ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನಭಾಗ್ಯ ಅವ್ಯವಸ್ಥೆ ಅನಾವರಣ

ತೂಕದಲ್ಲಿ ವಂಚನೆ ಪತ್ತೆಹಚ್ಚಿದ ರಾಜ್ಯ ಆಹಾರ ಆಯೋಗ
Last Updated 12 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಳಗಾವಿ: ನ್ಯಾಯಬೆಲೆ ಅಂಗಡಿಗಳಲ್ಲಿ ಕಿಲೋದಲ್ಲಿ 100 ಗ್ರಾಂ ಕಡಿಮೆ ನೀಡಿ ತೂಕದಲ್ಲಿ ಮೋಸ; ಅಕ್ಕಿ 7 ಕಿಲೋ ಬದಲು 5 ಕಿಲೋ ನೀಡಿಕೆ; ಕಿಲೋಗೆ ₹ 38 ಬೆಲೆಯ ತೊಗರಿಬೇಳೆಗೆ ₹ 70 ವಸೂಲಿ!

ಮತ್ತೊಂದೆಡೆ, ಸಗಟು ಗೋದಾಮುಗಳಲ್ಲಿರುವ ಆಹಾರಧಾನ್ಯಗಳು ಇಲಿ, ಹೆಗ್ಗಣಗಳ ಪಾಲು. ಉಗ್ರಾಣದಲ್ಲಿ ನುಸಿಹುಳು, ಜೇಡರ ಬಲೆ. ಗೊಬ್ಬರದ ಜೊತೆಗೇ ಆಹಾರ ಪದಾರ್ಥಗಳ ಸಂಗ್ರಹ.

‘ಅನ್ನಭಾಗ್ಯ’ ಯೋಜನೆಯ ಅಕ್ಕಿ, ತೊಗರಿಬೇಳೆಗೆ ಕನ್ನ ಹಾಕಿ ಲೂಟಿ ಹೊಡೆಯಲು ಖದೀಮರು ಬಳಸುತ್ತಿರುವ ನಾನಾ ವಿಧಾನಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಪಡಿತರ ವಸ್ತುಗಳು ಹಾಳಾಗಿ ಕೋಟ್ಯಂತರ ರೂಪಾಯಿ ನಷ್ಟವಾದ ಪ್ರಕರಣಗಳ ಈ ‘ವ್ಯವಸ್ಥೆ’ಯನ್ನು ರಾಜ್ಯ ಆಹಾರ ಆಯೋಗ ಪತ್ತೆ ಮಾಡಿದೆ.

ಬೆಂಗಳೂರು, ರಾಯಚೂರು, ವಿಜಯಪುರ, ಬೀದರ್‌, ಚಾಮರಾಜನಗರ, ಉತ್ತರಕನ್ನಡ ಮತ್ತು ಉಡುಪಿ ಜಿಲ್ಲೆಗಳ 102 ನ್ಯಾಯಬೆಲೆ ಅಂಗಡಿಗಳು ಮತ್ತು 12 ಗೋದಾಮುಗಳಿಗೆ ದಿಢೀರ್ ಭೇಟಿ ನೀಡಿ ಆಯೋಗ ಸಿದ್ಧಪಡಿಸಿರುವ ವರದಿಯಲ್ಲಿ ಈ ಅಂಶಗಳಿವೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಂತೆ ವಿಧಾನಮಂಡಲದಲ್ಲಿ ಮಂಡಿಸಲು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರಿಗೆ ಆಯೋಗ ಈ ವರದಿಯನ್ನು ಸಲ್ಲಿಸಿದ್ದು, ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆಯ ದುರುಪಯೋಗ, ಅವ್ಯವಹಾರಗಳಲ್ಲಿ ಭಾಗಿಯಾದ ನ್ಯಾಯಬೆಲೆ ಅಂಗಡಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ವರದಿಯಲ್ಲಿ ಆಯೋಗ ಶಿಫಾರಸು ಮಾಡಿದೆ.

ಎಲ್ಲಿ, ಏನು?: ಬೆಂಗಳೂರಿನ ಯಶವಂತಪುರದಲ್ಲಿ ಕೆಎಫ್‌ಸಿಎಸ್‌ಸಿಯ ಅಧೀನದಲ್ಲಿರುವ ಎರಡು ಗೋದಾಮುಗಳ ಅಸಮರ್ಪಕ ನಿರ್ವಹಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗ, ಸಂಬಂಧಿಸಿದ ಅಧಿಕಾರಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರದ ಕಾರ್ಯದರ್ಶಿಗೆ ಸೂಚಿಸಿದೆ.

ಬೀದರ್‌ ಗ್ರಾಮಾಂತರ ಗೋದಾಮಿನಲ್ಲಿ ಅಕ್ಕಿಯೂ ಸೇರಿದಂತೆ ಎಲ್ಲ ದಾಸ್ತಾನುಗಳಲ್ಲಿ ನುಸಿಹುಳು ತುಂಬಿಕೊಂಡಿತ್ತು. ಅಲ್ಲದೆ, ಇಲ್ಲಿ ಅವಧಿ ಮೀರಿದ 482 ಕ್ವಿಂಟಲ್‌ ತೊಗರಿಬೇಳೆ, ಕಾಳು ಒಡೆದು ಹಿಟ್ಟಾಗಿರುವ 719 ಕ್ವಿಂಟಲ್‌ ತೊಗರಿಬೇಳೆಯನ್ನು ಆಯೋಗ ಪತ್ತೆ ಮಾಡಿದೆ. ಇದೇ ಜಿಲ್ಲೆಯ ಇನ್ನೊಂದು ಗೋದಾಮಿನಲ್ಲಿ 150 ಕ್ವಿಂಟಲ್‌ ಕಳಪೆ ಗುಣಟ್ಟದ ಗೋಧಿ ಮತ್ತು 380 ಕಿಲೋ ಅವಧಿ ಮೀರಿದ ತೊಗರಿ ಬೇಳೆ ಪ್ಯಾಕೇಟ್‌ ಸಿಕ್ಕಿದೆ.

ಕಾರವಾರದ ಕೆಎಫ್‌ಸಿಎಸ್‌ಸಿ ಗೋದಾಮಿನಲ್ಲಿ ಬಳಕೆಗೆ ಅನರ್ಹವೆಂದು ಪ್ರಮಾಣ ಪತ್ರ ನೀಡಲಾಗಿದ್ದ, 2016ರಿಂದ ದಾಸ್ತಾನಿನಲ್ಲಿದ್ದ ಗೋಧಿ, ಉಪ್ಪು, ತಾಳೆಎಣ್ಣೆ ಕಂಡುಬಂದಿದೆ. ಉಡುಪಿ ಜಿಲ್ಲೆಯ ಗೋದಾಮಿನಲ್ಲಿ ಪೂರ್ಣ ಹಾಳಾದ ಸ್ಥಿತಿ 2 ಸಾವಿರ ಕ್ವಿಂಟಲ್‌ ಗೋಧಿ ಪತ್ತೆಯಾಗಿದೆ ಎಂದು ಆಯೋಗ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಚಾಮರಾಜನಗರ ಜಿಲ್ಲೆಯ ಸಗಟು ಕೇಂದ್ರದಲ್ಲಿ ಆಹಾರ ಪದಾರ್ಥಗಳ ಜೊತೆಗೇ ಗೊಬ್ಬರವನ್ನೂ ಸಂಗ್ರಹಿಸಿಡಲಾಗಿದೆ. ರಾಯಚೂರಿನ ಗೋದಾಮಿನಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಆಹಾರಧಾನ್ಯಗಳನ್ನು ದಾಸ್ತಾನಿಡಲಾಗಿದೆ ಎಂದು ಈ ವರದಿಯಲ್ಲಿದೆ.

ನ್ಯಾಯಬೆಲೆ ಅಂಗಡಿಗಳ ಸ್ಥಿತಿ: ತೂಕದ ಯಂತ್ರಗಳಲ್ಲಿ ಮೋಸ, ಮುಕ್ತ ಮಾರುಕಟ್ಟೆಯ ವಸ್ತುಗಳನ್ನು ಒತ್ತಾಯಪೂರ್ವಕವಾಗಿ ಮಾರುವುದು, ನ್ಯಾಯ ಕೇಳಿದರೆ ಬೆದರಿಸುವುದು ಮತ್ತಿತರ ಸಂಗತಿಗಳನ್ನೂ ಆಯೋಗ ವರದಿಯಲ್ಲಿ ಪ್ರಸ್ತಾಪಿಸಿದೆ.

ಕಡುಬಡವರ ಅಂತ್ಯೋದಯ ಅನ್ನ ಯೋಜನೆ (ಎಎವೈ) ಪಡಿತರ ಚೀಟಿಗಳಿಗೆ ಉಚಿತವಾಗಿ 35 ಕಿಲೋ ಅಕ್ಕಿ ನೀಡಬೇಕು. ಆದರೆ, ಚಾಮರಾಜನಗರದ ನ್ಯಾಯಬೆಲೆ ಅಂಗಡಿಯೊಂದರಲ್ಲಿ ನುಂಗಣ್ಣರು, 20 ಕೆ.ಜಿ. ಕೊಟ್ಟು ₹ 50 ವಸೂಲಿ ಮಾಡುತ್ತಿದ್ದರು ಎಂಬ ಅಂಶವೂ ವರದಿಯಲ್ಲಿದೆ!

ಪಡಿತರ ವ್ಯವಸ್ಥೆ ಮೇಲೆ ಕಣ್ಣು

ಆಹಾರ ಭದ್ರತಾ ಕಾಯ್ದೆಯನ್ವಯ ಎಲ್ಲ ರಾಜ್ಯ ಸರ್ಕಾರಗಳು ಸ್ವತಂತ್ರ ರಾಜ್ಯ ಆಹಾರ ಆಯೋಗವನ್ನು ರಚಿಸಬೇಕಿದೆ. ಕರ್ನಾಟಕದಲ್ಲಿ 2017ರ ಜುಲೈ 5ರಂದು ಡಾ. ಎನ್‌. ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ಐವರು ಸದಸ್ಯರನ್ನೊಳಗೊಂಡ ಆಯೋಗ ರಚನೆಯಾಗಿದೆ. ಪಡಿತರ ವ್ಯವಸ್ಥೆಯ ಮೇಲೆ ಕಣ್ಣಿಡುವ ಜೊತೆಗೆ ಕಾಯ್ದೆಯ ಸಮರ್ಪಕ ಅನುಷ್ಠಾನ ಆಯೋಗದ ಕೆಲಸ.

ಅದರನ್ವಯ ಆಯೋಗದ ಸದಸ್ಯರು, ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಅನ್ನ ಭಾಗ್ಯ’ ಯೋಜನೆಯ ಅನುಷ್ಠಾನವನ್ನು ಪ್ರತ್ಯಕ್ಷವಾಗಿ ಪರಿಶೀಲಿಸಿ, ಲೋಪದೋಷಗಳನ್ನು ಪಟ್ಟಿ ಮಾಡಿದ್ದಾರೆ. ಅಲ್ಲದೆ, ಅವುಗಳ ನಿವಾರಣೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

ಆಯೋಗದ ಪ್ರಮುಖ ಶಿಫಾರಸು

*ಗೋದಾಮುಗಳಲ್ಲಿ ಹಾಳಾದ ಆಹಾರಧಾನ್ಯಗಳ ನಷ್ಟವನ್ನು ಅಧಿಕಾರಿಗಳಿಂದ ವಸೂಲು ಮಾಡಬೇಕು

*2017 ಜನವರಿಯಿಂದ 2018ರ ಜನವರಿವರೆಗಿನ ಆಹಾರಧಾನ್ಯಗಳ ಹಂಚಿಕೆಯನ್ನು ಮೂರನೇ ಸಂಸ್ಥೆಯಿಂದ ತನಿಖೆ ನಡೆಸಬೇಕು

*7 ಕೆ.ಜಿ. ಅಕ್ಕಿ ಬದಲು ಉತ್ತರ ಕರ್ನಾಟಕದಲ್ಲಿ 5 ಕೆ.ಜಿ. ಅಕ್ಕಿ ಮತ್ತು 2 ಕಿಲೋ ಗೋಧಿ ಅಥವಾ ಜೋಳ, ದಕ್ಷಿಣ ಕರ್ನಾಟಕದಲ್ಲಿ
5 ಕೆ.ಜಿ. ಅಕ್ಕಿ 2 ಕೆ.ಜಿ. ರಾಗಿ ನೀಡಬೇಕು.

*ತೊಗರಿಬೇಳೆಗೆ ರಿಯಾಯಿತಿ ದರ ₹ 38 ನಿಗದಿಪಡಿಸಿದ್ದರೂ ಚಿಲ್ಲರೆ ಇಲ್ಲವೆಂದು ₹ 40 ವಸೂಲಿ ಮಾಡಲಾಗುತ್ತಿದೆ. ಸರ್ಕಾರವೇ
₹ 40 ದರ ವಿಧಿಸಿದರೆ ₹ 20 ಕೋಟಿ ಉಳಿತಾಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT