ಮಂಗಳವಾರ, ಮಾರ್ಚ್ 31, 2020
19 °C
ರಸ್ತೆ ಮೇಲೆ ಕುಳಿತು ಪ್ರತಿಭಟನೆ

ಹೊಟೇಲ್‌ಗೆ ನುಗ್ಗಲು ಯತ್ನ: ದಿಗ್ವಿಜಯ್‌ ಸಿಂಗ್‌ ಬಂಧನ, ಬಿಡುಗಡೆ

‍ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಧ್ಯಪ್ರದೇಶದಲ್ಲಿ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿರುವ ಕಾಂಗ್ರೆಸ್‌, ಬೆಂಗಳೂರಿನಲ್ಲಿರುವ ಬಂಡಾಯ ಶಾಸಕರ ಸಂಪರ್ಕಕ್ಕೆ ಹರಸಾಹಸ ಮಾಡುತ್ತಿದ್ದು, ಬುಧವಾರ ಮುಂಜಾನೆ ಯಲಹಂಕದ ರಮಡ ಹೊಟೇಲ್‌ಗೆ ನುಗ್ಗಲು ಯತ್ನಿಸಿದ ದಿಗ್ವಿಜಯ್‌ ಸಿಂಗ್‌ ಹಾಗೂ ಅವರ ಬೆಂಬಲಿಗರನ್ನು ಪೊಲೀಸರು ಬಂಧಿಸಿ, ಆನಂತರ ಬಿಡುಗಡೆ ಮಾಡಿದರು.

ಮುಖ್ಯಮಂತ್ರಿ ಕಮಲ್‌ನಾಥ್‌ ವಿರುದ್ಧ ತಿರುಗಿ ಬಿದ್ದಿರುವ 22 ಶಾಸಕರು ಕಾಂಗ್ರೆಸ್‌ ತ್ಯಜಿಸಿ, ಯುವ ನಾಯಕ ಜ್ಯೋತಿರಾದಿತ್ಯ ಸಿಂದಿಯಾ ಅವರನ್ನು ಬೆಂಬಲಿಸಿ ಬಿಜೆಪಿಗೆ ಸೇರಲು ಸಿದ್ಧತೆ ನಡೆಸಿದ್ದಾರೆ.

ಈ ಮಧ್ಯೆ, ಬೆಳಿಗ್ಗೆ 5.30ರ ಸುಮಾರಿಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ದಿಗ್ವಿಜಯ್‌ ಸಿಂಗ್‌ ಹಾಗೂ ಮಧ್ಯಪ್ರದೇಶ ಸರ್ಕಾರದ ಕೆಲವು ಸಚಿವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಜತೆಗೂಡಿ ನೇರವಾಗಿ ಬಂಡಾಯ ಶಾಸಕರು ತಂಗಿರುವ ರಮಡ ಹೊಟೇಲ್‌ಗೆ ತೆರಳಿದರು. ಆದರೆ, ದಾರಿಯಲ್ಲೇ ಪೊಲೀಸರು ತಡೆದರು. ಈ ಹಂತದಲ್ಲಿ ಭಾರಿ ನೂಕುನುಗ್ಗಲು ಉಂಟಾಯಿತು.

ನೂರಾರು ಸಂಖ್ಯೆಯಲ್ಲಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಿಂದಾಗಿ ಕೆಲಹೊತ್ತು ಗೊಂದಲ ಉಂಟಾಯಿತು.

ಪೊಲೀಸರ ಕ್ರಮ ವಿರೋಧಿಸಿ ದಿಗ್ವಿಜಯ್‌ ಸಿಂಗ್‌ ತಮ್ಮ ಬೆಂಬಲಿಗರ ಜತೆ ಪ್ರತಿಭಟನೆ ಆರಂಭಿಸಿದರು. ರಸ್ತೆ ಮೇಲೆ ಕುಳಿತ  ಅವರನ್ನು ಪೊಲೀಸರು ಬಲವಂತವಾಗಿ ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು.

ಯಲಹಂಕದ ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ದಿಗ್ವಿಜಯ್‌ ಸಿಂಗ್‌ ಅವರನ್ನು ಕೆಲಹೊತ್ತು ಕೂರಿಸಲಾಗಿತ್ತು. ಈ ಸಂದರ್ಭದಲ್ಲಿ ಶಿವಕುಮಾರ್‌ ಅವರಲ್ಲದೆ, ಕೃಷ್ಣ ಬೈರೇಗೌಡ, ರಿಜ್ಷಾನ್‌ ಅರ್ಷದ್‌, ಎನ್‌.ಎ. ಹ್ಯಾರಿಸ್‌ ಮತ್ತಿತರರು ಇದ್ದರು.

ಇತ್ತೀಚೆಗೆ ಮಧ್ಯಪ್ರದೇಶದ ಉನ್ನತ ಶಿಕ್ಷಣ ಸಚಿವ ಜೀತೂ ಪಟವಾರಿ ತಮ್ಮ ಶಾಸಕರನ್ನು ಭೇಟಿಯಾಗಲು ಬಂದಿದ್ದಾಗಲೂ ಪೊಲೀಸರ ಜತೆ ಜಟಾಪಟಿ ನಡೆಸಿದ್ದರು. ಾನಂತರ ಅವರನ್ನೂ ಬಂಧಿಸಿ, ಬಿಡುಗಡೆ ಮಾಡಲಾಗಿತ್ತು.

‘ಕೆಲವು ಸ್ಥಳೀಯ ಬಿಜೆಪಿ ನಾಯಕರ ಭದ್ರತೆಯಲ್ಲಿರುವ ತಮ್ಮ ಮಗನನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಬಂಡಾಯ ಶಾಸಕ ಚೌಧರಿ ಅವರ ತಂದೆ ನಾರಾಯಣ ಚೌಧರಿ ಪೊಲೀಸ್‌ ಮಹಾನಿರ್ದೇಶಕ ಮತ್ತು ಮಹಾ ನಿರೀಕ್ಷಕ ಪ್ರವೀಣ್‌ ಸೂದ್‌ ಅವರಿಗೆ ದೂರು ನೀಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು