ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೇಲ್‌ ವಿಚಾರದಲ್ಲಿ ಸೇನಾ ಮುಖ್ಯಸ್ಥರು ತಲೆ ಹಾಕುವುದು ಬೇಡ: ಚಿದಂಬರಂ

Last Updated 22 ಡಿಸೆಂಬರ್ 2018, 2:02 IST
ಅಕ್ಷರ ಗಾತ್ರ

ಬೆಂಗಳೂರು: ರಫೇಲ್‌ ಪ್ರಕರಣದಲ್ಲಿ ಸೇನಾ ಮುಖ್ಯಸ್ಥರು ಅನಗತ್ಯವಾಗಿ ತಲೆ ಹಾಕಬಾರದು ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ತಾಕೀತು ಮಾಡಿದರು.

‘126 ರಫೇಲ್‌ ಯುದ್ಧ ವಿಮಾನಗಳನ್ನು ಏಕೆ ಖರೀದಿಸಲಿಲ್ಲ. ಕೇವಲ 36 ವಿಮಾನ ಖರೀದಿಸಲು ಮುಂದಾಗಿದ್ದು ಏಕೆ ? ಎಂಬುದನ್ನು ಬೇಕಿದ್ದರೆ ಕೇಳಲಿ’ ಎಂದು ಅವರು ಶುಕ್ರವಾರ ಕಾಂಗ್ರೆಸ್‌ ಕಚೇರಿಯಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ರಫೇಲ್‌ ಪ್ರಕರಣದ ಕುರಿತು ಸುಪ್ರೀಂಕೋರ್ಟ್‌ ಅತ್ಯಂತ ಸ್ಪಷ್ಟ ತೀರ್ಪು ನೀಡಿದೆ’ ಎಂದು ವಾಯುಪಡೆ ಮುಖ್ಯಸ್ಥ ಬಿ.ಎಸ್‌.ಧನೋವಾ ಅವರ ಹೇಳಿಕೆಯನ್ನು ಟೀಕಿಸಿದ ಕಾಂಗ್ರೆಸ್‌ ಮುಖಂಡ ವೀರಪ್ಪ ಮೊಯಿಲಿ ಎರಡು ದಿನಗಳ ಹಿಂದೆ ಧನೋವಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಮೊಯಿಲಿ ಹೇಳಿಕೆಗೆ ತೇಪೆ ಹಚ್ಚುವ ಕೆಲಸ ಮಾಡಿದ ಚಿದಂಬರಂ, ‘ಸೇನಾ ಪಡೆಗಳ ಮುಖ್ಯಸ್ಥರನ್ನು ನಾವು ಆರೋಪಿಗಳು ಎಂದು ಎಲ್ಲೂ ಹೇಳಿಲ್ಲ. ಅವರ ಬಗ್ಗೆ ಗೌರವ ಇದೆ. ಆದರೆ, ಅವರು ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಬಾರದು. ಇದು ನನ್ನ ಗೌರವಪೂರ್ವಕ ಮನವಿ’ ಎಂದರು.

‘ರಫೇಲ್‌ ಕೆಟ್ಟ ಯುದ್ಧ ವಿಮಾನ ಎಂಬುದಾಗಿ ನಮ್ಮ ಪಕ್ಷ ಎಲ್ಲೂ ಹೇಳಿಲ್ಲ. ಅದೊಂದು ಉತ್ತಮ ಯುದ್ಧ ವಿಮಾನ. ಅದನ್ನು ಕಡಿಮೆ ದರದಲ್ಲಿ ಖರೀದಿಸಿರುವುದಾಗಿ ಸರ್ಕಾರ ಹೇಳಿದೆ. ಹಾಗಿದ್ದರೆ 36 ಯುದ್ಧ ವಿಮಾನಗಳ ಬದಲಿಗೆ 126 ಯುದ್ಧ ವಿಮಾನಗಳನ್ನು ಏಕೆ ಖರೀದಿಸಿಲ್ಲ’ ಎಂದು ಪ್ರಶ್ನಿಸಿದರು.

‘ರಫೇಲ್‌ ಯುದ್ಧ ವಿಮಾನದ ವಿಷಯವನ್ನು ಸಂಸತ್ತಿನಲ್ಲಿ ಚರ್ಚೆ ನಡೆಸಿ ಆಗಿದೆ. ಜಂಟಿ ಸಂಸದೀಯ ಸಮಿತಿ(ಜೆಪಿಸಿ)ರಚಿಸಬೇಕು ಎಂಬುದು ನಮ್ಮ ಬೇಡಿಕೆ. ಈ ವಿಷಯ ಮುಂದಿಟ್ಟುಕೊಂಡು ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸಿದ್ದೇವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಫೇಲ್‌ ಪ್ರಮುಖ ವಿಷಯವಾಗಲಿದೆ’ ಎಂದೂ ಅವರು ಚಿದಂಬಂರಂ ಹೇಳಿದರು.

ಸರ್ಕಾರಕ್ಕೆ ಚಿದು ಪ್ರಶ್ನೆಗಳು

* ಯುಪಿಎ 2012 ರಲ್ಲಿ ಫ್ರಾನ್ಸ್‌ ಸರ್ಕಾರದ ಜತೆಗೆ ಮಾಡಿಕೊಂಡಿದ್ದ ಒಪ್ಪಂದ ರದ್ದು ಮಾಡಿ, ಹೊಸ ಒಪ್ಪಂದ ಮಾಡಿಕೊಂಡಿದ್ದು ಏಕೆ? ಯುಪಿಎ ಅವಧಿಯ ಒಪ್ಪಂದದ ಪ್ರಕಾರ 18 ವಿಮಾನಗಳ ನೇರ ಖರೀದಿ ಮತ್ತು 108 ವಿಮಾನಗಳನ್ನು ಎಚ್‌ಎಎಲ್‌ನಲ್ಲಿ ಜೋಡಿಸುವ (ಅಸೆಂಬ್ಲಿಂಗ್‌) ಒಪ್ಪಂದ ಆಗಿತ್ತು. ಒಪ್ಪಂದ ಕೈ ಬಿಟ್ಟಿದ್ದಕ್ಕೆ ಕಾರಣ ನೀಡಿ?

* ವಾಯು ಪಡೆಗೆ 126ಯುದ್ಧ ವಿಮಾನಗಳ ಅಗತ್ಯವಿರುವಾಗ ಕೇವಲ 36 ಯುದ್ಧ ವಿಮಾನಗಳ ಖರೀದಿಗೆ ನಿರ್ಧರಿಸಿದ್ದು ಏಕೆ?

* ಪ್ರತಿ ಯುದ್ಧ ವಿಮಾನದ ದರವು ₹1670 ಕೋಟಿ ಎಂಬುದು ನಿಜವೇ. ಇದು ನಿಜವಾದರೆ ಮೂರು ಪಟ್ಟು ಹೆಚ್ಚು ಬೆಲೆ ನೀಡದಂತಾಗಿದೆ ಅಲ್ಲವೆ. ಇದಕ್ಕೆ ನಿಮ್ಮ ಸಮರ್ಥನೆ ಏನು?

* ಮೊದಲ ವಿಮಾನ ಒಪ್ಪಂದದ ನಾಲ್ಕು ವರ್ಷಗಳ ಬಳಿಕ ಅಂದರೆ 2019 ರ ಸೆಪ್ಟಂಬರ್‌ನಲ್ಲಿ ಪೂರೈಕೆ ಆಗುತ್ತದೆ. ಕೊನೆಯ ವಿಮಾನ 2020 ಕ್ಕೆ ಸಿಗುತ್ತದೆ ಎನ್ನಲಾಗುತ್ತಿದೆ. ಹಾಗಿದ್ದರೆ ತುರ್ತು ಖರೀದಿಯಲ್ಲಿ ಗುಣಮಟ್ಟ ನಿರೀಕ್ಷಿಸಲು ಸಾಧ್ಯವೇ?

* ಫ್ರಾನ್ಸ್‌ನ ಡಾಸೊ ಕಂಪನಿಗೆ ದೇಶದ ಯಾವುದೇ ಸಂಸ್ಥೆಯ ಹೆಸರನ್ನು ಶಿಫಾರಸು ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಎಚ್‌ಎಎಲ್‌ ಹೆಸರು ಶಿಫಾರಸ್ಸು ಮಾಡಲು ಇದ್ದ ಅಡ್ಡಿ ಏನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT