ಗುರುವಾರ , ಏಪ್ರಿಲ್ 9, 2020
19 °C
ಸರ್ಕಾರಕ್ಕೂ ಮರುಪಾವತಿಯಾಗದ ಹಣ

ಪರಿಸರ ಪ್ರವಾಸೋದ್ಯಮ ಬಳಕೆಯಾಗದ ₹11.90 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯಾವುದೇ ಪೂರ್ವತಯಾರಿ ನಡೆಸದೆ ಇಕೊ ಟೂರಿಸಂ (ಪರಿಸರ ಪ್ರವಾಸೋದ್ಯಮ) ಯೋಜನೆಗಳನ್ನು ಘೋಷಿಸಿದ್ದರಿಂದ ₹11.90 ಕೋಟಿ ಅನುದಾನ ಹಾಗೆಯೇ ಉಳಿದಿದೆ. 

ಇದರಲ್ಲಿ ರಾಜ್ಯ ಸರ್ಕಾರದಿಂದ ಹಣಕಾಸು ಒದಗಿಸಿದ್ದ ನಾಲ್ಕು ಯೋಜನೆಗಳು ಹಾಗೂ ಕೇಂದ್ರ ಸರ್ಕಾರ ಹಣಕಾಸು ಒದಗಿಸಿದ್ದ ಎರಡು ಯೋಜನೆಗಳು ಸೇರಿವೆ. ಅನುದಾನ ಸಮರ್ಪಕ ಬಳಕೆ ಮಾಡದೇ ಇರುವುದಕ್ಕೆ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ಆಕ್ಷೇಪ ವ್ಯಕ್ತಪಡಿಸಿದೆ.

* ಬನ್ನೇರುಘಟ್ಟದ‌ಲ್ಲಿ ರಾತ್ರಿ ಸಫಾರಿ ಯೋಜನೆಗಾಗಿ 2009–11ರಲ್ಲಿ ₹9.50 ಕೋಟಿ ಬಿಡುಗಡೆ ಮಾಡಲಾಯಿತು. ಸಾರ್ವಜನಿಕ ವಿರೋಧದ ಹಿನ್ನೆಲೆಯಲ್ಲಿ ಈ ಯೋಜನೆ ಕೈಬಿಡಲಾಯಿತು. ಬಳಕೆಯಾಗದೆ ಉಳಿದಿದ್ದ ₹8.70 ಕೋಟಿಯನ್ನು ಅರಣ್ಯ ಕ್ಯಾಂಪ್‌ ಹಾಗೂ ಹಾದಿ ನಿರ್ಮಾಣಕ್ಕೆ ಬಳಸಲು ತೀರ್ಮಾನಿಸಲಾಯಿತು. ನಾಲ್ಕು ಕಡೆಗಳಲ್ಲಿ ಅರಣ್ಯ ಕ್ಯಾಂಪ್‌ ನಿರ್ಮಾಣಕ್ಕೆ ₹2.75 ಕೋಟಿ ಹಂಚಿಕೆ ಮಾಡಲಾಗಿತ್ತು. 2018ರ ಸೆಪ್ಟೆಂಬರ್‌ ವರೆಗೆ ₹61.50 ಲಕ್ಷ ಮಾತ್ರ ಖರ್ಚು ಮಾಡಲಾಗಿತ್ತು.

* ಬಂಡೀಪುರ ಸಫಾರಿ ರೆಸಾರ್ಟಿನಲ್ಲಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ₹2.35 ಕೋಟಿ ಹಂಚಿಕೆ ಮಾಡಲಾಗಿತ್ತು. ಈ ಪೈಕಿ ₹46.31 ಲಕ್ಷವಷ್ಟೇ ಖರ್ಚಾಗಿದೆ. ಯಾವ ಕಾರಣಕ್ಕೆ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂಬ ಬಗ್ಗೆಯೂ ಉಲ್ಲೇಖ ಇಲ್ಲ.

* ಸಾಹಸ ಕ್ರೀಡೆ ಪ್ರವಾಸೋದ್ಯಮದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ₹2.75 ಕೋಟಿಯನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿತು. ಕ್ರೀಡಾ ಸ್ಥಳಗಳು ಅರಣ್ಯದಲ್ಲಿ ಇದ್ದ ಕಾರಣ ಇದಕ್ಕೆ ಅನುಮತಿ ಸಿಗಲಿಲ್ಲ. ಹೀಗಾಗಿ, ಅನುದಾನವನ್ನು ನಿಶ್ಚಿತ ಠೇವಣಿಯಲ್ಲಿ ಇಡಲಾಯಿತು. ಅನುದಾನ ಹಾಗೂ ಬಡ್ಡಿಯ ₹3.40 ಕೋಟಿ ಮೊತ್ತವನ್ನು ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಲು ಜಂಗಲ್‌ ಲಾಡ್ಜಸ್‌ ಹಾಗೂ ರೆಸಾರ್ಟ್ಸ್‌ 2017ರಲ್ಲಿ ತೀರ್ಮಾನಿಸಿತು. ಆದರೆ, ಈವರೆಗೆ ಹಣ ಮರುಪಾವತಿ ಆಗಿಲ್ಲ.

* ಬೆಂಗಳೂರಿನ ತುರಹಳ್ಳಿ ಅರಣ್ಯದಲ್ಲಿ ಇಕೊ ಟೂರಿಸಂ ಅಭಿವೃದ್ಧಿಗಾಗಿ 3 ಕಿ.ಮೀ. ಉದ್ದದ ಕಾಂಪೌಂಡ್‌ ನಿರ್ಮಾಣಕ್ಕಾಗಿ 2015ರಲ್ಲಿ ₹1 ಕೋಟಿ ಬಿಡುಗಡೆಗೊಳಿಸಲಾಗಿತ್ತು. ಭೂವಿವಾದದ ಕಾರಣ ಈ ಯೋಜನೆ ಅನುಷ್ಠಾನವಾಗಲಿಲ್ಲ. ಇಕೊ ಟೂರಿಸಂ ಅಭಿವೃದ್ಧಿ ಮಂಡಳಿಯು ₹3.03 ಲಕ್ಷವನ್ನು ಕಂಪನಿಗೆ ಮರುಪಾವತಿಸಿತು. ಆದರೆ, ಕಂಪನಿಯು ಈ ಮೊತ್ತವನ್ನು ಸರ್ಕಾರಕ್ಕೆ ನೀಡಿಲ್ಲ.

* ಭದ್ರಾ ಎರಡನೇ ಹಂತದಲ್ಲಿ ಇಕೊ ಟೂರಿಸಂ ಅಭಿವೃದ್ಧಿ ಯೋಜನೆಯಡಿ ನೀರು ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೆ ₹1 ಕೋಟಿಯನ್ನು ಬಿಡುಗಡೆ ಮಾಡಲಾಗಿತ್ತು. ಎರಡು ಸ್ಥಳಗಳಲ್ಲಿ ಮಾತ್ರ ಸೌರ ಸ್ಥಾವರಗಳ ಸ್ಥಾಪನೆಗೆ ₹15 ಲಕ್ಷ ಖರ್ಚು ಮಾಡಲಾಗಿತ್ತು. ಉಳಿದ ಮೊತ್ತ ಇಲ್ಲಿಯವರೆಗೆ ಸರ್ಕಾರಕ್ಕೆ ಮರುಪಾವತಿ ಆಗಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು