ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಕೊರಳಿಗೆ ಉರುಳಾದ ಹಣ!

Last Updated 3 ಸೆಪ್ಟೆಂಬರ್ 2019, 20:39 IST
ಅಕ್ಷರ ಗಾತ್ರ

ಬೆಂಗಳೂರು: ಶಿವಕುಮಾರ್‌ ಮತ್ತು ಅವರ ಆಪ್ತರಿಗೆ ಸೇರಿದ ದೆಹಲಿಯ ಆರ್‌.ಕೆ. ಪುರಂನ ಮನೆ ಹಾಗೂ ಸಫ್ದರ್‌ಜಂಗ್‌ ಎನ್‌ಕ್ಲೇವ್‌ ಫ್ಲ್ಯಾಟ್‌ಗಳಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 2017ರ ಆಗಸ್ಟ್‌ 2ರಂದು ವಶಪಡಿಸಿಕೊಂಡಿದ್ದ ₹ 8.60 ಕೋಟಿ ಹಣವೇ ಕಾಂಗ್ರೆಸ್‌ ನಾಯಕನ ಕೊರಳಿಗೆ ಉರುಳಾಯಿತು.

ಶಿವಕುಮಾರ್‌ ಅವರ ವ್ಯವಹಾರಗಳ ಪಾಲುದಾರರಾಗಿರುವ ಸಚಿನ್‌ ನಾರಾಯಣ್‌, ಸುನಿಲ್‌ ಕುಮಾರ್‌ ಶರ್ಮ, ದೆಹಲಿ ಕರ್ನಾಟಕ ಭವನದ ನೌಕರ ಆಂಜನೇಯ ಹಾಗೂ ಸುಖದೇವ್‌ ವಿಹಾರಿನ ನಿವಾಸಿ ರಾಜೇಂದ್ರ ಅವರು ಹಣದ ಮೂಲದ ಬಗ್ಗೆ ವಿಭಿನ್ನ ಹೇಳಿಕೆ ನೀಡಿದ್ದರು. ಆನಂತರ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಇ.ಡಿ ತನಿಖೆ ಆರಂಭಿಸಿತ್ತು.

ದೆಹಲಿಯ ಫ್ಲ್ಯಾಟ್‌ಗಳಲ್ಲಿ ಸಿಕ್ಕಿರುವ ಹಣ ಡಿಕೆಶಿಗೆ ಸೇರಿದ್ದು’ ಎಂದು ಅವರ ಆಪ್ತ ಆಂಜನೇಯ ಹೇಳಿದ್ದರು. ‘ಇದು ತಮ್ಮ ಹಣ’ ಎಂದು ಶರ್ಮ ಪ್ರತಿಪಾದಿಸಿದ್ದರು. ‘ಇದರಲ್ಲಿ ಭಾಗಶಃ ಕೃಷಿಯಿಂದ ಬಂದಿರುವ ಆದಾಯ’ ಎಂದು ಕಾಂಗ್ರೆಸ್‌ ನಾಯಕ ಐ.ಟಿ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದರೂ, ಹಣದ ಸರಿಯಾದ ಮೂಲವನ್ನು ಖಚಿತಪಡಿಸಿಲ್ಲ ಎಂದು ಇ.ಡಿ ಮೂಲಗಳು ತಿಳಿಸಿವೆ.

ಸುನೀಲ್‌ ಕುಮಾರ್‌ ಶರ್ಮಾ ದೆಹಲಿ ಅಥವಾ ಸುತ್ತಮುತ್ತ ಯಾವುದೇ ವ್ಯವಹಾರ ನಡೆಸುತ್ತಿಲ್ಲ. ಅವರಿಗೆ ಸೇರಿದ ಫ್ಲ್ಯಾಟ್‌ನಿಂದ ವಶಪಡಿಸಿಕೊಂಡಿರುವ ₹ 6.68 ಕೋಟಿಯನ್ನು ಬೆಂಗಳೂರಿನಿಂದ ಏಕೆ ಸಾಗಿಸಲಾಯಿತು. ಏಕೆ ರಹಸ್ಯವಾಗಿ ಇಡಲಾಗಿತ್ತು ಎಂಬ ಮಾಹಿತಿಯನ್ನು ಐ.ಟಿ ಅಧಿಕಾರಿಗಳಿಗೆ ನೀಡಿಲ್ಲ. ಈ ಸಂಬಂಧ ದೆಹಲಿ ಇ.ಡಿ ಕಚೇರಿಯಲ್ಲಿ ಡಿಕೆಶಿ ವಿಚಾರಣೆ ಎದುರಿಸಿದ್ದರಾದರೂ ಅಧಿಕಾರಿಗಳ ಜತೆ ಸಹಕರಿಸಲಿಲ್ಲ ಎಂದೂ ಮೂಲಗಳು ಹೇಳಿವೆ.

ಶಿವಕುಮಾರ್ ಹಾಗೂ ಅವರ ಆಪ್ತರ ಮನೆಗಳ ಮೇಲೆ ನಡೆದ ದಾಳಿ ವೇಳೆ ವಶಪಡಿಸಿಕೊಂಡಿರುವ ಡೈರಿಯಲ್ಲಿ ಹಣಕ್ಕೆ ಕೆ.ಜಿ ಎಂಬ ಸಂಕೇತಾಕ್ಷರ ಬಳಸಲಾಗಿದೆ. ಆ ಮೂಲಕ ‘ಹವಾಲಾ ವ್ಯವಹಾರ’ ನಡೆಸಿದ ಆರೋಪಕ್ಕೆ ಶಿವಕುಮಾರ್ ಒಳಗಾಗಿದ್ದಾರೆ.ಹೀಗಾಗಿ, ವಿಚಾರಣೆಯನ್ನು ಜಾರಿ ನಿರ್ದೇಶನಾಲಯ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT