ಶನಿವಾರ, ಸೆಪ್ಟೆಂಬರ್ 18, 2021
26 °C

ಗುತ್ತಿಗೆ ವೈದ್ಯರ ಕಾಯಂಗೆ ರಾಜ್ಯ ಸರ್ಕಾರ ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ 507 ವೈದ್ಯರ ಸೇವೆಯನ್ನು ಕಾಯಂಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಗುತ್ತಿಗೆ ವೈದ್ಯರನ್ನು ಕಾಯಂಗೊಳಿಸುವ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್‌ ಜತೆ ಸಭೆ ನಡೆಸಿದ ಬಳಿಕ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಜತೆಗೂ ರಾಮುಲು ಸಮಾಲೋಚನೆ ನಡೆಸಿದ್ದರು.

‘ರಾಜ್ಯದಲ್ಲಿ ವೈದ್ಯರ ಕೊರತೆ ಇದೆ. ಗುತ್ತಿಗೆ ವೈದ್ಯರು ಕೋವಿಡ್‌ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ದರಿಂದ ಅವರನ್ನು ಕಾಯಂಗೊಳಿಸುವುದು ಸೂಕ್ತ. ಇದಕ್ಕೆ ಅನುಸರಿಸಬೇಕಾದ ನಿಯಮಗಳ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್‌ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಿ’ ಎಂದು ಯಡಿಯೂರಪ್ಪ ಸೂಚಿಸಿದ್ದರು.

‘ಸುಮಾರು 507 ಮಂದಿ ಗುತ್ತಿಗೆ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ ಸಾಕಷ್ಟು ಜನ ಐದು–ಆರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ನೇಮಕದ ವೇಳೆ ಕೃಪಾಂಕ ನೀಡಬೇಕು ಮತ್ತು ನೇರ ನೇಮಕಾತಿಗೆ ಸಹಾಯಕವಾಗಲು ನಿಯಮಗಳನ್ನು ಬದಲಾವಣೆ ಮಾಡಲು ಕಾಯ್ದೆಗೆ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು’ ಎಂದು ಶ್ರೀರಾಮುಲು ತಿಳಿಸಿದರು.

ಸೇವೆ ಕಾಯಂ ಮಾಡಬೇಕು,ವೇತನ ಹೆಚ್ಚಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಗುತ್ತಿಗೆ ವೈದ್ಯರು ಪ್ರತಿಭಟನೆ ಆರಂಭಿಸಿದ್ದರು. ಇದಕ್ಕೆ ಮಣಿದ ಸರ್ಕಾರ ವೇತನವನ್ನು ₹45 ಸಾವಿರ ದಿಂದ ₹60 ಸಾವಿರಕ್ಕೆ ಏರಿಕೆ ಮಾಡಿತು. ಆದರೆ, ಸೇವೆ ಕಾಯಂ ಮಾಡುವುದಿಲ್ಲ ಎಂದು ಷರತ್ತು ಹಾಕಿತ್ತು.

ಕಾಯಂ ಬೇಡಿಕೆಯ ಪಟ್ಟು ಸಡಿಲಿಸದ ವೈದ್ಯರು, ಜುಲೈ 8ರಂದು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದರು.

ರಾಜೀನಾಮೆ ನಿರ್ಧಾರ: ತಾತ್ಕಾಲಿಕ ಹಿಂದಕ್ಕೆ

‘ಕೃಪಾಂಕ ನೀಡುವ ಮೂಲಕ ನೇರ ನೇಮಕಾತಿಗೆ ಕ್ರಮಕೈಗೊಳ್ಳುವುದಾಗಿ ಸಭೆಯಲ್ಲಿ ಸಚಿವರು ಭರವಸೆ ನೀಡಿದ್ದಾರೆ. ಹೀಗಾಗಿ ರಾಜೀನಾಮೆ ನಿರ್ಧಾರವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ’ ಎಂದು ಡಾ.ವಿನಯ್ ಮಂಜುನಾಥ್ ತಿಳಿಸಿದರು.

‘ನೇರ ನೇಮಕಾತಿ ಪ್ರಕ್ರಿಯೆ ಯಾವಾಗ ನಡೆಯಲಿದೆ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ಹಾಗಾಗಿ, ಕೋವಿಡ್‌ ತುರ್ತು ನಿಗಾ ಘಟಕದಲ್ಲಿ ಕಾರ್ಯನಿರ್ವಹಿಸುವವರು ಬುಧವಾರ ಸೇವೆ ಮುಂದುವರಿಸಲಿದ್ದಾರೆ. ಉಳಿದವರು ಮುಖ್ಯಮಂತ್ರಿ ಅಥವಾ ಸರ್ಕಾರದ ಮುಖ್ಯಕಾರ್ಯದರ್ಶಿಯನ್ನು ಭೇಟಿ ಮಾಡಲಿದ್ದಾರೆ. ಸಮಯದ ಗಡುವಿನೊಂದಗೆ ಲಿಖಿತ ರೂಪದಲ್ಲಿ ನೇಮಕಾತಿ ಪ್ರಕ್ರಿಯೆಯ ಬಗ್ಗೆ ಭರವಸೆ ನೀಡಿದಲ್ಲಿ ಸೇವೆ ಮುಂದುವರಿಸುತ್ತೇವೆ. ಇಲ್ಲವಾದಲ್ಲಿ ರಾಜೀನಾಮೆ ನೀಡುವುದು ಅನಿವಾರ್ಯವಾಗಲಿದೆ‌’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು