ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದಗ್ರಹಣಕ್ಕೂ ಮುನ್ನ ಹೋಮ

ಕೆಪಿಸಿಸಿ ನೂತನ ಕಚೇರಿಯಲ್ಲಿ ಡಿಕೆಶಿ ನೇತೃತ್ವದಲ್ಲಿ ವಿಶೇಷ ಪೂಜೆ
Last Updated 14 ಜೂನ್ 2020, 20:08 IST
ಅಕ್ಷರ ಗಾತ್ರ

ಬೆಂಗಳೂರು: ಕ್ವೀನ್ಸ್ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಪ್ರದೇಶ ಕಾಂಗ್ರೆಸ್‌ ಸಮಿತಿಯ (ಕೆಪಿಸಿಸಿ) ನೂತನ ಕಟ್ಟಡದ ಸಭಾಂಗಣದಲ್ಲಿ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಭಾನುವಾರ ಬೆಳಿಗ್ಗೆ ಹೋಮ ಹವನ ನಡೆಯಿತು.

ಎರಡು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡಿದ್ದ ಈ ಕಟ್ಟಡದಲ್ಲಿ ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರಾಗಿ ಜುಲೈ 2ರಂದು ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ. ಈ ಕಾರಣದಿಂದಲೇ ಪೂಜಾ ಕಾರ್ಯಗಳನ್ನು ನೆರವೇರಿಸಿದ್ದಾರೆ.

ಜ್ಯೋತಿಷಿ ನಾಗರಾಜ್‌ ಆರಾಧ್ಯ ಮತ್ತು ಅರ್ಚಕ ಮಹಾಂತೇಶ್‌ ಭಟ್‌ ಅವರು ಗಣಪತಿ ಹೋಮ, ವಾಸ್ತು ಹೋಮ, ರಕ್ಷೋಜ್ಞ ಹೋಮ, ಭೂವರಾಹ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಅಷ್ಟಲಕ್ಷ್ಮಿ ಹೋಮ, ಗಾಯಿತ್ರಿ ಹೋಮ, ಪೂರ್ಣಾಹುತಿ ಬಳಿಕ ಮಹಾಮಂಗಳಾರತಿ ಪೂಜೆ ನಡೆಸಿಕೊಟ್ಟರು.

‘ಎಲ್ಲ ವಿಘ್ನಗಳ ನಿವಾರಣೆಗಾಗಿ ಶುಭ ಮುಹೂರ್ತದಲ್ಲಿ ಪೂಜೆ ಮಾಡಿದ್ದೇವೆ. ಎರಡು ವರ್ಷಗಳಿಂದ ಕಟ್ಟಡದ ಕೆಲಸ ನಿಂತಿದೆ. ಎಲ್ಲರ ಒಳಿತಿಗಾಗಿ ಹೋಮ ಮಾಡಿದ್ದೇವೆ. ರಾಜ್ಯ ಆದಷ್ಟು ಬೇಗ ಕೊರೊನಾದಿಂದ ಮುಕ್ತವಾಗಲಿ’ ಎಂದು ಶಿವಕುಮಾರ್‌ ಆಶಿಸಿದರು.

‘ಸದ್ಯದಲ್ಲೇ ಪದಗ್ರಹಣದ ದಿನ ನಿಗದಿ ಮಾಡುತ್ತೇನೆ. ಈ ಬಗ್ಗೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿ, ತೀರ್ಮಾನ ತೆಗೆದು
ಕೊಳ್ಳುತ್ತೇನೆ’ ಎಂದೂ ಹೇಳಿದರು.

ಪೂಜಾ ಕಾರ್ಯದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಮಲಿಂಗಾರೆಡ್ಡಿ, ಎಸ್‌.ಆರ್‌. ಪಾಟೀಲ, ಸಂಸದ ಡಿ.ಕೆ. ಸುರೇಶ್, ಮುದ್ದಹನುಮೇಗೌಡ, ಪ್ರಿಯಾಂಕ್‌ ಖರ್ಗೆ ಮತ್ತಿತರರು ಇದ್ದರು.

ಸತೀಶ ಜಾರಕಿಹೊಳಿ ಗೈರು: ಹೋಮ ಹಾಗೂ ವಿಶೇಷ ಪೂಜೆ ವೇಳೆ ಕೆಪಿಸಿಸಿಯ ಮೂವರು ಕಾರ್ಯಾಧ್ಯಕ್ಷರ ಪೈಕಿ ಸಲೀಂ ಅಹಮ್ಮದ್ ಮತ್ತು ಈಶ್ವರ್ ಖಂಡ್ರೆ ಹಾಜರಿದ್ದರೆ, ಸತೀಶ ಜಾರಕಿಹೊಳಿ ಗೈರಾದರು.

ಸತೀಶ ಜಾರಕಿಹೊಳಿ ತಮ್ಮ ಭಿನ್ನ ಸಿದ್ಧಾಂತದ ಮೂಲಕ, ಬುದ್ಧ, ಅಂಬೇಡ್ಕರ್‌ ತತ್ವ ಪಾಲಿಸುವ ರಾಜಕಾರಣಿಯಾಗಿ ಗುರುತಿಸಿಕೊಂಡಿ
ದ್ದಾರೆ. ಹೀಗಾಗಿ, ವೈದಿಕ ವಿಧಿಗಳಾದ ಹೋಮ, ಪೂಜೆಗೆ ಗೈರಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT