ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕ್ಷೇತ್ರದಲ್ಲೇ ಲೀಡ್‌ ಇಲ್ಲ!

ಚಿಕ್ಕೋಡಿ–ಸದಲಗಾ ಬಿಟ್ಟರೆ ಉಳಿದೆಡೆ ಜೊಲ್ಲೆಗೆ ಹೆಚ್ಚು ಮತ
Last Updated 24 ಮೇ 2019, 9:36 IST
ಅಕ್ಷರ ಗಾತ್ರ

ಬೆಳಗಾವಿ: ಈ ಭಾಗದ ಪ್ರಭಾವಿ ನಾಯಕ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಾವು ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರಿಗೆ ‘ಲೀಡ್‌’ ಕೊಡಿಸುವುದು ಸಾಧ್ಯವಾಗಿಲ್ಲ. ಅಲ್ಲಿ, ವಿಜೇತ ಅಭ್ಯರ್ಥಿ ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ 2,809 ಮತಗಳಿಂದ ಮುಂದಿದ್ದಾರೆ.

ಸಚಿವರು, ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಮತ್ತು ಪ್ರಚಾರದಲ್ಲಿ ನೇತೃತ್ವ ವಹಿಸಿದ್ದರು. ಎರಡೂ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಹೀನಾಯ ಸೋಲು ಅನುಭವಿಸಿರುವುದರಿಂದ, ಸಚಿವರಿಗೂ ಮುಖಭಂಗವಾಗಿದೆ. ಪಕ್ಷದಲ್ಲಿರುವ ಭಿನ್ನಮತ ಹಾಗೂ ಸಂಘಟನೆಯ ಕೊರತೆಗೆ ಈ ಸೋಲು ‘ಕನ್ನಡಿ’ ಹಿಡಿದಿದೆ. ಉಸ್ತುವಾರಿ ವಹಿಸಿದ್ದ ಸಚಿವರಿಗೆ ಆತ್ಮಾವಲೋಕನದ ಅಗತ್ಯತೆಯ ‘ಸಂದೇಶ’ವನ್ನೂ ರವಾನಿಸಿದೆ. ಏಕೆಂದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ವತಃ ಸತೀಶ ಜಾರಕಿಹೊಳಿಯೇ ಅತ್ಯಂತ ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದರು.

ಪ್ರಕಾಶ ಹುಕ್ಕೇರಿ ಶಾಸಕರಾಗಿ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಚಿಕ್ಕೋಡಿ–ಸದಲಗಾದಲ್ಲಿ ಕಳೆದೆರಡು ಚುನಾವಣೆಗಳಿಂದ ಅವರ ಪುತ್ರ ಗಣೇಶ ಹುಕ್ಕೇರಿ ಆಯ್ಕೆಯಾಗಿದ್ದಾರೆ. ಅಲ್ಲಿ, ಕಾಂಗ್ರೆಸ್‌ಗೆ ಅತ್ಯುತ್ತಮ ಎನಿಸುವಷ್ಟು ಲೀಡ್‌ ದೊರೆತಿದೆ. ಹುಕ್ಕೇರಿ ಅವರ ವೈಯಕ್ತಿಕ ವರ್ಚಸ್ಸು ನೆರವಾಗಿದೆ. ಅಲ್ಲದೇ, ತಂದೆಗೆ ಹೆಚ್ಚಿನ ಮತಗಳು ಬರುವಂತೆ ಮಾಡುವಲ್ಲಿ ಗಣೇಶ ಕೂಡ ಶ್ರಮಿಸಿರುವುದು ಸ್ಪಷ್ಟವಾಗಿದೆ. ಜೊಲ್ಲೆ ಅವರ ಊರಾದ ಯಕ್ಸಂಬಾ ಗ್ರಾಮ ಇದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ಪತಿಗೆ ನೆರವಾದ ಪತ್ನಿ:

ನಿಪ್ಪಾಣಿ ಕ್ಷೇತ್ರದಲ್ಲಿ ಪತಿ ಅಣ್ಣಾಸಾಹೇಬಗೆ ಹೆಚ್ಚಿನ ಮತಗಳ ಮುನ್ನಡೆ ದೊರಕಿಸುವಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಯಶಸ್ವಿಯಾಗಿದ್ದಾರೆ. ಸೋಲುಗಳಿಂದ ಕಂಗೆಟ್ಟಿದ್ದ ಸಂಗಾತಿಯನ್ನು ಗೆಲುವಿನ ದಡ ತಲುಪಿಸುವಲ್ಲಿ ಶ್ರಮಿಸಿದ್ದಾರೆ. ಅಲ್ಲಿ ಕಾಂಗ್ರೆಸ್‌ ಹೀನಾಯ ಸ್ಥಿತಿಯಲ್ಲಿದೆ. ಇದರೊಂದಿಗೆ, ಯಕ್ಸಂಬಾದ ಈ ದಂಪತಿ ಸಂಸದ, ಶಾಸಕಿ ಎನಿಸಿಕೊಂಡು ವಿಶೇಷ ದಾಖಲೆ ಮಾಡಿದೆ.

ಈ ಕ್ಷೇತ್ರದಲ್ಲಿ ತಲಾ 4 ಕಾಂಗ್ರೆಸ್‌ ಹಾಗೂ ಬಿಜೆಪಿ ಶಾಸಕರಿದ್ದಾರೆ. ಶಾಸಕರೊಂದಿಗೆ ಆಯಾ ಪಕ್ಷದ ಮುಖಂಡರು ಕೂಡ ತಮ್ಮ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ್ದರು. ಆದರೆ, ಪ್ರಕಾಶ ಹುಕ್ಕೇರಿಗೆ ‘ಒಳ ಏಟು’ಗಳು ಗಾಯ ಮಾಡಿವೆ. 4ರಲ್ಲಿ ಮೂರು ಶಾಸಕರು ಹುಕ್ಕೇರಿ ಅವರಿಗೆ ಹೆಚ್ಚಿನ ಮತಗಳನ್ನು ತಂದುಕೊಡುವಲ್ಲಿ ವಿಫಲವಾಗಿದ್ದಾರೆ.

ರೆಬೆಲ್‌ ಶಾಸಕ ರಮೇಶ ಜಾರಕಿಹೊಳಿ ಜೊತೆ ಗುರುತಿಸಿಕೊಂಡಿರುವ ಅಥಣಿ ಕ್ಷೇತ್ರದ ಮಹೇಶ ಕುಮಠಳ್ಳಿ ಹಾಗೂ ಕಾಗವಾಡದ ಶ್ರೀಮಂತ ಪಾಟೀಲ ಪಕ್ಷಕ್ಕೆ ‘ನೆರವು’ ನೀಡಿಲ್ಲದಿರುವುದು ಅಂಕಿ–ಅಂಶಗಳಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಾಗವಾಡ, ಕುಡಚಿ, ರಾಯಬಾಗ ಹಾಗೂ ಹುಕ್ಕೇರಿಯಲ್ಲಿ ಕಾಂಗ್ರೆಸ್‌ ಮತ ಪ್ರಮಾಣ 60ಸಾವಿರದ ಗಡಿ ದಾಟುವುದೂ ಸಾಧ್ಯವಾಗಿಲ್ಲ!

ಹುಕ್ಕೇರಿಯಲ್ಲಿ ಜಾಸ್ತಿ:

ಸಹೋದರ ರಮೇಶ ಕತ್ತಿಗೆ ಪಕ್ಷದ ಟಿಕೆಟ್‌ ಸಿಗಲಿಲ್ಲವೆಂದು ಒಂದು ಹಂತದಲ್ಲಿ ಮುನಿಸಿಕೊಂಡಿದ್ದ ಶಾಸಕ ಉಮೇಶ ಕತ್ತಿ ತಾವು ಪ್ರತಿನಿಧಿಸುವ ಹುಕ್ಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಗಮನಾರ್ಹ ಲೀಡ್‌ ಕೊಡಿಸಿರುವುದು ಗಮನಸೆಳೆಯುತ್ತಿದೆ.

ಕ್ಷೇತ್ರದಲ್ಲಿ 11 ಮಂದಿ ಕಣದಲ್ಲಿದ್ದರು. ಮತ ಗಳಿಕೆಯಲ್ಲಿ ಪ್ರಮುಖ ಪಕ್ಷಗಳ ಜೊಲ್ಲೆ, ಹುಕ್ಕೇರಿ ಬಿಟ್ಟರೆ ನಂತರದ ಸ್ಥಾನದಲ್ಲಿರುವವರು ಬಿಎಸ್‌ಪಿಯ ಮಚ್ಚೇಂದ್ರ ಕಾಡಾಪುರೆ (15,575). ಉಳಿದವರ ಗಳಿಕೆ ನಾಲ್ಕಂಕಿ ದಾಟಿಲ್ಲ; ಅದರಲ್ಲೂ 5ಸಾವಿರ ಮತಗಳೊಳಗೇ ಇದೆ. ಹೀಗಾಗಿ, ಅವರೆಲ್ಲರೂ ಠೇವಣಿ ಉಳಿಸಿಕೊಳ್ಳುವುದೂ ಸಾಧ್ಯವಾಗಿಲ್ಲ.

ವಿಧಾನಸಭಾ ಕ್ಷೇತ್ರವಾರು ಮತ ಹಂಚಿಕೆ
ಕ್ಷೇತ್ರ; ಅಣ್ಣಾಸಾಹೇಬ ಜೊಲ್ಲೆ; ಪ್ರಕಾಶ ಹುಕ್ಕೇರಿ

ನಿಪ್ಪಾಣಿ; 86,553;74,909
ಚಿಕ್ಕೋಡಿ–ಸದಲಗಾ; 76,824;91,685
ಅಥಣಿ; 95593;62070
ಕಾಗವಾಡ; 76,152;58,360
ಕುಡಚಿ; 67,339;54,262
‌ರಾಯಬಾಗ; 79,236;58,015
ಹುಕ್ಕೇರಿ; 84,696;53,640
ಯಮಕನಮರಡಿ; 74,739;71,930

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT