ಗುರುವಾರ , ಜೂಲೈ 9, 2020
29 °C
ಸೋಂಕಿತರ ಸಂಪರ್ಕಕ್ಕೆ ಬಂದವರಿಗೆ ತಗುಲಿದ ಸೋಂಕು

ಚಿಕ್ಕಬಳ್ಳಾಪುರದಲ್ಲಿ ಮತ್ತೆ 5 ಜನರಲ್ಲಿ ಕೋವಿಡ್-19 ದೃಢ, ಬಾಧಿತರ ಸಂಖ್ಯೆ 9ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಮಾರಣಾಂತಿಕ ಕೋವಿಡ್ ಸೋಂಕಿಗೆ ಗೌರಿಬಿದನೂರಿನ ಒಬ್ಬ ವೃದ್ಧೆ ಬಲಿಯಾಗಿ, ಮೂರು ಜನರು ಜೀವನ್ಮರಣದ ಹೋರಾಟ ನಡೆಸಿರುವಾಗಲೇ, ಸೋಂಕಿತರ ಸಂಪರ್ಕಕ್ಕೆ ಬಂದವರ ಪೈಕಿ ಐದು ಜನರಲ್ಲಿ ಕೋವಿಡ್ ಸೋಂಕಿರುವುದು ಶುಕ್ರವಾರ ದೃಢವಾಗಿದೆ.

ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಒಂಬತ್ತಕ್ಕೆ ಏರಿದ್ದು,  ಜಿಲ್ಲೆಯ ನಾಗರಿಕರಲ್ಲಿ ತಲ್ಲಣ ಮೂಡಿಸಿದೆ.
ಕಳೆದ ಫೆಬ್ರುವರಿಯಲ್ಲಿ ಮೆಕ್ಕಾ ಯಾತ್ರೆ ನಡೆಸಿ ಮಾರ್ಚ್ ಎರಡನೇ ವಾರದಲ್ಲಿ ವಾಪಾಸಾಗಿದ್ದ ಗೌರಿಬಿದನೂರು ನಗರದ ನಾಲ್ಕು ಯಾತ್ರಿಕರಿಗೆ ಕೋವಿಡ್-19 ತಗಲಿರುವುದು ಮಾರ್ಚ್ 21, 23, 24 ಮತ್ತು 26 ರಂದು ದೃಢಪಟ್ಟಿತ್ತು. ಈ ಪೈಕಿ ಗೌರಿಬಿದನೂರಿನಲ್ಲಿ ಮಗನ ಮನೆಯಲ್ಲಿ ಗೃಹ ಬಂಧನದಲ್ಲಿದ್ದ ನೆರೆಯ ಆಂಧ್ರಪ್ರದೇಶದ ಹಿಂದೂಪುರ ತಾಲ್ಲೂಕಿಗೆ ಸೇರಿದ ಮಹಿಳೆ ಮಾರ್ಚ್ 25 ರಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. 

ಮೊದಲು ದೃಢಪಟ್ಟ ಮೂರು ಪ್ರಕರಣಗಳ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದ 22 ಜನರನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತ್ಯೇಕ ಗೃಹ ಬಂಧನಕ್ಕೆ ಒಳಪಡಿಸಿ, ಅವರ ಗಂಟಲ ದ್ರವದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು.

ಶುಕ್ರವಾರ ಬಂದ ಪ್ರಯೋಗಾಲಯದ ವರದಿಯಲ್ಲಿ ಐದು ಜನರಲ್ಲಿ ಕೋವಿಡ್ 19 ಲಕ್ಷಣಗಳು ಇರುವುದು (ಪಾಸಿಟಿವ್) ಪತ್ತೆಯಾಗಿದೆ. ಇನ್ನು ಇಬ್ಬರಲ್ಲಿ ಸೋಂಕು ಇರುವ ಶಂಕೆ ಇದ್ದು, ಅದು ಶನಿವಾರ ಬರುವ ವರದಿಯಲ್ಲಿ ದೃಢವಾಗಲಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಗೌರಿಬಿದನೂರಿನಲ್ಲಿ ಗೃಹ ಬಂಧನದಲ್ಲಿ ಇದ್ದವರ ಪೈಕಿ‌ ಏಳು ಜನರನ್ನು ಶುಕ್ರವಾರ ರಾತ್ರಿ ಚಿಕ್ಕಬಳ್ಳಾಪುರದ ಜಿಲ್ಲಾ ಆಸ್ಪತ್ರೆಯ ಹಳೆ ಕಟ್ಟಡದಲ್ಲಿ ಸಜ್ಜುಗೊಳಿಸಿದ ಪ್ರತ್ಯೇಕ ವಾರ್ಡ್‌ಗೆ ಸ್ಥಳಾಂತರಿಸಿ,‌‌ ನಿಗಾ ವಹಿಸಲಾಗಿದೆ.

ಗೌರಿಬಿದನೂರಿನಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ಜನರು‌ ಮನೆಯಿಂದ ಹೊರಬರದಂತೆ ಎಚ್ಚರಿಕೆ ‌ನೀಡುತ್ತಿದ್ದಾರೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು