್ಥ ವಿತರಣೆಗೆ ಸ್ವಯಂ ಸೇವಕರ ನೋಂದಣಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT