ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಮಾತಿನ ಜಟಾಪಟಿ

ನಾಗರಿಕತೆಯನ್ನು ಎತ್ತಿಹಿಡಿದ ಡಾ. ಶಿವವಿಶ್ವನಾಥನ್‌
Last Updated 19 ಜನವರಿ 2019, 9:56 IST
ಅಕ್ಷರ ಗಾತ್ರ

ಧಾರವಾಡ: ಧಾರವಾಡ ಸಾಹಿತ್ಯ ಸಂಭ್ರಮದ ಎರಡನೇ ದಿನ ‘ರಾಷ್ಟ್ರೀಯತೆ: ಸಮಕಾಲೀನ ಸಂದರ್ಭದಲ್ಲಿನ ವಾಗ್ವಾದಗಳು’ ಎಂಬ ವಿಷಯದ ಬಗ್ಗೆ ಹಿರಿಯ ಚಿಂತಕ ಡಾ. ಶಿವವಿಶ್ವನಾಥನ್ ವಿಚಾರ ಮಂಡಿಸುತ್ತಲೇ ಸಭಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕೆಲ ಹೊತ್ತು ಗೊಂದಲ ಸೃಷ್ಟಿಯಾಯಿತು.

‘ನಾನೊಬ್ಬ ಆ್ಯಂಟಿ ನ್ಯಾಷನಲಿಸ್ಟ್‌ ಎಂದು ಮೊದಲೇ ಸ್ಪಷ್ಟಪಡಿಸಿಬಿಡುತ್ತೇನೆ. ಹಾಗೆ ಹೇಳಿದರೇ ನಾನು ಭಾರತೀಯ ಎನಿಸುತ್ತದೆ’ ಎಂಬ ಸಾಲುಗಳನ್ನು ಹೇಳುತ್ತ ಮಾತು ಶುರು ಮಾಡಿದ ಡಾ. ಶಿವ ವಿಶ್ವನಾಥನ್‌ ಅವರು, 19ನೇ ಶತಮಾನದ ಬ್ರಿಟಿಷ್‌ ಕಾಲದಲ್ಲಿ ರೂಪುಗೊಂಡ ರಾಷ್ಟ್ರೀಯತೆಯನ್ನೇ 21ನೇ ಶತಮಾನದಲ್ಲಿಯೂ ನಾವು ಅನ್ವಯಿಸಿಕೊಳ್ಳುತ್ತಿರುವುದು ಸರಿಯಲ್ಲ. ಕಾಲ ಬದಲಾದ ಹಾಗೆ ಪರಿಕಲ್ಪನೆಗಳು ಬದಲಾಗುತ್ತವೆ’ ಎಂದು ಹೇಳಿದರು.

ಈ ಜಗತ್ತಿನಲ್ಲಿ ನಾಗರಿಕತೆಯ ತವರೂರಾಗಿ ಗುರುತಿಸಿಕೊಳ್ಳುವ ಮೂಲಕ ಭಾರತ ಅತಿ ದೊಡ್ಡ ಪಾತ್ರ ವಹಿಸಬೇಕಾಗಿದೆಯೇ ವಿನಾ ರಾಷ್ಟ್ರೀಯತೆ ಎಂಬ ಸೀಮಿತ ದೃಷ್ಟಿಕೋನಕ್ಕೆ ಜೋತುಬೀಳದೇ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳುವ, ವಿಮರ್ಶಿಸುವ ಪರಿಪಾಠವನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ ಎಂದು ಚಿಂತಕ ಡಾ. ಶಿವ ವಿಶ್ವನಾಥನ್‌ ಹೇಳಿದರು.

‘ರಾಷ್ಟ್ರೀಯತೆಯುಆಡಳಿತ, ದೇಶದ ನಾಗರಿಕತೆ(ಸಿಟಿಸನ್‌ಶಿಪ್‌) ಮತ್ತು ಗಡಿ ಭದ್ರತೆಯ ವಿಚಾರಗಳ ನಡುವೆಯೇ ಸುತ್ತುತ್ತಿರುತ್ತದೆ. ಆದರೆ ಭಾರತದ ರಾಷ್ಟ್ರೀಯತೆಯ ಪರಿಕಲ್ಪನೆಗೆ ಸೀಮಿತಗೊಂಡಿದೆ. ಆದರೆ ಹೆಚ್ಚೆಚ್ಚು ಸಂವಾದಗಳು ನಡೆದ ಹಾಗೆಯೇ, ನಮ್ಮ ಇತಿಹಾಸದ ಬಗ್ಗೆ ಹಲವು ಆಯಾಮಗಳ ಕತೆಗಳನ್ನು ಹೇಳುವ ಮೂಲಕ ಬಹುತ್ವ ಮತ್ತು ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ’ ಎಂದು ಹೇಳಿದರು.

ಪಾಕಿಸ್ತಾನಕ್ಕೆ ತಾವು ಭೇಟಿ ಕೊಟ್ಟು ಹಿಂತಿರುಗುವ ವೇಳೆಗೆ ಅಲ್ಲಿನ ಜನರು ಪಾಟ್ನಾಕ್ಕೆ ಪಾರ್ಸೆಲ್‌ಗಳನ್ನು ತಮ್ಮ ಬಳಿ ಕೊಡುತ್ತಿದ್ದ ಘಟನೆಯನ್ನು ನೆನಪಿಸಿಕೊಳ್ಳುತ್ತ, ಮಾತುಕತೆ, ಸಂವಾದ ಮುಕ್ತವಾಗಿ ನಡೆಯಬೇಕಾದರೆ ದಿಗ್ಭಂಧನಗಳನ್ನುಹಾಕುವುದು ಸರಿಯಲ್ಲ. ಪಾಕಿಸ್ತಾನ ಮತ್ತು ಭಾರತದ ನಡುವಿನ ಗಡಿಯನ್ನು ತೆರೆದಿಡುವುದು ಉತ್ತಮ. ಶಾಂತಿ ಸ್ಥಾಪನೆಯ ಈ ನಡೆಗೆ ಬಹುಶಃ ನರೇಂದ್ರ ಮೋದಿ ಅವರಿಗೆ ನೋಬೆಲ್‌ ಪ್ರಶಸ್ತಿಯೂ ಬರಬಹುದೇನೋ’ ಎಂದು ವ್ಯಂಗ್ಯವಾಡಿದರು.

ಅಷ್ಟರಲ್ಲಿ ಸಭಿಕರು ಡಾ. ಶಿವ ವಿಶ್ವನಾಥನ್ ಅವರ ಮಾತುಗಳನ್ನು ವಿರೋಧಿಸಿ, ‘ ನೀವು ಕೇವಲ ಒಂದೇ ಬದಿಯ ನಿಲುವುಗಳನ್ನು ಪ್ರಸ್ತುತಪಡಿಸುತ್ತಿದ್ದೀರಿ. ಶಾಂತಿ ಇರಬೇಕು ಎಂಬುದನ್ನು ಎರಡೂ ಕಡೆಯವರೂ ಒಪ್ಪಬೇಕು. ಕಾಶ್ಮೀರಿ ಪಂಡಿತರ ಸ್ಥಿತಿಗತಿಯ ಬಗ್ಗೆ ನೀವು ಮಾತನಾಡುತ್ತಿಲ್ಲ ಏಕೆ?’ ಎಂಬ ಪ್ರಶ್ನೆಗಳು ತೂರಿ ಬಂದವು.

ಸಂವಾದವನ್ನು ನಿರ್ದೇಶಿಸುತ್ತಿದ್ದ ರಂಗಕರ್ಮಿ ಕೆ.ವಿ. ಅಕ್ಷರ ಅವರು ಮಧ್ಯ ಪ್ರವೇಶಿಸಿ ಮಾತು ಮುಂದುವರೆಯಲು ಅನುವು ಮಾಡಿಕೊಟ್ಟರು. ಡಾ. ಶಿವವಿಶ್ವನಾಥ್‌ ಅವರ ಮಾತು ಮುಕ್ತಾಯಗೊಳ್ಳುತ್ತಲೇ ಮತ್ತಷ್ಟು ವಿರೋಧಗಳು ಸಭೆಯಿಂದ ವ್ಯಕ್ತವಾದವು. ಭಾರತೀಯ ಸೇನೆಯು ಅತ್ಯಾಚಾರಗಳನ್ನು ನಡೆಸಿದೆ ಎಂಬ ಹೇಳಿಕೆಯನ್ನು ನಿವೃತ್ತ ಸೈನಿಕರೊಬ್ಬರು ಖಂಡತುಂಡವಾಗಿ ಖಂಡಿಸಿದರು. ಲೇಖಕಿ ನೀತಾ ಶ್ರೀನಿವಾಸ್‌ ಅವರು , ಕಾಶ್ಮೀರಿ ಪಂಡಿತರು, ಮುಂಬೈ ದಾಳಿ, ಘಜ್ನಿ ದಾಳಿ, ಮೊಗಲ್‌ ಯುಗದ ಬಗ್ಗೆಯೂ ಮಾತನಾಡಿ ಎಂದು ಡಾ. ಶಿವ ಅವರನ್ನು ಆಗ್ರಹಿಸಿದರು.

ಗಣೇಶ್‌ ದೇವಿದತ್ ಪಟ್ನಾಯಿಕ್‌ ಅವರು ಮಾತನಾಡಿ, ಈ ಸಮ್ಮೇಳನದ ುದ್ದೇಶವೇ ಮುಕ್ತವಾದ ಚರ್ಚೆಗೆ ಅವಕಾಶ ಕಲ್ಪಿಸುವುದು, ಪರ ವಿರೋಧ ಸಂವಾದ ನಡೆಯಬೇಕು ಎಂಬುದು. ಹಾಗಾಗಿ ಮುಕ್ತವಾಗಿ ತಮ್ಮ ನಿಲುವುಗಳನ್ನು ಹೇಳಿಕೊಂಡ ಎಲ್ಲರಿಗೂ ಅಭಿನಂದನೆಗಳು ಎಂದು ವಾಗ್ವಾದಕ್ಕೆ ಅಂತ್ಯ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT