ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳ ಒಪ್ಪಿಗೆ: 2500 ಹಾಸಿಗೆಗಳು ಮೀಸಲು

ಉಸ್ತುವಾರಿಗೆ ಐವರ ಸಮಿತಿ ರಚನೆ
Last Updated 29 ಜೂನ್ 2020, 11:53 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19 ಚಿಕಿತ್ಸೆಗೆಗಾಗಿ 2500 ಹಾಸಿಗೆಗಳನ್ನು ಮೀಸಲಿಟ್ಟು, ಬಿಪಿಎಲ್ ಮತ್ತು ಎಪಿಎಲ್‌ ಕಾರ್ಡ್‌ಗಳ ರೋಗಿಗಳಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಒಪ್ಪಿಕೊಂಡಿವೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಕರೆದಿದ್ದ ಖಾಸಗಿ ಆಸ್ಪತ್ರೆಗಳ ಮಾಲೀಕರ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದ ಬಳಿಕ ಖಾಸಗಿ ವೈದ್ಯರು ಸರ್ಕಾರ ನಿಗದಿ ಮಾಡಿದ ದರದಲ್ಲಿ ಚಿಕಿತ್ಸೆ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಬೆಂಗಳೂರು ಕೋವಿಡ್‌ ಉಸ್ತುವಾರಿ ವಹಿಸಿರುವ ಕಂದಾಯ ಸಚಿವ ಆರ್‌.ಅಶೋಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಶೇ 50ರಷ್ಟು ಆಕ್ಸಿಜನ್‌ ಸಹಿತ ಹಾಸಿಗೆಗಳನ್ನು ನೀಡುವಂತೆ ಕೇಳಲಾಗಿತ್ತು. ಅದಕ್ಕೆ ಒಪ್ಪಿಗೆ ನೀಡಿದ್ದಾರೆ. ತಕ್ಷಣವೇ ಒಂದೂವರೆ ಸಾವಿರ ಹಾಸಿಗೆಗಳನ್ನು ಮತ್ತು ಎರಡನೇ ಹಂತದಲ್ಲಿ ಉಳಿದ ಒಂದು ಸಾವಿರ ಹಾಸಿಗೆಗಳನ್ನು ನೀಡಲು ಸಮ್ಮತಿಸಿದ್ದಾರೆ ಎಂದರು.

ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟು 10 ಸಾವಿರ ಹಾಸಿಗೆಗಳು ಲಭ್ಯ ಇವೆ. ಈ ಪೈಕಿ 5,000 ಹಾಸಿಗೆಗಳು ಕೊರೊನಾ ರೋಗಿಗಳ ಚಿಕಿತ್ಸೆ ಸಿಗುವ ಸಾಧ್ಯತೆ ಇದೆ ಎಂದೂ ಅವರು ಹೇಳಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ನಿರ್ವಹಣೆಗಾಗಿ ಐವರ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಖಾಸಗಿ ಆಸ್ಪತ್ರೆಗಳ ಕಡೆಯಿಂದ ಡಾ.ರವೀಂದ್ರ, ಡಾ.ನಾಗೇಂದ್ರ, ಶಾಸಕ ಎಸ್‌.ಆರ್‌.ವಿಶ್ವನಾಥ್‌ ಮತ್ತು ಇಬ್ಬರು ಐಎಎಸ್‌ ಅಧಿಕಾರಿಗಳು ಇರುತ್ತಾರೆ. ಈ ಸಮಿತಿ ಕಾಲಕಾಲಕ್ಕೆ ಸಭೆ ಸೇರಿ ಏನಾದರೂ ಸಮಸ್ಯೆ ಉದ್ಭವಿಸಿದರೆ ಬಗೆಹರಿಸುತ್ತದೆ ಎಂದು ಅಶೋಕ ವಿವರಿಸಿದರು.

ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಪರವಾಗಿ ಮಾತನಾಡಿದ ಡಾ.ರವೀಂದ್ರ, ಖಾಸಗಿ ಆಸ್ಪತ್ರೆಗಳಲ್ಲಿ ಇದೇ 16ರಿಂದ ಕೋವಿಡ್‌ಗೆ ಚಿಕಿತ್ಸೆ ನೀಡುವ ಕಾರ್ಯ ಆರಂಭವಾಗಿದೆ. ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿದ್ದು, ಇನ್ನು ಕೆಲವು ಕಡೆಗಳಲ್ಲಿ ಚಿಕಿತ್ಸೆ ಕೊಡಲಾಗದೇ ಸಮಸ್ಯೆ ಆಗಿರುವುದು ನಿಜ ಎಂದು ಹೇಳಿದರು.

ಇದಕ್ಕೆ ಮುಖ್ಯಕಾರಣ ತಕ್ಷಣಕ್ಕೆ ಹಾಸಿಗೆಗಳು ಸಿದ್ಧವಿರಲಿಲ್ಲ. ದಿಢೀರ್‌ ಸೋಂಕು ಏರಿಕೆ ಆಗಿದ್ದು ಮತ್ತು ಸೌಲಭ್ಯಗಳ ಕೊರತೆಯೂ ಇತ್ತು. ಕೊರೊನಾ ವಿರುದ್ಧದ ಹೋರಾಟದಲ್ಲಿ ಖಾಸಗಿ ಆಸ್ಪತ್ರೆಗಳು ಸರ್ಕಾರದ ಜತೆಗೆ ಸದಾ ಇರುತ್ತದೆ. ಕೋವಿಡ್‌ ಚಿಕಿತ್ಸೆಯಲ್ಲಿ ತೊಡಗುವ ವೈದ್ಯ ಸಿಬ್ಬಂದಿಗೆ ವಿಮೆ ನೀಡಲು ಸರ್ಕಾರ ಒಪ್ಪಿಕೊಂಡಿದೆ ಎಂದು ಅವರು ತಿಳಿಸಿದರು.

ದರಪಟ್ಟಿ ನಿಗದಿ ಬಗ್ಗೆ ಮೂರು ಸುತ್ತಿನ ಮಾತುಕತೆಗಳು ನಡೆದಿವೆ. ಆಯಷ್ಮಾನ್‌ ಭಾರತ್‌ ಅಡಿ ಬಿಪಿಎಲ್‌ಗೆ ಒಂದು ದರ ಉಳಿದವರಿಗೆ ಬೇರೆ ದರ ನಿಗದಿ ಮಾಡಲಾಗಿದೆ. ಕೋವಿಡ್‌ ರೋಗಿಗಳಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತದೆ. ಉಳಿದ ಕಾಯಿಲೆಗಳ ರೋಗಿಗಳು ಗಾಬರಿ ಆಗಬೇಕಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT