ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಐಇಸಿ ಕೋವಿಡ್‌ ಆರೈಕೆ ಕೇಂದ್ರ ವಾರದೊಳಗೆ ಸಿದ್ಧ: ಬಿ.ಎಸ್‌. ಯಡಿಯೂರಪ್ಪ

ಕೇಂದ್ರಕ್ಕೆ ಭೇಟಿ ನೀಡಿ ಸೌಕರ್ಯ ಪರಿಶೀಲನೆ 
Last Updated 9 ಜುಲೈ 2020, 13:45 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ‘ತುಮಕೂರು ರಸ್ತೆಯಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಆರಂಭಿಸಲಾಗುವ ಕೋವಿಡ್‌ ಆರೈಕೆ ಕೇಂದ್ರ ವಾರದೊಳಗೆ ಸಿದ್ಧವಾಗಲಿದೆ. ಲಭ್ಯವಿರುವ ಹಾಸಿಗೆಗಳು ಭರ್ತಿಯಾದ ಬಳಿಕ ರೋಗಿಗಳನ್ನು ಸ್ಥಳಾಂತರಿಸುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಈ ಕೇಂದ್ರ ಸ್ಥಾಪಿಸಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಕೇಂದ್ರಕ್ಕೆ ಗುರುವಾರ ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ನಗರದಲ್ಲಿ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೊಂಕು ನಿಯಂತ್ರಣಕ್ಕೆ‌ ರಾಜ್ಯ ಸರ್ಕಾರ ಎಲ್ಲ ರೀತಿಯ ಕ್ರಮ‌ಗಳನ್ನು ತೆಗೆದುಕೊಳ್ಳುತ್ತಿದೆ. ಈ ಕೇಂದ್ರದಲ್ಲಿ 10,100 ಸೋಂಕಿತರಿಗೆ ಚಿಕಿತ್ಸೆ ನೀಡಬಹುದಾಗಿದೆ. ರೋಗ ಲಕ್ಷಣ ಇಲ್ಲದವರು ಮತ್ತು ಕಡಿಮೆ ಲಕ್ಷಣ ಇರುವ ರೋಗಿಗಳನ್ನು ಇಲ್ಲಿ ಆರೈಕೆ ಮಾಡುವುದು ಉದ್ದೇಶ’ ಎಂದರು.

‘ಕೇಂದ್ರದಲ್ಲಿ ವೈದ್ಯರು, ನರ್ಸ್‌ಗಳು ಮತ್ತು ಇತರರು ಸೇರಿ ಒಟ್ಟು 2,200 ಸಿಬ್ಬಂದಿಯನ್ನು ನೇಮಿಸಲಾಗುವುದು. ಪ್ರತಿ ನೂರು ಮಂದಿಗೆ ಒಬ್ಬ ವೈದ್ಯ, ಇಬ್ಬರು ನರ್ಸ್‌ಗಳು, ಒಬ್ಬ ಸಹಾಯಕರು, ಒಬ್ಬರು ಸ್ವಚ್ಛತಾ ಸಿಬ್ಬಂದಿ ಮತ್ತು ಇಬ್ಬರು ಬಿಬಿಎಂಪಿ ಮಾರ್ಷಲ್‌ಗಳನ್ನು ನಿಯೋಜಿಸಲಾಗುವುದು. ಉತ್ತಮ ಊಟ, ಮನರಂಜನೆಗೆ ಕೇರಂ ಬೋರ್ಡ್, ಚೆಸ್‌ ಆಡಲು ವ್ಯವಸ್ಥೆ ಕಲ್ಪಿಸಲಾಗುವುದು. ವೈದ್ಯಕೀಯ ಸಿಬ್ಬಂದಿ ಮತ್ತು ಮೇಲ್ವಿಚಾರಣೆಗೆ ನೇಮಿಸಿದವರಿಗೆ ಸುರಕ್ಷತಾ ಸಾಧನಗಳನ್ನು ಒದಗಿಸಲಾಗುವುದು. ಅಲ್ಲದೆ, ಕೇಂದ್ರವನ್ನು ಸಮೀಪ್ ಆಸ್ಪತ್ರೆಯೊಂದಿಗೆ ಸಂಯೋಜಿಸಲಾಗುವುದು. 24 ಗಂಟೆ ನಿಯಂತ್ರಣ ಕೊಠಡಿ ಕಾರ್ಯವೆಸಗಲಿದೆ. ತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ಸೋಂಕಿತರ ಬೆಡ್ ಶೀಟ್, ಬ್ಲಾಂಕೆಟ್ ತೊಳೆಯಲು ಲಾಂಡ್ರಿ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ವಿವರಿಸಿದರು.

‘ಸೋಂಕು ತಗುಲಿರುವುದು ದೃಢಪಟ್ಟ ಕೂಡಲೇ ಅಂಬ್ಯುಲೆನ್ಸ್ ಬರುವುದು ವಿಳಂಬವಾದರೆ ಅಥವಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ವಿನಾ ಕಾರಣ ನಿರಾಕರಿಸಿದರೆ ನಮ್ಮ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳುತ್ತೇವೆ. ಜನರು ವಿಶ್ವಾಸ ಕಳೆದುಕೊಳ್ಳದೆ ತಾಳ್ಮೆಯಿಂದ ಸಹಕರಿಸಬೇಕು. ಕೋವಿಡ್‌ ನಿಯಂತ್ರಣಕ್ಕೆ ಎಲ್ಲ ಶಾಸಕರು ಆದ್ಯತೆ ನೀಡಬೇಕು. ಅವರವರ ಜಿಲ್ಲೆಗಳಲ್ಲಿರುವ ಆಸ್ಪತ್ರೆಗಳಿಗೆ ಭೇಟಿ ನೀಡಿ ಲೋಪಗಳಿದ್ದರೆ ಸರಿಪಡಿಸಬೇಕು’ ಎಂದೂ ಮನವಿ ಮಾಡಿದರು.

‘ಅನ್ಲಾಕ್ ಪ್ರಕ್ರಿಯೆ ಆರಂಭವಾದಾಗಿನಿಂದ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ವರದಿಯಾಗುತ್ತಿವೆ. ಬೆಂಗಳೂರಿನಿಂದ ಯಾರೂ ಹಳ್ಳಿಗಳಿಗೆ ಹೋಗಬೇಡಿ. ಹಳ್ಳಿಗಳಿಗೆ ಸೋಂಕು ತಗಲದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಅಲ್ಲದೆ, ಅನೇಕ ತಿಂಗಳು ಈ ಸಮಸ್ಯೆ ಎದುರಿಸಬೇಕಾಗಿದೆ. ಎಲ್ಲ ಹಂತದಲ್ಲಿ ಪ್ರಾಣದ ಹಂಗು ತೊರೆದು ಅಧಿಕಾರಿಗಳು ಸಹಕರಿಸುತ್ತಿದ್ದಾರೆ. ಸೋಂಕು ನಿಯಂತ್ರಿಸಲು ಎಲ್ಲರೂ ಸೇರಿ ಪ್ರಾಮಾಣಿಕ ಯತ್ನ ಮಾಡುತ್ತಿದ್ದೇವೆ’ ಎಂದರು.

‘ಖಾಸಗಿ ಆಸ್ಪತ್ರೆಗಳು ಸುಲಿಗೆ ಮಾಡಬಾರದು. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರು ಸಭೆ ನಡೆಸಿ ಖಾಸಗಿ ಆಸ್ಪತ್ರೆಗಳ ಮಂಡಳಿಗಳ ಜೊತೆ ಮಾತನಾಡಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಕೂಡಾ ಸುಲಿಗೆ ಮಾಡಬಾರದು. ಸುಲಿಗೆ ಮಾಡಿದರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT