ಭಾನುವಾರ, ಆಗಸ್ಟ್ 1, 2021
23 °C
ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳಿಂದ ಆರೇಳು ದಿನಗಳಲ್ಲೇ ಮನೆಗೆ ತೆರಳಲು ಅವಕಾಶ

ಬೆಂಗಳೂರು: ಕೋವಿಡ್‌ನಿಂದ ಚೇತರಿಸಿಕೊಂಡವರಿಗೆ ಮನೆಯಲ್ಲಿಯೇ ಆರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ನಗರದಲ್ಲಿ ಹೆಚ್ಚಳವಾಗುತ್ತಿರುವ ಬೆನ್ನಲ್ಲಿಯೇ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ತಲೆದೋರಿದೆ. ಹೀಗಾಗಿ ಪೂರಕ ಚಿಕಿತ್ಸೆಯಿಂದ ಚೇತರಿಸಿಕೊಂಡವರನ್ನು ಆಸ್ಪತ್ರೆಯಿಂದ ಬೇಗ ಮನೆಗೆ ಕಳುಹಿಸಲಾಗುತ್ತಿದೆ. 

ಕೋವಿಡ್ ಪ್ರಕರಣ ವರದಿಯಾದ ಪ್ರಾರಂಭಿಕ ದಿನಗಳಲ್ಲಿ ರೋಗಿಗಳು ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಲ್ಲಿ ಎರಡು ಬಾರಿ ಕೋವಿಡ್ ಪರೀಕ್ಷೆ ನಡೆಸಿ, ವ್ಯಕ್ತಿ ಗುಣಮುಖನಾಗಿರುವುದು ಖಚಿತಪಟ್ಟಲ್ಲಿ 14ನೇ ದಿನಕ್ಕೆ ಮನೆಗೆ ಕಳುಹಿಸಲಾಗುತ್ತಿತ್ತು. ಉಸಿರಾಟದ ಸಮಸ್ಯೆ ಹಾಗೂ ಶೀತ, ಜ್ವರ, ಕೆಮ್ಮಿನ ಲಕ್ಷಣಗಳು ಇದ್ದಲ್ಲಿ ಚಿಕಿತ್ಸೆಯನ್ನು ಮುಂದುವರೆಸಲಾಗುತ್ತಿತ್ತು. ರೋಗಿಗಳ ಸಂಖ್ಯೆ ಏರಿಕೆಯಾದ ಬಳಿಕ 14 ದಿನಗಳ ಬದಲು 10 ದಿನಗಳಿಗೇ ಆಸ್ಪತ್ರೆಯಿಂದ ಮನೆಗೆ ತೆರಳಲು ಅವಕಾಶ ನೀಡಲಾಗಿತ್ತು. 7ನೇ ದಿನಕ್ಕೆ ಕೋವಿಡ್ ಪರೀಕ್ಷೆ ನಡೆಸಿ, 14 ದಿನಗಳು ಮನೆಯಲ್ಲಿ ಕ್ವಾರಂಟೈನ್‌ಗೆ ಒಳಪಡಲು ಸೂಚಿಸಲಾಗುತ್ತಿತ್ತು. 

ಸದ್ಯ ನಿತ್ಯ ಸರಾಸರಿ ಸಾವಿರ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಇದರಿಂದಾಗಿ ಈಗಾಗಲೇ ಕೋವಿಡ್ ಆಸ್ಪತ್ರೆಗಳಲ್ಲಿನ ಬಹುತೇಕ ಹಾಸಿಗೆಗಳು ಭರ್ತಿಯಾಗಿವೆ. ಅದೇ ರೀತಿ, ಪ್ರಥಮ ಆದ್ಯತಾ ಆಸ್ಪತ್ರೆಗಳಲ್ಲಿ ಕೂಡ ಹಾಸಿಗೆಗಳ ಸಮಸ್ಯೆ ತಲೆದೋರಿದೆ. ಇನ್ನೊಂದೆಡೆ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಗುರುತಿಸಿದ್ದರೂ ರೋಗಿಗಳು ಆಸ್ಪತ್ರೆಗಳಿಂದ ಆಸ್ಪತ್ರೆಗೆ ಅಲೆದಾಟ ನಡೆಸುವುದು ತಪ್ಪಿಲ್ಲ. ಹೀಗಾಗಿ ಕೋವಿಡ್ ಆಸ್ಪತ್ರೆಗಳಲ್ಲಿ ರೋಗಿಗಳು ಚೇತರಿಸಿಕೊಂಡು, ಮನೆಗೆ ತೆರಳಲು ಇಚ್ಛಿಸಿದಲ್ಲಿ ಕೋವಿಡ್ ಪರೀಕ್ಷೆ ನಡೆಸಿ, 6 ರಿಂದ 7 ದಿನಗಳಲ್ಲೇ ಮನೆಗೆ ಕಳುಹಿಸಲಾಗುತ್ತಿದೆ. ಅಗತ್ಯ ಆರೈಕೆ ಮಾಡಿಕೊಂಡು 14 ದಿನಗಳು ಮನೆಯಲ್ಲೇ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗುತ್ತಿದೆ. 

ಆರೈಕೆ ಕೇಂದ್ರಗಳಿಗೆ ಸ್ಥಳಾಂತರ

ಮನೆಯಲ್ಲಿ ಆರೈಕೆ ಮಾಡಿಕೊಳ್ಳಲು ಅವಕಾಶ ಇಲ್ಲದವರಿಗೆ ಕೋವಿಡ್‌ ಆರೈಕೆ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಅವರನ್ನು ಅಲ್ಲಿಯೇ ನಿಗದಿತ ಅವಧಿಯವರೆಗೆ ಇರಿಸಿಕೊಂಡು ಮನೆಗೆ ಕಳುಹಿಸಲಾಗುತ್ತಿದೆ. ಇದರಿಂದಾಗಿ ಆಸ್ಪತ್ರೆಗಳ ಮೇಲಿನ ಹೊರೆ ತಕ್ಕಮಟ್ಟಿಗೆ ಇಳಿಕೆಯಾಗಿದೆ. 

‘ಬಹುತೇಕ ರೋಗಿಗಳಿಗೆ ಸೋಂಕಿನ ಲಕ್ಷಣಗಳು ಬಹಿರಂಗವಾಗಿ ಗೋಚರಿಸುತ್ತಿಲ್ಲ. ಅಂತವರು ಬೇಗ ಗುಣಮುಖರಾಗುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಇದ್ದರೂ ವಿಶೇಷವಾದ ಚಿಕಿತ್ಸೆಯನ್ನು ನೀಡುವುದಿಲ್ಲ. ವಿಟಮಿನ್ ಮಾತ್ರೆಗಳು ಹಾಗೂ ರೋಗನಿರೋಧಕ ಶಕ್ತಿ ವೃದ್ಧಿಗೆ ಪೂರಕವಾದ ಆಹಾರವನ್ನು ಒದಗಿಸಲಾಗುತ್ತಿದೆ. ಚೇತರಿಸಿಕೊಂಡವರು ಸುಲಭವಾಗಿ ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳಬಹುದು. ಹಾಗಾಗಿಯೇ ಕೆಲವರನ್ನು ಬೇಗ ಮನೆಗೆ ಕಳುಹಿಸಲಾಗುತ್ತಿದೆ’ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು