ಶನಿವಾರ, ಸೆಪ್ಟೆಂಬರ್ 25, 2021
22 °C
ಸರ್ಕಾರ, ವಿದ್ಯಾರ್ಥಿಗಳು ನಿರಾಳ

450 ಎಂಜಿನಿಯರಿಂಗ್‌ ಸೀಟು ವಾಪಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು (ಎಐಸಿಟಿಇ) ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಕಡಿತ ಮಾಡಿದ್ದ 450 ಸೀಟುಗಳನ್ನು ಮರಳಿ ನೀಡಿದ್ದು, ವೃತ್ತಿಪರ ಕೋರ್ಸ್‌ಗಳ ಆಕಾಂಕ್ಷಿಗಳು ನಿಟ್ಟುಸಿರು ಬಿಡುವಂತಾಗಿದೆ.

ಈ ಕಾಲೇಜುಗಳಲ್ಲಿ ಪರಿಶೀಲನೆ ನಡೆಸಿದ್ದ ಎಐಸಿಟಿಇ ತಜ್ಞರ ತಂಡ, ಮೂಲಸೌಕರ್ಯ ಇಲ್ಲದ ಕಾರಣಕ್ಕೆ ಸೀಟು ಕಡಿತಕ್ಕೆ ಶಿಫಾರಸು ಮಾಡಿತ್ತು. ಆದರೆ ಕೊರತೆಗಳನ್ನು ನಿವಾರಿಸುವ ಭರವಸೆಯನ್ನು ಸರ್ಕಾರ ನೀಡಿರುವ ಮೇರೆಗೆ 2019–20ನೇ ಶೈಕ್ಷಣಿಕ ಸಾಲಿಗೆ ಹಿಂದೆಗೆದುಕೊಂಡಿದ್ದ ಸೀಟುಗಳನ್ನು ವಾಪಸ್‌ ನೀಡಲಾಗಿದೆ.

‘ಒಂದು ವರ್ಷದ ಮಟ್ಟಿಗೆ ಈ ರಿಯಾಯಿತಿ ನೀಡಲಾಗಿದೆ. ಅಷ್ಟರೊಳಗೆ ಕೊರತೆಗಳನ್ನು ಸರಿಪಡಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ’ ಎಂದು ಎಐಸಿಟಿಇ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜ್ಯದೆಲ್ಲೆಡೆ ಇರುವ 11 ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಪೈಕಿ 4 ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸೇರ್ಪಡೆ ಪ್ರಮಾಣವನ್ನು ತಗ್ಗಿಸಲು ಹಾಗೂ ಒಂದು ಕಾಲೇಜಿಗೆ ಯಾವುದೇ ವಿದ್ಯಾರ್ಥಿಯನ್ನೂ ದಾಖಲಿಸಿಕೊಳ್ಳದಂತೆ ಸೂಚನೆ ನೀಡಲಾಗಿತ್ತು. ಇದರಿಂದ ಒಟ್ಟು ಇರುವ 2,400 ಸೀಟುಗಳ ಪೈಕಿ 450 ಸೀಟುಗಳು ಕಡಿತವಾಗುವುದಿತ್ತು. 

ಆದರೆ ಎಐಸಿಟಿಇ ತೆಗೆದುಕೊಂಡಿರುವ ಈ ಕ್ರಮದಿಂದ ಕೆಲವು ಖಾಸಗಿ ಎಂಜಿನಿಯರಿಂಗ್‌ ಕಾಲೇಜ್‌ಗಳು ಸಿಟ್ಟಿಗೆದ್ದಿವೆ. ಇದು ಮಲತಾಯಿ ಧೋರಣೆಯಾಗುತ್ತದೆ ಎಂದು ಅವುಗಳು ಹೇಳಿವೆ.

ಪಾರಾದ ಕಾಲೇಜುಗಳು

ಹಾಸನ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜ್‌ನ ಶೇ 50ರಷ್ಟು ಸೀಟುಗಳಿಗೆ ಸಂಚಕಾರ ಬಂದಿತ್ತು. ಹಾವೇರಿ ಕಾಲೇಜಿನ ಶೇ 25, ಕೆ.ಆರ್‌.ಪೇಟೆ ಕಾಲೇಜಿಗೆ ಶೇ 10ರಷ್ಟು ಸೀಟುಗಳು ಭರ್ತಿ ಮಾಡುವಂತಿರಲಿಲ್ಲ. ಚಾಮರಾಜನಗರ ಕಾಲೇಜಿಗೆ ನೇಮಕಾತಿಯನ್ನೇ ನಿಷೇಧಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು