ಸೋಮವಾರ, ಜನವರಿ 27, 2020
27 °C

ಆರ್ಥಿಕವಾಗಿ ದಿವಾಳಿಯಾಗಿರುವ ಕೇಂದ್ರ ರಾಜ್ಯಕ್ಕೇನು ಕೊಡುತ್ತದೆ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೇಂದ್ರ ಸರ್ಕಾರವೇ ಆರ್ಥಿಕವಾಗಿ ದಿವಾಳಿಯಾಗಿದೆ; ಇನ್ನೂ ರಾಜ್ಯ ಸರ್ಕಾರಗಳಿಗೆ ಏನು ಪರಿಹಾರ ಕೊಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಗುರುವಾರ ಬಾದಾಮಿಗೆ ತೆರಳುವ ಮುನ್ನ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ನೆರೆ ಹಾಗೂ ಪ್ರವಾಹ ಬಂದು ಐದು ತಿಂಗಳಾದರೂ ರಾಜ್ಯ ಸರ್ಕಾರಕ್ಕೆ ಕೇಂದ್ರ ಇನ್ನೂ ಪರಿಹಾರದ ಹಣ ನೀಡಿಲ್ಲ. ಎರಡನೇ ಬಾರಿ ₹669.75 ಕೋಟಿ ಮಾತ್ರ ನೀಡಲಾಗಿದ್ದು, ಒಟ್ಟು ₹1869 ಕೋಟಿ ಮಾತ್ರ ಪರಿಹಾರ ಘೋಷಣೆಯಾಗಿದೆ. ಆದರೆ, ಇನ್ನೂ ಹಣ ಬಂದಿಲ್ಲ’ ಎಂದರು.

‘ಪ್ರವಾಹದಿಂದ ರಾಜ್ಯದಲ್ಲಿ ₹36 ಸಾವಿರ ಕೋಟಿ ಹಾನಿಯಾಗಿದೆ ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ಕೊಟ್ಟಿದೆ. ಮುಖ್ಯಮಂತ್ರಿ ಯಡಿಯೂರಪ್ಪ ₹50 ಸಾವಿರ ಕೋಟಿ ಹಾನಿ ಎಂದು ಹೇಳುತ್ತಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿರುವಾಗ ಕೇಂದ್ರ ಈಗ ಘೋಷಿಸಿರುವ ₹669.75 ಕೋಟಿ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಿದೆ’ ಎಂದು ಟೀಕಿಸಿದರು.

‘ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಹಿಂದೆ ರಾಜ್ಯದ 45 ತಾಲ್ಲೂಕುಗಳ ಬರಪೀಡಿತ ಎಂದು ಘೋಷಿಸಲಾಗಿತ್ತು. ಬರ ತಾಲ್ಲೂಕುಗಳಿಗೆ ಇನ್ನೂ ಹಣ ಬಂದಿಲ್ಲ. ನರೇಗಾ ಯೋಜನೆ, ಕುಡಿಯವ ನೀರಿಗೂ ಕೇಂದ್ರದಿಂದ ಹಣ ಬಂದಿಲ್ಲ. ಕೇಂದ್ರದಿಂದ ಬರಬೇಕಿರುವ ವಿವಿಧ ತೆರಿಗೆಗಳಲ್ಲಿ ರಾಜ್ಯದ ಪಾಲು ಇನ್ನೂ ಕೊಟ್ಟಿಲ್ಲ. ಕೇಂದ್ರ ಆರ್ಥಿಕವಾಗಿ ದಿವಾಳಿಯಾಗಿದೆ ಎನ್ನುವುದನ್ನು ಇವೆಲ್ಲವೂ ಸಾಕ್ಷಿ’ ಎಂದರು.

‘2020–21ರ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರಗಳಿಗೆ ಕೊಡಬೇಕಾದ ವಿವಿಧ ತೆರಿಗೆಯ ಹಣವನ್ನು ₹ 5 ಸಾವಿರ ಕೋಟಿ ಕಡಿಮೆ ಮಾಡಲಾಗುತ್ತಿದೆ ಎನ್ನುವ ಸುದ್ದಿ ಬಂದಿದೆ. ಈ ಹಣ ಕಡಿಮೆಯಾದರೆ ಅಭಿವೃದ್ಧಿ ಕೆಲಸಗಳು ನಿಂತುಹೋಗುತ್ತವೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕೆರೂರಿನಲ್ಲಿ ಏತ ನೀರಾವರಿ ಯೋಜನೆ ಆರಂಭಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಹಣಕಾಸು ಇಲಾಖೆ ಹಣ ನೀಡದ ಕಾರಣ ಕಾಮಗಾರಿಯೇ ಆರಂಭವಾಗಿಲ್ಲ’ ಎಂದರು.

ಪ್ರಜಾಪ್ರಭುತ್ವ ಹತ್ತಿಕ್ಕಲಾಗಿದೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿರುವವರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಪ್ರಜಾಪ್ರಭುತ್ವವನ್ನು ಹತ್ತಿಕ್ಕಲಾಗಿದೆ ಎಂದು  ಸಿದ್ದರಾಮಯ್ಯ ದೂರಿದರು.

ಬಿಜೆಪಿ ಸಂವಿಧಾನಕ್ಕೆ ವಿರುದ್ಧವಾಗಿ ಕಾನೂನು ಮಾಡಿ, ಜನರನ್ನು ನಂಬಿಸುವ ಪ್ರಯತ್ನ ಮಾಡುತ್ತಿದೆ. ಧರ್ಮದ ಆಧಾರದ ಮೇಲೆ ತಿದ್ದುಪಡಿ ಕಾಯ್ದೆ ಮಾಡಿದ್ದು, ಇದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದರು.

‘ಈಗ ಯಾರೂ ಸ್ವತಂತ್ರವಾಗಿ ಏನನ್ನೂ ಹೇಳುವಂತಿಲ್ಲ. ಯಾರೂ ತಮ್ಮ ಅಭಿಪ್ರಾಯ ಮತ್ತು ಸತ್ಯ ಮಾತನಾಡುವಂತಿಲ್ಲ. ಬಿಜೆಪಿಯವರು ಭಯದ ವಾತಾವರಣ ಉಂಟು ಮಾಡಿದ್ದಾರೆ. ಜೆಎನ್‌ಯುನಲ್ಲಿ ನಡೆದ ಘಟನೆ ಸರ್ಕಾರಿ ಪ್ರಾಯೋಜಿತ ದಾಳಿ’ ಎಂದು ಆರೋಪಿಸಿದರು.

‘ಜೆಎನ್‌ಯುನಲ್ಲಿ ಘಟನೆ ನಡೆದು 72 ಗಂಟೆಯಾದರೂ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ದೆಹಲಿ ಪೊಲೀಸರು ಕೇಂದ್ರ ಸರ್ಕಾರದ ಗೃಹ ಇಲಾಖೆ ಮತ್ತು ಅಮಿತ್‌ ಶಾ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಪ್ರಾಯೋಜಿತ ದಾಳಿ ಅಲ್ಲದಿದ್ದರೇ ಇನ್ನೂ ಯಾಕೆ ಬಂಧಿಸಿಲ್ಲ’ ಎಂದು ಪ್ರಶ್ನಿಸಿದರು.

ಮಹದಾಯಿ ಸಭೆ; ವಸ್ತು ಸ್ಥಿತಿ ಚರ್ಚೆಯಾಗಿಲ್ಲ

ಮಹದಾಯಿ ವಿವಾದ ಪರಿಹರಿಸಲು ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆದ ಜನ ಪ್ರತಿನಿಧಿಗಳ ಪಕ್ಷಾತೀತ ಸಭೆಯ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ‘ಸಭೆಯಲ್ಲಿ ಏನು ಚರ್ಚೆಯಾಗಬೇಕಿತ್ತೊ, ಅದು ಚರ್ಚೆಯಾಗಿಲ್ಲ. ಬಿಜೆಪಿಯವರು ಕೇಂದ್ರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ’ ಎಂದರು.

‘ಮೂರೂ ರಾಜ್ಯಗಳ ಮುಖಂಡರನ್ನು ಕರೆದು ಪ್ರಧಾನಿ ಮಾತುಕತೆ ನಡೆಸಿದ್ದರೆ ಈ ವೇಳೆಗೆ ಸಮಸ್ಯೆ ಪರಿಹಾರವಾಗುತ್ತಿತ್ತು. ಮೋದಿ ಒಂದೂ ದಿನ ಆ ಕೆಲಸ ಮಾಡಲಿಲ್ಲ. ಯಡಿಯೂರಪ್ಪ ಮಹದಾಯಿ ವಿಷಯದಲ್ಲಿ ಪದೇ ಪದೇ ಹೇಳುವ ಸುಳ್ಳುಗಳಿಗೆ ಜಗದೀಶ ಶೆಟ್ಟರ್‌ ತಾಳ ಹಾಕುತ್ತಿದ್ದಾರೆ. ಪ್ರಹ್ಲಾದ ಜೋಶಿ ತಮಟೆ ಹೊಡೆಯುತ್ತಿದ್ದಾರೆ’ ಎಂದು ಟೀಕಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು