ಶುಕ್ರವಾರ, ಫೆಬ್ರವರಿ 26, 2021
30 °C
ಜೆ.ಕೆ. ಮೈದಾನದಲ್ಲಿ ಮತ್ಸ್ಯಲೋಕದ ಅನಾವರಣ

ಮನಸೆಳೆಯುವ ಮತ್ಸ್ಯಮೇಳ: ದಸರಾ ಸಂಭ್ರಮಕ್ಕೆ ಮತ್ತೊಂದು ಮೆರುಗು

ಬಾಲಚಂದ್ರ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕಣ್ಮನ ಸೆಳೆಯುವ ಅಲಂಕಾರಿಕಾ ಮೀನುಗಳು, ಮೀನುಗಾರಿಕೆ ಕುರಿತ ಸಂಶೋಧನೆ, ಮಾಹಿತಿ ಮತ್ತು ತಂತ್ರಜ್ಞಾನದ ಅನಾವರಣ,  ದೇಶ– ವಿದೇಶದ ತರಹೇವಾರಿ ಮೀನುಗಳ ಅನಾವರಣ...

ದಸರಾ ಅಂಗವಾಗಿ ಜೆ.ಕೆ. ಮೈದಾನದ ಆವರಣದಲ್ಲಿ ಆರಂಭವಾಗಿರುವ ‘ಮತ್ಸ್ಯಮೇಳ’ದಲ್ಲಿ ಈ ದೃಶ್ಯ ಕಣ್ತುಂಬಿಕೊಳ್ಳಬಹುದು. ಆರು ದಿನಗಳ ಕಾಲ ನಡೆಯುವ ಮತ್ಸ್ಯಮೇಳಕ್ಕೆ ರಾಜ್ಯ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಂಗಳವಾರ ಟೇಪು ಕತ್ತರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.

ಹತ್ತು ಹಲವು ವಿಶೇಷತೆಗಳು: ‘ಕಳೆದ ವರ್ಷ ನಡೆದ ದಸರಾದ ಮೊದಲ ಮತ್ಸ್ಯಮೇಳದಲ್ಲಿ 40 ಅಕ್ವೇರಿಯಂಗಳನ್ನು ಇಡಲಾಗಿತ್ತು.  ಈ ವರ್ಷ 60ಕ್ಕೂ ಹೆಚ್ಚು ಅಕ್ವೇರಿಯಂ ಅನ್ನು ಇಡಲಾಗಿದ್ದು, 70ಕ್ಕೂ ಹೆಚ್ಚಿನ ಮೀನುಗಳನ್ನು ಕಾಣಬಹುದಾಗಿದೆ’ ಎಂದು ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸಿದ್ದಯ್ಯ ತಿಳಿಸಿದರು.

ಹೆಚ್ಚು ಜನರನ್ನು ಆಕರ್ಷಿಸುವ ಜೊತೆಗೆ, ಮೀನುಗಾರಿಕಾ ಕೃಷಿ ಕುರಿತಂತೆ ಜನರಿಗೆ ಒಂದೇ ಸೂರಿನ ಅಡಿಯಲ್ಲಿ ಸಮಗ್ರ ಮಾಹಿತಿ ನೀಡಲು ಈ ಮೇಳ ಯಶಸ್ವಿಯಾಗಲಿದೆ. ಕಳೆದ ವರ್ಷ ‘ಸುರಂಗ ಮಾರ್ಗ ಮಾದರಿ’ ಅಕ್ವೇರಿಯಂಗಳನ್ನು ಇಡಲಾಗಿತ್ತು. ಈ ಬಾರಿ ದೋಣಿಯ ಪ್ರವೇಶದ್ವಾರವಿದ್ದು, ಒಳಭಾಗದಲ್ಲಿ ‘ಗುಹೆಯ ಮಾದರಿ’ಯಲ್ಲಿ ಅಕ್ವೇರಿಯಂಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ ಎಂದು ಅವರು ತಿಳಿಸಿದರು.

ಅಕ್ವೇರಿಯಂಗಳ ಲೋಕ: ಎಲಿಫೆಂಟ್‌ ನೋಸ್‌ ಫಿಶ್‌, ಬಟರ್‌ ಫ್ಲೈಶ್‌, ರೆಡ್‌ಮೆಲನ್‌ ಡಿಸ್ಕಸ್‌, ರೀಗಲ್‌ ಟ್ಯಾಂಗ್, ಬೇಟಾ ಫಿಶ್‌, ಲಯನ್‌ ಫಿಶ್‌, ಜಿಯೋಫೆಗಸ್‌, ಸ್ಟಿಂಗ್‌ ರೇ, ಪಲ್ಲು ಡೋರಿಯಂ, ನಕ್ಷತ್ರಮೀನು, ಪ್ಯಾರೊಟ್‌ ಫಿಶ್‌, ಬಾಲಾ ಶಾರ್ಕ್‌ ಸುಮಾರು 70ಕ್ಕೂ ಹೆಚ್ಚು ಜಾತಿಯ ಮೀನುಗಳು ಮೇಳದಲ್ಲಿವೆ. ಫ್ರೆಶ್‌ ವಾಟರ್‌ ಅಕ್ವೇರಿಯಂ, ಸಾಲ್ಟ್‌ ವಾಟರ್‌ ಅಕ್ವೇರಿಯಂ, ಪ್ಲ್ಯಾಂಟೆಡ್‌ ಅಕ್ವೇರಿಯಂ, ಗ್ರ್ಯಾವಿಟಿ ಟ್ಯಾಂಕ್‌ ಕೂಡ ಮತ್ಸ್ಯಮೇಳದಲ್ಲಿ ಕಾಣಬಹುದಾಗಿದೆ.

ಉಳಿದಂತೆ ಹೊರರಾಜ್ಯ ಹಾಗೂ ಹೊರದೇಶದಿಂದ ತರಲಾದ ‘ಸ್ಟಾರ್‌ ಫಿಶ್‌’, ‘ಪೆಪ್ಪರ್‌ ಫಿಶ್‌’,‘ಮೊರೈಲ್‌’, ‘ಪ್ಯಾರಟ್‌’, ‘ಡಿಸ್ಪರ್ಸ್‌’, ಈ ಸಲದ ಮತ್ಸ್ಯಮೇಳದದಲ್ಲಿ ಪ್ರವಾಸಿಗರು ಕಣ್ಮುಂಬಿಕೊಳ್ಳಬಹುದು.

ಮೀನುಗಾರಿಕೆ ಬಗ್ಗೆಯೂ ಮಾಹಿತಿ: ರೈತರು ತಮ್ಮ ಜಾಗದಲ್ಲಿ ಮೀನುಗಾರಿಕೆ ಮೂಲಕ ಹೆಚ್ಚಿನ ಆದಾಯ ಪಡೆಯಲು ಸಹಕಾರಿಯಾಗುವಂತೆ ಸಮಗ್ರ ಮಾಹಿತಿ ಈ ಮೇಳದಲ್ಲಿ ಲಭ್ಯವಿದೆ.

ಸಮಗ್ರ ಮೀನುಗಾರಿಕೆ ಕೃಷಿ, ಪಂಜರದಲ್ಲಿ ಮೀನು ಕೃಷಿ, ಮೀನಿನ ಜೊತೆ ಕೋಳಿ, ಬಾತುಕೋಳಿ, ಹಸು ಸಾಕಾಣಿಕೆ ಕುರಿತಂತೆಯೂ ಇಲ್ಲಿರುವ ಸಿದ್ಧ ಮಾದರಿ ಸಮೇತ ಮಾಹಿತಿ ತಿಳಿದುಕೊಳ್ಳಲು ಅವಕಾಶವಿದೆ. ಕೃಷಿ ಭೂಮಿ ಹೊಂದಿರದ ವ್ಯಕ್ತಿಗಳು ಕೂಡ ಅಣೆಕಟ್ಟಿನ ಹಿನ್ನೀರು ಪ್ರದೇಶ, ನದಿ ಭಾಗದಲ್ಲಿ ‘ಪಂಜರದ ಮೀನುಗಾರಿಕೆ’ ಮಾಡುವ ಮೂಲಕ ಆದಾಯ ಗಳಿಸಿಕೊಳ್ಳಲು ಸಾಧ್ಯವಿದೆ ಎಂಬುದಕ್ಕೆ ಇಲ್ಲಿ ಉದಾಹರಣೆಯಿದೆ.

ಒಂದೇ ಕೊಳದಲ್ಲಿ ಏಕಕಾಲಕ್ಕೆ ಆರು ಜಾತಿಯ ಮೀನುಗಳನ್ನು ಬಿಟ್ಟು ಮೀನುಗಾರಿಕೆ ಮಾಡುವ ವಿಧಾನವನ್ನು ಇಲ್ಲಿ ತಿಳಿಸಿಕೊಡಲಾಗಿದೆ. ಅದರಲ್ಲಿ ಮೀನು ಮರಿ ಬೆಳೆದು ರೈತರಿಗೆ ಲಾಭ ಮಾಡುವ ವಿಧಾನವನ್ನು ಇಲ್ಲಿ ತಿಳಿಸಿಕೊಡಲಾಗುತ್ತದೆ. ಈ ಕೃಷಿಯಲ್ಲಿ ಯಶಸ್ವಿಯಾದ ಸಾಧಕರ ಚಿತ್ರ ಸಮೇತ ಸಾಧನೆಯನ್ನು ಮೇಳದಲ್ಲಿ ಬಿಂಬಿಸಲಾಗಿದೆ.

ಉಳಿದಂತೆ ಮೀನು ಸಾಕಾಣಿಕೆಯ ಆರ್ಥಿಕತೆ, ಅವುಗಳ ವಾಸಸ್ಥಾನ, ಆರ್ಥಿಕತೆ, ಸರ್ಕಾರದಿಂದ ಸಿಗುವ ಸಹಾಯಧನ, ಸಮಗ್ರ ಮೀನು ಕೃಷಿ ಪ್ರಾತ್ಯಕ್ಷತೆಯನ್ನು ಇಲ್ಲಿಗೆ ಭೇಟಿ ನೀಡಿ ಕಣ್ತುಂಬಿಕೊಳ್ಳಬಹುದು. ಮೇಳದ ಹೊರಭಾಗದಲ್ಲಿ ಕರಾವಳಿ ಸ್ಪೆಷಲ್‌ ಮಳಿಗೆಯಿದ್ದು, ತಾಜಾ ಮೀನಿನ ಆಹಾರವನ್ನು ಸವಿಯಬಹುದು.

ಮೇಳದಲ್ಲಿ ಅಕ್ವೇರಿಯಂ ಬಗ್ಗೆ ಮಾಹಿತಿ ಹಾಗೂ ಖರೀದಿಗೂ ಮೇಳದಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ. ಅ.1ರಿಂದ ಅ.6ರವರೆಗೆ ಈ ಮೇಳ ನಡೆಯಲಿದ್ದು, ಉಚಿತ ಪ್ರವೇಶವಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು